ಪಟಾಕಿ ಹಚ್ಚುವಾಗ ಜಾಗರೂಕತೆ ವಹಿಸಿ

ದಾವಣಗೆರೆ:

      ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಸಂದರ್ಭದಲ್ಲಿ ಜಾಗರೂಕತೆ ವಹಿಸಬೇಕೆಂದು ಪಾಲಿಕೆಯ ಮೇಯರ್ ಶೋಭಾ ಪಲ್ಲಾಗಟ್ಟೆ ಕರೆ ನೀಡಿದರು.

       ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪ್ರೌಢಶಾಲಾ ಮೈದಾನದಲ್ಲಿ ಸೋಮವಾರದಿಂದ ಪಟಾಕಿ ವರ್ತಕರ ಹಾಗೂ ಬಳಕೆದಾರ ಸಂಘದಿಂದ ಆರಂಭವಾಗಿರುವ ಪಟಾಕಿ ಮಾರಾಟ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳಕಿನ ಹಬ್ಬ ದೀಪಾವಳಿ ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.

      ಆದ್ದರಿಂದ ಮಕ್ಕಳು ಪಟಾಕಿ ಹಚ್ಚುವ ಸಂದರ್ಭದಲ್ಲಿ ಯಾವುದೇ ಅನಾಹುತವಾಗದಂತೆ ಪೋಷಕರು ಜಾಗರೂಕತೆ ವಹಿಸಿ ಸುರಕ್ಷಾ ದೀಪಾವಳಿ ಆಚರಿಸಬೇಕೆಂದು ಕಿವಿಮಾತು ಹೇಳಿದರು.

      ಹಬ್ಬಗಳು ನಮಗೆ ಸಂಭ್ರಮ, ಸಂತೋಷ ನೀಡಬೇಕೇ ಹೊರತು, ಅನಾಹುತಕ್ಕೆ ಎಡೆ ಮಾಡಿಕೊಡಬಾರದು. ಆದರೆ, ದೀಪಾವಳಿ ಹಬ್ಬವು ಪಟಾಕಿ ಸಿಡಿಸುವ ಹಬ್ಬವೂ ಆಗಿರುವುದರಿಂದ ಎಚ್ಚರ ವಹಿಸುವ ಅಗತ್ಯವಿದೆ. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿಗೆ ಬೆಳಕಾಗಲಿ, ಅಂಧಕಾರ, ಅಜ್ಞಾನ ಹೊಡೆದೊಡಿಸಲಿ, ಸುಜ್ಞಾನ ಬೆಳೆಸಲಿ ಶುಭ ಹಾರೈಸಿದರು.

        ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸಂತೋಷದ ಜೊತೆಗೆ ಅಪಾಯದ ಬಗ್ಗೆಯೂ ಸಾರ್ವಜನಿಕರು ಎಚ್ಚರ ವಹಿಸಬೇಕು. ಹಿತ-ಮಿತವಾಗಿ ಪಟಾಕಿ ಸಿಡಿಸಿ, ವಾತಾವರಣ ಕಲುಷಿತವಾಗದಂತೆ ಕಾಳಜಿ ವಹಿಸಿ ಪರಿಸರ ಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸಬೇಕೆಂದು ಸಲಹೆ ನೀಡಿದರು.

      ಶಾಸಕರುಗಳಾದ ಎಸ್.ಎ.ರವೀಂದ್ರನಾಥ, ಪ್ರೊ.ಎನ್.ಲಿಂಗಣ್ಣ ಅವರರುಗಳು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಪಟಾಕಿ ಮಳಿಗೆಯನ್ನು ಉದ್ಘಾಟಿಸಿ, ಯಾರಿಗೂ ತೊಂದರೆ ಆಗದಂತೆ, ಎಚ್ಚರಿಕೆಯಿಂದ ದೀಪಾವಳಿ ಆಚರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಡಿ.ಎಸ್ ಸಿದ್ದಣ್ಣ, ಸಂಘದ ಕಾರ್ಯದರ್ಶಿ ಶಿವಾನಂದ್, ವೀರೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link