ತುಮಕೂರು
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂದು ರಾಜಕೀಯ ಪಕ್ಷಗಳು ಜಾತಿ ಸಮ್ಮೇಳನಗಳನ್ನು ನಡೆಸುತ್ತಿವೆ. ಇಲ್ಲಿ ಕೇವಲ ಜಾತಿಗೆ ಸಂಬಂಧಿಸಿದ ವಿಚಾರಗಳು ಮಾತ್ರ ಚರ್ಚೆಗೆ ಬರುತ್ತವೆಯೇ ಹೊರತು ಜನತೆಯ ಮೂಲಭೂತ ಸಮಸ್ಯೆಗಳು ಚರ್ಚೆಗೆ ಬರುವುದಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸಹ ಜನತೆಯ ಮೂಲ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ರಾಜಕೀಯ ಪಕ್ಷಗಳು ಗಮನ ನೀಡದೆ ಕೇವಲ ಜಾತಿಗಳ ಓಟ್ಗಳಿಕೆಗೆ ಕೇಂದ್ರಿಕೃತವಾಗಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಆತಂಕ ವ್ಯಕ್ತಪಡಿಸಿದರು.
ಅವರು ನಗರದ ಜನಚಳುವಳಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ 2ನೇ ತುಮಕೂರು ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದ ಮಕ್ಕಳನ್ನು ಪೋಷಣೆ ಮಾಡುವ ಅಂಗನವಾಡಿ ತಾಯಂದಿರಿಗೆ ಕನಿಷ್ಠ ಕೂಲಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ಸರ್ಕಾರ ಅಂಗನವಾಡಿಗಳನ್ನು ಬಲಿಷ್ಠಗೊಳಿಸುವ ಬದಲಾಗಿ ಐಸಿಡಿಎಸ್ ಯೋಜನೆಗೆ ನೀಡುವ ಅನುದಾನವನ್ನು ಪ್ರತಿವರ್ಷ ಕಡಿತ ಮಾಡುತ್ತ ಬರುತ್ತಿರುವುದು ಕೇಂದ್ರ ಸರ್ಕಾರ ಧೋರಣೆಯನ್ನು ತೋರುತ್ತದೆ ಎಂದ ಅವರು, ಪ್ರತಿಯೊಂದನ್ನು ಸಹ ಹೋರಾಟ ಮಾಡಿ ಪಡೆಯಬೇಕಾದ ಅನಿವಾರ್ಯತೆ ಬಂದಿದೆ.
ಈ ನಿಟ್ಟಿನಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಚರ್ಚಿಸಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನ ಮಹತ್ವದ್ದಾಗಿದ್ದು ತಮ್ಮ ಹಕ್ಕುಗಳಿಗಾಗಿ ನಾವು ಯಾವ ರೀತಿಯಾದ ಹೋರಾಟಗಳನ್ನು ನಡೆಸಬೇಕು ಎಂಬುದನ್ನು ಚರ್ಚಿಸಲು ನಡೆಯುವ ಸಮ್ಮೇಳನ ಇದಾಗಿದ್ದು ರಾಜಕೀಯ ಪಕ್ಷಗಳು ನಡೆಸುವ ಸಮ್ಮೇಳನಗಳಿಗೂ ನಾವು ನಡೆಸುವ ಸಮ್ಮೇಳನಗಳಿಗೂ ವ್ಯತ್ಯಾಸವಿದೆ ಎಂದ ಅವರು, ನೌಕರರು ಹೆಚ್ಚು ಹೆಚ್ಚು ಸಂಘಟಿತರಾಗಿ ಹೋರಾಟಗಳನ್ನು ನಡೆಸಬೇಕು ಎಂದು ಕರೆನೀಡಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ಬಾನು ಮಾತನಾಡಿ 350ರೂ. ಇದ್ದ ಅಂಗನವಾಡಿ ನೌಕರರ ಗೌರವಧನವನ್ನು 9500ರೂಗಳಿಗೆ ಹೆಚ್ಚಿಸಲು ಸಾಧ್ಯವಾಗಿದ್ದು ಹೋರಾಟದಿಂದ ಮಾತ್ರ ಸರ್ಕಾರಗಳು ಅಂಗನವಾಡಿ ನೌಕರರಿಂದ ಹಲವು ರೀತಿಯ ಕೆಲಸಗಳನ್ನು ಮಾಡಿಸಿಕೊಂಡು ನೌಕರರ ಗೌರವಧನ ವಿಷಯ ಬಂದಾಗ ಯಾವುದೇ ಪ್ರತಿಕ್ರಿಯೆಗಳನ್ನು ನೀಡದೆ ಮೌನವಹಿಸುತ್ತಿದ್ದವು.
ಆದರೆ ಸಂಘವು ಹಗಲು ರಾತ್ರಿಯ ಎನ್ನದೆ ಸಂಘಟಿತ ಹೋರಾಟವನ್ನು ನಡೆಸುವ ಮೂಲಕ ನಮ್ಮ ಹಕ್ಕುಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಮಹಿಳೆಯರು ಅಂಗನವಾಡಿ ನೌಕರರಿಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದ ಅವರು, ಸಂಘವು ಗೌರವಧನ ಹೆಚ್ಚಳ ಸೇರಿದಂತೆ ಸೇವಾ ಭದ್ರತೆ, ಖಾತ್ರಿ ಪಿಂಚಣಿಗಾಗಿ ಹಲವು ರೀತಿಯ ಹೋರಾಟಗಳನ್ನು ನಡೆಸುತ್ತಿದೆ. ಅಂಗನವಾಡಿಗಳನ್ನು ಭಲಿಷ್ಠಗೊಳಿಸಲು ಸರ್ಕಾರಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯಲ್ಲಿ ತಾಲ್ಲೂಕು ಮುಖಂಡರಾದ ಬಿ.ಕೆ.ಗೌರಮ್ಮ, ವಿನೋಧಮ್ಮ, ಜಬೀನಾ, ಸ್ವಭಾಗ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಜಾತ ಸ್ವಾಗತಿಸಿ, ನಾಗರತ್ನ ವಂದಿಸಿದರು.
ಸಮ್ಮೇಳನವು ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಿತು. ಅಧ್ಯಕ್ಷರಾಗಿ ಬಿ.ಕೆ.ಗೌರಮ್ಮ, ಕಾರ್ಯದರ್ಶಿಯಾಗಿ ವಿನೋಧಮ್ಮ ಎನ್.ಟಿ, ಖಜಾಂಚಿಯಾಗಿ ಜಬೀನಾ, ಉಪಾಧ್ಯಕ್ಷರುಗಳಾಗಿ ಶೋಭಾರಾಣಿ, ನಾಗರತ್ನ, ಸೌಭಾಗ್ಯ, ಸುಜಾತ ಹಾಗೂ ಸಹಕಾರ್ಯದರ್ಶಿಗಳಾಗಿ ಗೀತಾ, ಪುಷ್ಟಲತಾ, ಅಂಬುಜ, ರೀಹಾನತಬಸ್ಮು, ಮಂಜುಳ.ಎಸ್, ಲಕ್ಷ್ಮದೇವಿ, ಅಬೀಬಾ, ವನಜಾಕ್ಷಿ, ಕವಿತರವರುಗಳನ್ನು ಆಯ್ಕೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
