ಚಳ್ಳಕೆರೆ
ತಾಲ್ಲೂಕಿನ ಬರಗಾಲದ ವಾಸ್ತವ ಸ್ಥಿತಿಯನ್ನು ಅರಿಯಲು ಕೇಂದ್ರ ಸರ್ಕಾರದ ಬರ ಅಧ್ಯಯ ತಂಡ ನ.18ರ ಭಾನುವಾರ ಚಳ್ಳಕೆರೆ ತಾಲ್ಲೂಕಿಗೆ ಆಗಮಿಸಿ ವಿವಿದ ಗ್ರಾಮಗಳಿಗೆ ತೆರಳಿ ಬರ ಅಧ್ಯಯನದ ಬಗ್ಗೆ ಪರಿಶೀಲನೆ ನಡೆಸುವುದಲ್ಲದೆ, ಸಾರ್ವಜನಿಕರಿಂದ ಮಾಹಿತಿಯನ್ನು ಸಹ ಪಡೆಯುವರು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಅವರು, ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ ಹಲವಾರು ವರ್ಷಗಳಿಂದ ನಿರಂತರ ಬರಗಾಲ ಹಿನ್ನೆಲ್ಲೆಯಲ್ಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೆರವು ಕೇಳಿದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಬರ ಅಧ್ಯಯನ ವಿಶೇಷ ತಂಡ ಆಗಮಿಸಲಿದೆ ಎಂದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಪ್ರೊಬೆಷನರಿ ಜಿಲ್ಲಾಧಿಕಾರಿ ಡಾ.ಕೆ.ನಂದಿನಿದೇವಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳಣನವರ್, ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಸವಿತಾ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಮಾರುತಿ, ಪಶು ಇಲಾಖೆಯ ಡಾ.ಹನುಮಪ್ಪ, ತೋಟಗಾರಿಕೆ ಇಲಾಖೆ ಸಿ.ವಿರುಪಾಕ್ಷಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎನ್.ರವಿಕುಮಾರ್ ಗುರುವಾರ ಪರಶುರಾಮಪುರ ಹೋಬಳಿಯ ವಿವಿಧ ಗ್ರಾಮಗಳಿಗೆ ತೆರಳಿ ಕೇಂದ್ರ ಬರ ಅಧ್ಯಯನ ತಂಡ ನಡೆಸಲಿರುವ ಹಲವಾರು ಸ್ಥಳಗಳನ್ನು ಗುರುತಿಸಲಾಯಿತು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಲಿದ್ದು, ನ.18ರ ಭಾನುವಾರ ಮಧ್ಯಾಹ್ನ 1.30ಕ್ಕೆ ಮಧುಗಿರಿಯಿಂದ ಈ ತಂಡ ಆಗಮಿಸಲಿದೆ. ಪರಶುರಾಮಪುರ ಹೋಬಳಿಯ ಒಣಗಿದ ಕೆರೆಗಳು, ಬರ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿವಿಧ ಉದ್ಯೋಗ ಖಾತರಿ ಯೋಜನೆಗಳ ಕಾಮಗಾರಿ ಪರಿಶೀಲನೆ ನಂತರ, ನನ್ನಿವಾಳಕ್ಕೆ ತೆರಳಿ ಅಲ್ಲಿನ ದೇವರ ಎತ್ತುಗಳಿರುವ ದೇವರಹಟ್ಟಿಗೆ ಭೇಟಿ ನೀಡಿ, ತಳಕು ಮೂಲಕ ಮೊಳಕಾಲ್ಮೂರು ತಾಲ್ಲೂಕಿಗೆ ತೆರಳಲಿದೆ.
ಕ್ಷೇತ್ರದಾದ್ಯಂತ ಯಾವ ಪ್ರದೇಶದಲ್ಲೂ ಸಹ ಪ್ರಸ್ತುತ ವರ್ಷ ಎಲ್ಲಿಯೂ ಶೇಂಗಾ ಬೆಳೆ ರೈತರ ಕೈ ಸೇರಿಲ್ಲ, ಎಲ್ಲೆಡೆ ಸಂಪೂರ್ಣವಾಗಿ ಬಿತ್ತನೆ ಮಾಡಿದ ಎಲ್ಲಾ ಪ್ರದೇಶಗಳಲ್ಲಿ ಶೇಂಗಾ ಒಣಗಿದೆ. ಕೃಷಿ ಇಲಾಖೆ ವರದಿಯಂತೆ ಈಗಾಗಲೇ ತಾಲ್ಲೂಕಿನ ಸುಮಾರು 87 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಒಣಗಿದ್ದು, ಎಲ್ಲಾ ರೈತರಿಗೂ ಬೆಳೆ ಪರಿಹಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಅಧ್ಯಯನ ತಂಡ ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ವರದಿ ನೀಡಿದ ನಂತರ ಪರಿಹಾರ ಮಾಹಿತಿ ದೊರೆಯಲಿದೆ ಎಂದರು. ಒಟ್ಟಿನಲ್ಲಿ ಚಳ್ಳಕೆರೆ ತಾಲ್ಲೂಕಿನ ಸಮಗ್ರ ಬರ ಸ್ಥಿತಿಯನ್ನು ನಿವಾರಿಸಲು ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನು ಇಲ್ಲಿನ ರೈತರು ನಿರೀಕ್ಷಿಸುತ್ತಿದ್ಧಾರೆ ಎಂದರು.
ಕಳೆದ 2016ರಲ್ಲಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ವರದಿ ನೀಡಿದ್ದರೂ ಸಹ ರೈತ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಲು ಸಾಧ್ಯವಾಗಿಲ್ಲ ಎಂಬ ರೈತರ ಆರೋಪವಿದ್ದು, ಈ ಬಾರಿಯಾದರೂ ಕೇಂದ್ರ ತಂಡ ಇಲ್ಲಿನ ಸ್ಥಿತಿಯ ಬಗ್ಗೆ ಹೆಚ್ಚು ಆಳವಾಗಿ ಅಧ್ಯಯನ ನಡೆಸಬೇಕೆಂದು ಅವರು ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ