ಚಳ್ಳಕೆರೆ
ಈ ದೇಶದ ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಸಾಹಸ ಮತ್ತು ಶೌರ್ಯದ ಬಗ್ಗೆ ಅನೇಕ ರೀತಿಯ ದಾಖಲೆಗಳು ಲಭ್ಯವಾಗುತ್ತವೆ. ಟಿಪ್ಪು ಸುಲ್ತಾನ್ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಟಿಪ್ಪು ಸುಲ್ತಾನನ ಬಗ್ಗೆ ವಿರೋಧ ಮಾಡುವವರು ಸಹ ತಿಳಿದುಕೊಂಡು ವಿರೋಧಿಸಬೇಕು. ಯಾವುದೇ ರಾಜಕೀಯ ಉದ್ದೇಶದಿಂದ ಟಿಪ್ಪು ಜಯಂತಿ ವಿರೋಧ ಸಲ್ಲದು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪರೋಕ್ಷವಾಗಿ ಟಿಪ್ಪು ವಿರುದ್ದ ನಡೆಯುತ್ತಿರುವ ಬಿಜೆಪಿ ಹೋರಾಟಕ್ಕೆ ತಮ್ಮ ಅಸಮದಾನವನ್ನು ವ್ಯಕ್ತ ಪಡಿಸಿದರು.
ಅವರು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಮುಸ್ಲಿಂ ಸಂಘಟನೆಗಳು ಏರ್ಪಡಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವಮೂಲಕ ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷ ಸಾಮ್ರಾಜ್ಯದ ವಿರುದ್ದ ಈ ನಾಡಿನ ಅನೇಕ ಧೀಮಂತ ನಾಯಕರು ಉಗ್ರ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ ರೀತಿಯಲ್ಲೇ ಟಿಪ್ಪು ಸುಲ್ತಾನ್ ಸಹ ತನ್ನ ಪ್ರಾಂತದ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಬ್ರಿಟೀಷರಲ್ಲಿ ಒತ್ತೆ ಇಟ್ಟು ಹೋರಾಟ ನಡೆಸಿದ ಮಹಾನ್ ದೇಶ ಪ್ರೇಮಿಯಾಗಿದ್ಧಾನೆ.
ಆದರೆ, ಕೆಲವು ರಾಜಕೀಯ ಶಕ್ತಿಗಳು ಈ ಬಗ್ಗೆ ಅನಗತ್ಯ ಅಪಪ್ರಚಾರ ಮಾಡುವುದು ಸರಿಯಲ್ಲ. ವಿಶೇಷವಾಗಿ ಚಿತ್ರದುರ್ಗದ ವೀರಮದಕರಿ ನಾಯಕನನ್ನು ಟಿಪ್ಪು ಜೈಲಿಗೆ ಕಳುಹಿಸಿದ ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಹ ಹೋರಾಟ ನಡೆಯುತ್ತಿದೆ. ಆದರೆ, ನೈಜ್ಯ ಸ್ಥಿತಿಯನ್ನು ಅರಿತುಕೊಳ್ಳುವ ವ್ಯವಸ್ಥೆಯಾಗಬೇಕು. ರಾಜ್ಯದ ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ಹಬ್ಬದ ಸಾಲಿಗೆ ಸೇರ್ಪಡಿಸುವ ಮೂಲಕ ಎಲ್ಲರೂ ಟಿಪ್ಪು ಸುಲ್ತಾನನ ಪರಾಕ್ರಮಗಳ ಬಗ್ಗೆ ತಿಳಿಯಲು ಸಾಧ್ಯವಾಗಿದೆ ಎಂದರು.
ಈ ದೇಶದ ಇತಿಹಾಸ ತನ್ನದೇಯಾದ ವೈಶಿಷ್ಠ್ಯತೆಯನ್ನು ಹೊಂದಿದೆ. ಕೆಲವೊಮ್ಮೆ ಮಾತ್ರ ವೈಯಕ್ತಿಕ ಹಿತಾಸಕ್ತಿಗಳಿಗೆ ಈಡಾದ ಕೆಲವರು ಇತಿಹಾಸವನ್ನೇ ತಿರುಚುವ ಕಾರ್ಯಕ್ಕೆ ಮುಂದಾಗಿದ್ಧಾರೆ. ಆದರೆ, ನೈಜ್ಯ ಘಟನೆಗಳು ಮತ್ತು ವಾಸ್ತವ ಸ್ಥಿತಿಯನ್ನು ಬಿಂಬಿಸುವ ಈ ಇತಿಹಾಸವನ್ನು ಯಾವುದೇ ಕಾರಣಕ್ಕೂ ತಿರುಚದಂತೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದರು.
ಉಪನ್ಯಾಸ ನೀಡಿದ ರೈತ ಮುಖಂಡ ಸೋಮುಗುದ್ದು ರಂಗಸ್ವಾಮಿ ಮಾತನಾಡಿ, ರಾಜ್ಯದ ಮೈಸೂರು, ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಟಿಪ್ಪು ಸುಲ್ತಾನ್ ಮದಕರಿ ನಾಯಕನನ್ನು ಬಂಧಿಸಿ ಜೈಲಿನಲ್ಲಿಟ್ಟಾನೆಂಬ ಊಹಾಪೋಹದ ಸುದ್ದಿಗಳೇ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಲು ಕಾರಣವಾಗಿದೆ. ಆದರೆ, ನಮ್ಮ ಚಿತ್ರದುರ್ಗ ಇತಿಹಾಸ ಹೇಳುವಂತೆ ಎಲ್ಲಿಯೂ ಟಿಪ್ಪು ಮದಕರಿನಾಯಕನನ್ನು ಜೈಲಿನಟ್ಟಿರುವ ಬಗ್ಗೆ ಉಲ್ಲೇಖವಿಲ್ಲವೆಂದರು. ಇಲ್ಲಿನ ಮುಗ್ಧ ಜನರನ್ನು ಬ್ರಿಟೀಷರು ಅವಮಾನಕರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಇದರ ವಿರುದ್ದ ಹೋರಾಟ ನಡೆಸಿದ ಮೊದಲಿಗರಲ್ಲಿ ಟಿಪ್ಪು ಸುಲ್ತಾನ್ ಒಬ್ಬರಾಗಿದ್ಧಾರೆಂದರು. ಚರಿತ್ರೆಯಲ್ಲಿ ಯಾವುದೇ ತಂದೆ ತನ್ನ ಮಕ್ಕಳನ್ನೇ ಸಮಾಜದ ಹಿತಕ್ಕಾಗಿ ಒತ್ತೆ ಇಟ್ಟ ನಿದರ್ಶನಗಳೇ ಇಲ್ಲ. ಆದರೆ, ಈ ಒಂದು ಮಹಾನ್ ಕಾರ್ಯ ಟಿಪ್ಪು ಸುಲ್ತಾನ್ನಿಂದ ಮಾತ್ರ ಆಗಿದ್ದು, ಇದನ್ನು ಯಾರೂ ಮರೆಯಬಾರದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ರಾಜ್ಯದ ಮೈಸೂರು ಪ್ರಾಂತ್ಯದ ಧೀಮಂತ ಅರಸನಾಗಿ ಆಡಳಿತ ನಡೆಸಿದ ಟಿಪ್ಪು ಸುಲ್ತಾನ್ ಶ್ರೀರಂಗ ಪಟ್ಟಣ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ನಿರ್ಮಾಣವನ್ನು ಮಾಡಿದ್ಧಾನೆ. ರಾಕೇಟ್ ತಂತ್ರ ಜ್ಞಾನವನ್ನು ಈ ನಾಡಿಗೆ ತಂದ ಕೀರ್ತಿ ಟಿಪ್ಪು ಸುಲ್ತಾನದ್ದು ಎಂದರು. ಸಮಾಜ ಸೇವಕ ಎಸ್.ಎಚ್.ಸೈಯದ್ ಮಾತನಾಡಿ, ಕೆಲವು ಆಂಗ್ಲ ಲೇಖಕರು ಟಿಪ್ಪು ಸುಲ್ತಾನ್ ವಿಷಯದಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ವೈಮನಸ್ಸುಗಳಿಗೆ ಕಾರಣವಾಗಿದ್ಧಾರೆ. ಆದರೆ, ಪ್ರತಿಯೊಬ್ಬರೂ ಇತಿಹಾಸವನ್ನು ಅರಿತಾಗ ಮಾತ್ರ ಸತ್ಯದ ಅರಿವು ಆಗುತ್ತದೆ ಎಂದರು.
ಚಳ್ಳಕೆರೆ ನಗರದ ಯಾವುದಾದರೂ ಸ್ಥಳದಲ್ಲಿ ಹಜರತ್ ಟಿಪ್ಪು ಸುಲ್ತಾನ್ ವೃತ್ತ ನಿರ್ಮಾಣ ಮಾಡಬೇಕೆಂದು ಮನವಿ ಅರ್ಪಿಸಲಾಯಿತು. ಟಿಪ್ಪು ವೇಷದಲ್ಲಿ ಪಟೇಲ್, ಹೈದರಾಲಿ ವೇಷದಲ್ಲಿ ಕರೀಂ ಜನರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಟಿಪ್ಪು ಅಭಿಮಾನಿ ಮಹಾವೇದಿಕೆ ಅಧ್ಯಕ್ಷ ಪಿ.ಬಷೀರ್ ಹಯಾತ್, ಉಪಾಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ, ಕೆ.ಜಿ.ಎನ್.ಮುಜೀಬುಲ್ಲಾ, ಡಿ.ಕೆ.ಮಹಮ್ಮದ್ ಅನ್ವರ್ ಮಾಸ್ಟರ್, ಖಾಸಿಂ, ಯಾಸೀನ್ ಮುಂತಾದವರನ್ನು ಅಭಿನಂದಿಸಲಾಯಿತು. ಮುತುವಲ್ಲಿ ಅತಿಕೂರ್ ರೆಹಮಾನ್, ಜುಬೇರ್, ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷ ಎನ್.ತಿಮ್ಮಣ್ಣ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬಿಇಒ ವೆಂಕಟೇಶಪ್ಪ, ಇಒ ಈಶ್ವರಪ್ರಸಾದ್, ನಗಸರಭಾ ಸದಸ್ಯರಾದ ಸಿ.ಕವಿತಾ, ಕೆ.ಸುಜಾತ, ಸುಮಕ್ಕ, ಎಂ.ಜೆ.ರಾಘವೇಂದ್ರ, ಎಚ್.ಸಿ.ವಿರೂಪಾಕ್ಷ, ರಮೇಶ್ಗೌಡ, ಕೆ.ವೀರಭದ್ರಯ್ಯ, ಜೈತುಂಬಿ, ಖಾದ್ರಿ, ಎಸ್.ಮುಜೀಬ್, ಫರೀದ್ಖಾನ್, ನಭಿ, ಕೆ.ಸೈಪುಲ್ಲಾ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ