ದಾವಣಗೆರೆ:
ಮಾಟ, ಮಂತ್ರ ಮಾಡಿಸೋದ್ರಲ್ಲಿ ಹಾಗೂ ಕಣ್ಣೀರು ಹಾಕೋದ್ರಲ್ಲಿ ಹೆಚ್.ಡಿ.ದೇವೇಗೌಡ ಮತ್ತು ಮಕ್ಕಳಿಗೆ ಯಾವುದಾದರೂ ವಿಶ್ವ ವಿದ್ಯಾನಿಲಯದಿಂದ ಡಾಕ್ಟ್ರೇಟ್ ಕೊಡಿಸಬೇಕೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡ ಮತ್ತು ಮಕ್ಕಳಾದ ಕುಮಾರಸ್ವಾಮಿ ಹಾಗೂ ರೇವಣ್ಣ ಅವರುಗಳಿಗೆ ಮಾಟ, ಮಂತ್ರ ಅಂದರೇನೇ ಅಚ್ಚುಮೆಚ್ಚು. ಯಾವಾಗ ನೋಡಿದರು ಅವರ ಕೈಯಲ್ಲಿ ಲಿಂಬೆ ಹಣ್ಣು ಇದ್ದೇ ಇರುತ್ತದೆ. ಅದರಲ್ಲೂ ಕಣ್ಣೀರು ಹಾಕೋದ್ರಲ್ಲಿ ಅಂತು ನಿಸ್ಸೀಮರು ಎಂದು ಟೀಕಿಸಿದರು.
ಯಾರೋ ಜ್ಯೋತಿಷ್ಯಿ ಒಬ್ಬರು ಅದೇ ಕ್ವಾಟ್ರಸ್‍ನಲ್ಲಿದ್ದರೇ ಮಾತ್ರ ಅಧಿಕಾರ ಉಳಿಯುತ್ತೆ. ಅಲ್ಲಿಯ ವರೆಗೂ ನೀವು ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಬಾರದು ಎಂಬುದಾಗಿ ಹೆಚ್.ಡಿ.ರೇವಣ್ಣನವರಿಗೆ ಹೇಳಿದ್ದರಂತೆ. ಹೀಗಾಗಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅವರು ನಿತ್ಯ ಹಾಸನದಿಂದ ಓಡಾಡಿಕೊಂಡಿದ್ದರು. ಜ್ಯೋತಿಷ್ಯಿ ಒಬ್ಬರ ಮಾತು ಕೇಳಿ, ಆ ಕ್ವಾಟ್ರಸ್‍ನಲ್ಲಿ ನೆಲೆಸಿದ್ದ ಮಂತ್ರಿಯೊಬ್ಬರನ್ನು ಏಕಾಏಕಿ ಖಾಲಿ ಮಾಡಿಸಿ, ಆ ಕ್ವಾಟ್ರಸ್ ಅನ್ನು ನವೀಕರಣಗೊಳಿಸಿದ್ದರು. ಈ ಎಲ್ಲರಿಗೂ ಮಾಟ, ಮಂತ್ರ, ಕಣ್ಣೀರು ಹಾಕುವುದು ಬಿಟ್ಟರೆ, ಖಾತೆಯ ಮಹತ್ವ ಹಾಗೂ ಕಾನೂನಿನ ಪರಿವೇ ಇಲ್ಲ ಎಂದು ಆರೋಪಿಸಿದರು.
ಬಿಜೆಪಿಗೆ ಆಹ್ವಾನಿಸಿಲ್ಲ:
ಇನ್ನೂ ಇಲ್ಲಿಯ ಹಿರಿಯ ಶಾಸಕರೊಬ್ಬರು ಬಿಜೆಪಿಯವರು ತಮಗೆ ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ, ಆ ಪಕ್ಷಕ್ಕೆ ಕರೆಯುತ್ತಿದ್ದಾರೆಂದು ಹೇಳಿದ್ದಾರೆ. ಏಕೆ ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಮಾಡಲು ಶಾಸಕರಿಲ್ಲವೇ?. ಬಿಜೆಪಿ ಯಾರಿಗೂ ಆಹ್ವಾನ ನೀಡಿಲ್ಲ. ಇವರು ಸುಳ್ಳು ಹೇಳುತ್ತಿದ್ದಾರೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಹೆಸರು ಉಲ್ಲೇಖಿಸದೆಯೇ ಟೀಕಿಸಿದರು.