ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ದಿಢೀರ್ ಪ್ರತಿಭಟನೆ

ದಾವಣಗೆರೆ:

      ಸಮೀಪದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿಗಳು ವಿವಿಯ ಶಿವಗಂಗೋತ್ರಿ ಕ್ಯಾಂಪಸ್‍ನ ಮುಖ್ಯ ಗೇಟ್ ಬಂದ್ ಮಾಡುವ ಮೂಲಕ ದಿಢೀರ್ ಪ್ರತಿಭಟನೆ ನಡೆಸಿದರು.
ಬೆಳಗ್ಗೆಯಿಂದ ಹಾಸ್ಟೆಲ್‍ನಲ್ಲಿ ನೀರು ಬಾರದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ವಿವಿಯ ಮುಖ್ಯ ಗೇಟ್ ಬಂದ್ ಮಾಡಿ, ದಿಢೀರ್ ಪ್ರತಿಭಟನೆ ನಡೆಸಿ ಹಾಸ್ಟೆಲ್ ಅವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

        ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಹಾಸ್ಟೆಲ್‍ನಲ್ಲಿ ಬೆಳಗ್ಗೆಯಿಂದ ನೀರು ಬಾರದಿರುವುದರಿಂದ ನಿತ್ಯ ಕರ್ಮ ಮುಗಿಸಿಕೊಂಡು, ತರಗತಿಗೆ ಹೋಗಲು ಸಾಧ್ಯವಾಗಿಲ್ಲ. ಬೇರೆ ಹಾಸ್ಟೆಲ್‍ಗಳಲ್ಲಿ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಊಟ, ಉಪಹಾರ ನೀಡುತ್ತಾರೆ. ಅದರೆ, ಇಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಪ್ರತಿದಿನ ಸೊಪ್ಪು, ತರಕಾರಿ ಸಾಂಬರ್ ನೀಡಬೇಕೆಂಬ ನಿಯಮವಿದೆ. ಹಾಸ್ಟೆಲ್ ಮೇನುವಿನಲ್ಲಿರುವಂತೆ ಒಂದು ದಿನ ಸಹ ಊಟ ಕೊಡುವುದಿಲ್ಲ. ಅಲ್ಲದೆ, ಎರಡು ಗಂಟೆಗೆ ಹೋದರೆ ಊಟ ಇಲ್ಲ ಖಾಲಿಯಾಗಿದೆ ಎಂದು ಸಬೂಬು ಹೇಳುತ್ತಾರೆಂದು ಆರೋಪಿಸಿದರು.

         ಪ್ರತಿ ತಿಂಗಳೂ ವಿದ್ಯಾರ್ಥಿಗಳಿಂದ ತಲಾ 1800 ರೂ. ಪಡೆಯಲಾಗುತ್ತದೆ. ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನದಲ್ಲಿ ಮುರಿದುಕೊಳ್ಳುತ್ತಾರೆ. ಆದರೆ, ಊಟ ಮಾತ್ರ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ.

         ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಒಳ್ಳೆಯ ಊಟದ ಜೊತೆಗೆ ಬಾಳೆಹಣ್ಣು, ಮೊಟ್ಟೆ ಕೊಡಬೇಕೆಂಬ ನಿಯಮವಿದೆ. ಇಲ್ಲಿ ಒಂದೇ ಒಂದು ದಿನ ಸಹ ಮೊಟ್ಟೆ, ಬಾಳೆಹಣ್ಣು ನೀಡಿಲ್ಲ. ನಿರಂತರ ರಜಾ ದಿನಗಳು ಬಂದರೆ ಕೆಲವು ವಿದ್ಯಾರ್ಥಿಗಳು ಮನೆಗೆ ಹೋಗುವುದಿಲ್ಲ. ಆಗಾ ಹಾಸ್ಟೆಲ್‍ನಿಂದ ಊಟ ಕೊಡಬೇಕು ಎಂಬ ಸರ್ಕಾರದ ನಿಯಮವಿದೆ. ಆದನ್ನು ಸಹ ಪಾಲಿಸುತ್ತಿಲ್ಲ ಎಂದು ದೂರಿದರು.

          ಈ ವಿಚಾರಗಳನ್ನು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಇದುವರೆವಿಗೂ ಗಮನ ಹರಿಸಿಲ್ಲ. ಇಂದು ಕುಲಪತಿಗಳ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಈ ಭರವಸೆ ಬರೀ ಭರವಸೆಯಾಗಿ ಉಳಿಯದೇ, ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿದರು.

           ಪ್ರತಿಭಟನೆಯಲ್ಲಿ ಹೆಚ್.ಎಸ್. ಸಂದೀಪ್, ಕೆ.ಎನ್. ಹನುಮಂತಪ್ಪ, ಯಲ್ಲಪ್ಪ, ರಂಗಸ್ವಾಮಿ, ಡಿ.ಹೆಚ್. ತಿಪ್ಪೇಸ್ವಾಮಿ, ಆನಂದ, ಗುರುರಾಜ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link