ನ.09 ರಂದು ನೋಟು ಅಮಾನೀಕರಣದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ತುಮಕೂರು:

       ಅಖಿಲಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಸೂಚನೆ ಮೇರೆಗೆ ಎನ್.ಡಿ.ಎ. ಸರಕಾರ ಜಾರಿಗೆ ತಂದ ಜನವಿರೋಧಿ ನೋಟು ಅಮಾನ್ಯೀಕರಣ ಜಾರಿಗೆ ಬಂದು ಎರಡು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಕಪ್ಪು ಹಣಕ್ಕೆ ಕಡಿವಾಣ, ಉಗ್ರರ ನಿಯಂತ್ರಣದ ಹೆಸರಿನಲ್ಲಿ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಜಾರಿಗೆ ತಂದ ಈ ಜನವಿರೋಧಿ ನೀತಿಯಿಂದಾಗಿ ದೇಶದಾದ್ಯಂತಹ ಲಕ್ಷಾಂತರ ಜನರು ನೋವು ಅನುಭವಿಸುವಂತಾಯಿತು.

        ಕೇವಲ 50 ದಿನ ಸಮಯ ನೀಡಿ ಎಂದು ಕೇಳಿದ್ದ ಪ್ರಧಾನಿ ಮೋದಿ ಅಂದು ಉಂಟಾದ ಸಮಸ್ಯೆಗೆ 2 ವರ್ಷ ಕಳೆದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.2019ರ ಚುನಾವಣೆಯಲ್ಲಿ ಇದು ಪ್ರಮುಖ ವಿಚಾರವಾಗುವ ಹಿನ್ನೆಲೆಯಲ್ಲಿ ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಡೀ ರಾಜ್ಯದಲ್ಲಿ ನವೆಂಬರ್ 9ರ ಶುಕ್ರವಾರ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಬೇಕೆಂಬ ಸೂಚನೆಯನ್ನು ಎಐಸಿಸಿ ಹೊರಡಿಸಿದ್ದು,ಇದನ್ನು ಚಾಚು ತಪ್ಪದೆ ಪಾಲಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಗೆ ಸ್ಪಷ್ಟ ಹೊರಡಿಸಲಾಗಿದೆ ಎಂದಿದ್ದಾರೆ.

       ನವೆಂಬರ್ 9ರ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ನೋಟು ಅಮಾನೀಕರಣದಿಂದ ಆಗಿರುವ ವೈಫಲ್ಯಗಳನ್ನು ಸಾರುವ ನಾಮಫಲಕಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, ಸ್ಥಳೀಯ ಶಾಸಕರು, 2018ರ ವಿಧಾನಸಭೆಗೆ ಪಕ್ಷದಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು, ಸ್ಥಳಿಯ ಸಂಸ್ಥೆಯ ಚುನಾಯಿತಿ ಪ್ರತಿನಿಧಿಗಳು,ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ವಿವಿಧ ಸಮಿತಿಗಳ ಪದಾಧಿಕಾರಿಗಳು,ಮುಂಚೂಣಿ ಘಟಕಗಳ ಪದಾಧಿಕಾರಿಗಳು ತಪ್ಪದೇ ಭಾಗವಹಿಸಲು ಕೋರಲಾಗಿದೆ.

       ಅನೇಕ ಅರ್ಥಿಕ ತಜ್ಞರ ಸಲಹೆಯನ್ನು ಧಿಕ್ಕರಿಸಿ, ಹಣಕಾಸು ಸಚಿವರ ಗಮನಕ್ಕೂ ತಾರದೆ, ಜನತೆಯನ್ನು ಕತ್ತಲೆಯಲ್ಲಿಟ್ಟು ಜಾರಿಗೆ ತಂದ ನೋಟು ಅಮಾನೀಕರಣದಿಂದಾಗಿ ತಮ್ಮ ಬಳಿ ಇರುವ ಅಲ್ಪಸ್ವಲ್ಪ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಜನಸಾಮಾನ್ಯರು ಕ್ಯೂ ನಿಂತು ಬಳಲಿ,ದೇಶದಾದ್ಯಂತ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಆದರೆ ಸರಕಾರ ಕನಿಷ್ಠ ಕಾಳಜಿಯಿಂದಾದರೂ ಪರಿಹಾರ ನೀಡಿಲಿಲ್ಲ. ಆರ್.ಬಿ.ಐ ಪ್ರಕಾರವೇ ಶೇ99ರಷ್ಟು ಬಳಕೆಯಲ್ಲಿದ್ದ ಹಣ ವಾಪಸ್ ಬಂದಿದೆ.

       ಆದರೆ ಭಯೋತ್ಪಾಧನೆಯಾಗಲಿ, ಕಪ್ಪ ಹಣದ ಚಲಾವಣೆಯಾಗಲಿ ನಿಂತಿಲ್ಲ. ಬದಲಾಗಿ ಬ್ಯಾಂಕಿನಿಂದ ಸಾಲ ಪಡೆದ ಉದ್ಯಮಿಗಳು ಮಾತ್ರ ದೇಶ ಬಿಡುತಿದ್ದಾರೆ.ಇದರ ಬಗ್ಗೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ದಿರುವುದು ವಿಪರ್ಯಾಸ.ಈ ಎಲ್ಲಾ ಅಂಶಗಳು ಪ್ರತಿಭಟನೆಯ ವೇಳೆ ಜನಸಾಮಾನ್ಯರಿಗೆ ಮನವರಿಕೆ ಯಾಗುವಂತೆ ಕಾರ್ಯಕರ್ತರು ಮಾಡಬೇಕೆಂದು ಮುರುಳೀಧರ ಹಾಲಪ್ಪ ಸಲಹೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link