ಹೊನ್ನಾಳಿ:
ಪಟ್ಟಣದ ದುರ್ಗಿಗುಡಿ ಬಡಾವಣೆಯ 3ನೇ ಕ್ರಾಸ್‍ನ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಜನ-ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆಗೆ ಹಾಕಿರುವ ಜೆಲ್ಲಿ ಕಲ್ಲುಗಳು ಕಿತ್ತು ಬಂದಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಅನೇಕ ಬೈಕ್‍ಗಳು ಸ್ಕಿಡ್ ಆಗಿ ಬಿದ್ದು ಸವಾರರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವಾಗ ವಾಹನಗಳ ಗಾಲಿಗಳಿಗೆ ಸಿಲುಕುವ ಜೆಲ್ಲಿ ಕಲ್ಲುಗಳು ಸಿಡಿದು ಸಾರ್ವಜನಿಕರ ಕಾಲಿಗೆ ಪೆಟ್ಟಾಗಿರುವ ಘಟನೆಗಳೂ ನಡೆದಿವೆ.
ಇಷ್ಟಾದರೂ ಕ್ಷೇತ್ರದ ಜನಪ್ರತಿನಿಧಿಗಳು, ವಾರ್ಡ್‍ನ ಪಪಂ ಸದಸ್ಯರು, ಪಪಂ ಮುಖ್ಯಾಧಿಕಾರಿಗಳು ಗಮನಹರಿಸದಿರುವುದು ಸೋಜಿಗದ ಸಂಗತಿಯಾಗಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಈಗಾಗಲೇ ಒಂಭತ್ತು ತಿಂಗಳು ಕಳೆದರೂ ಇನ್ನೂ ಮುಕ್ತಾಯವಾಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ.
ಕಳೆದ ಬಾರಿಯ ಪಪಂ ಆಡಳಿತಾವಧಿಯಲ್ಲಿ ಐದು ವರ್ಷಗಳ ಕಾಲ ಪಪಂ ಸದಸ್ಯರಾಗಿದ್ದವರು ಏನೂ ಕೆಲಸ ಮಾಡಿಸಿರಲಿಲ್ಲ. ಈ ಬಾರಿ ಪಪಂ ಚುನಾವಣೆಗೆ ಸ್ಪರ್ಧಿಸಿದವರು ನಮ್ಮನ್ನು ಆಯ್ಕೆ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳನ್ನೂ ಶೀಘ್ರವೇ ಮಾಡಿಸಿಕೊಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಆದರೆ, ಸದಸ್ಯರಾಗಿ ಆಯ್ಕೆಯಾದ ಮೇಲೆ ಅವರು ವಾರ್ಡನ್ನೇ ಮರೆತಂತೆ ತೋರುತ್ತಿದೆ.
ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶೀಘ್ರವೇ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ