ದಾವಣಗೆರೆ:
ಮಕ್ಕಳ ಹಕ್ಕುಗಳ ಉಲ್ಲಂಘನೆ ಮನೆಗಳಿಂದಲೇ ಆರಂಭವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ಡಾನ್ ಬಾಸ್ಕೋ ಬಾಲ ಕಾರ್ಮಿಕರ ಶಾಲೆಯಲ್ಲಿ ಬುಧವಾರ ಡಾನ್ ಬಾಸ್ಕೋ ಬಾಲ ಕಾರ್ಮಿಕ ಮಿಷನ್, ಬೆಂಗಳೂರಿನ ಕೆಸಿಆರ್‍ಒ, ಸಿಆರ್‍ಟಿ ಸಂಸ್ಥೆ ಹಾಗೂ ಯುನಿಸೆಫ್ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಜಿಲ್ಲಾ ಮಟ್ಟದ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಮಕ್ಕಳ ಕಾಟ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ, ಮಕ್ಕಳನ್ನು ನಿಭಾಯಿಸುವುದು ಕಷ್ಟ ಎಂಬುದಾಗಿ ಭಾವಿಸುವ ಪೋಷಕರು, ಪ್ಲೇ ಹೋಂ ಹಾಗೂ ಕೇರ್ ಸೆಂಟರ್‍ಗಳಿಗೆ ಮಕ್ಕಳನ್ನು ತಳ್ಳುವ ಮೂಲಕ ಸ್ವಚ್ಛಂದವಾಗಿ ಆಟ ಆಡುವ ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಮನೆಗಳಿಂದಲೇ ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗುತ್ತಿದೆ ಎಂದು ಹೇಳಿದರು.
ಇನ್ನೂ ಮಕ್ಕಳನ್ನು ನೋಡಿಕೊಳ್ಳುವುದಾಗಿ ಸೇರಿಸಿಕೊಳ್ಳುವ ಪ್ಲೇ ಹೋಂಗಳು ಹಾಗೂ ಕೇರ್ ಸೆಂಟರ್‍ಗಳು, ಮಕ್ಕಳು ತಮ್ಮ ಬಾಲ್ಯದಲ್ಲಿ ಮಾಡಬೇಕಾದ ಸಹಜ ವರ್ತನೆ ಮಾಡಲು ಆರಂಭಿಸಿದರೆ, ಕೀಪ್ ಕ್ವೈಟ್ ಎಂಬುದಾಗಿ ದಬಾಯಿಸಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಲು ಆರಂಭಿಸಿವೆ. 80 ವಯಸ್ಸು ದಾಟಿರುವವರಿಗೂ ಶಿಸ್ತು ಇಲ್ಲದ ಈ ಸಮಾಜದಲ್ಲಿ ಮಕ್ಕಳಿಗೆ ಶಿಸ್ತು ಕಲಿಸುತ್ತೇವೆ ಎಂಬುದಾಗಿ ಹೇಳುತ್ತಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾರ್ಯ ಮಕ್ಕಳಿಂದಲೇ ನಡೆಯಲಿ ಎಂಬ ಕಾರಣಕ್ಕೆ ಮಕ್ಕಳ ಕ್ಲಬ್ ವ್ಯವಸ್ಥೆಯನ್ನು ಸರ್ಕಾರ ಹುಟ್ಟು ಹಾಕಿದೆ. ಈ ಕ್ಲಬ್‍ನಲ್ಲಿರುವ ಮಕ್ಕಳು ತಮ್ಮ ನೆರೆ, ಹೊರೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಅನ್ಯಾಯ ನಡೆದರೆ, ಚೈಲ್ಡ್ ಲೈನ್ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.
ಇನ್ನೂ ಪ್ರತಿ ಗ್ರಾಮ ಪಂಚಾಯತ್‍ಗಳಲ್ಲೂ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಬೇಕೆಂಬ ಕಾಯ್ದೆ ಇದೆ. ಈ ಗ್ರಾಮ ಸಭೆಗಳಲ್ಲಿ ಮಕ್ಕಳು ತಮಗಾಗಿರುವ ಅನ್ಯಾಯವನ್ನು ಸರಿ ಪಡಿಸಲು ಗ್ರಾ.ಪಂ.ಗೆ ಒತ್ತಾಯಿಸಬೇಕು. ಅಲ್ಲದೆ, ತಮ್ಮ ಶಾಲೆಗಳಲ್ಲಿ ಆಟದ ಮೈದಾನ ಇಲ್ಲದಿದ್ದರೆ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹ ಪಡಿಸಬೇಕು. ಆದರೆ, ಇಂದಿನ ಬಹುತೇಕ ಮಕ್ಕಳು ಪರೀಕ್ಷೆಯ ಒತ್ತಡದಿಂದ ಆಟದ ಕಡೆಗೆ ಗಮನ ಹರಿಸದಿರುವುದು ಸರಿಯಲ್ಲ ಎಂದರು.
ಪೋಷಕರು ಮಕ್ಕಳನ್ನು ಅಂಕಗಳಿಕೆಯ ಯಂತ್ರಗಳಂತೆ ರೂಪಿಸುತ್ತಿದ್ದು, ಪ್ರಸ್ತುತ ಮಕ್ಕಳು ಪಠ್ಯಕ್ಕೆ ಮಾತ್ರ ಒತ್ತು ಕೊಡುತ್ತಿರುವುದರಿಂದ ಪುಸ್ತಕದ ಹುಳುಗಳಾಗುತ್ತಿದ್ದಾರೆ. ಅಲ್ಲದೆ, ಮಕ್ಕಳ ಮೇಲೆ ಓದುವಂತೆ ಒತ್ತಡ ಹೇರುವುದಲ್ಲದೇ, ಹಲವು ನಿಬಂಧನೆಗಳನ್ನು ಹಾಕುವುದರಿಂದ ಕುಬ್ಜರಾಗಿ, ಕನಿಷ್ಠ ಮಟ್ಟದಲ್ಲಿ ಮಾತ್ರ ಮಾನವೀಯತೆ ಬೆಳೆಸಿಕೊಂಡು ದೊಡ್ಡವರಾದ ನಂತರ ಸ್ವಾರ್ಥಿಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಸಮಾಜದಲ್ಲಿ ಇರುವವರಲ್ಲಿ ಬಹುತೇಕರು ಸುಸಂಸ್ಕತರಿಲ್ಲ. ಮಕ್ಕಳ ಕಳ್ಳ ಸಾಗಾಣಿಕೆ ತಡೆಯುವ ಕಾಯ್ದೆ ಜಾರಿಗೆ ತಂದಿದ್ದರೂ ಸಹ ಮಕ್ಕಳ ಕಳ್ಳ ಸಾಗಾಣೆ ನಡೆಯುತ್ತಿದೆ. ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಾಲ್ಯ ವಿವಾಹ ನಡೆಯುತ್ತಿದೆ. ಅದ್ದರಿಂದ ಮಕ್ಕಳೇ ಜಾಗೃತರಾಗಿ ಮೋಸಕ್ಕೆ ಬಲಿಯಾಗಿ ಅನ್ಯಾಯಕ್ಕೆ ಒಳಗಾಗದೇ ಮಕ್ಕಳ ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕ ಮಾತನಾಡಿದ ಸಂಯೋಜಕ ಜಿ.ಮಂಜಪ್ಪ, ಈ ತಿಂಗಳಿನಲ್ಲಿ ನ.14ರಂದು ಮಕ್ಕಳ ದಿನಾಚರಣೆ, ನ.19ರಂದು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪ್ರತಿಬಂಧಕ ದಿನಾಚರಣೆ, ನ.20ರಂದು ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ನಡೆಯಲಿವೆ. ಆದ್ದರಿಂದ ಈ ಮೂರು ಕಾರ್ಯಕ್ರಮಗಳ ಮಹತ್ವವನ್ನು ಹಾಗೂ ಸಂಸತ್‍ನ ಸ್ವರೂಪ ತಿಳಿಸುವ ಉದ್ದೇಶದಿಂದ ಈ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಉತ್ತಮವಾಗಿ ವಿಷಯ ಮಂಡಿಸುವ ಇಬ್ಬರು ಮಕ್ಕಳನ್ನು ಮುಖ್ಯಮಂತ್ರಿಯ ಸಮ್ಮುಖದಲ್ಲಿ ನಡೆಯುವ ರಾಜ್ಯ ಸಂಸತ್ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ರಾಜ್ಯ ಸದಸ್ಯ ಎಲ್.ಹೆಚ್.ಅರುಣಕುಮಾರ್, ವಕೀಲ ಸಿ.ರಾಜಪ್ಪ, ಡಾನ್ ಬಾಸ್ಕೋ ಸಂಸ್ಥೆಯ ಜೋಸೆಫ್, ಮಕ್ಕಳ ಪ್ರತಿನಿಧಿಗಳಾದ ಅಪ್ಸರ್ ಬಾನು, ಸಂತೋಷ್ ಉಪಸ್ಥಿತರಿದ್ದರು. ರಾಜು ಕಡತಿ ಪ್ರಾರ್ಥಿಸಿದರು. ವಸಂತಕುಮಾರ್ ಎ.ಟಿ. ಸ್ವಾಗತಿಸಿದರು. ಹೀರ್ಯಾ ನಾಯ್ಕ ಬಿ.ಎಸ್.ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ