ಹೊನ್ನಾಳಿ:
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಮುಂಗಾರು ಮಳೆ ದುರ್ಬಲವಾಗಿ ಸಾವಿರಾರು ಎಕರೆ ಪ್ರದೇಶಗಳಲ್ಲಿನ ಬೆಳೆಗಳು ಹಾಳಾಗಿ ತೀವ್ರ ನಷ್ಟವುಂಟಾಗಿದ್ದು, ಕೂಡಲೇ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು
ಬೆಂಗಳೂರಿನ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಜೊತೆಗೆ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಿ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಅವರು ವಿನಂತಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಈ ಹಿಂದೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದೇ ಇರುವುದರಿಂದ ಶುಕ್ರವಾರ ಮತ್ತೊಮ್ಮೆ ಮನವಿ ಮಾಡಿ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಈ ಬಾರಿಯ ಮಳೆಯ ಅಭಾವದಿಂದ ರೈತರ ಬದುಕು ಶೋಚನೀಯವಾಗಿದೆ. ವಾಣಿಜ್ಯ, ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಗೊಬ್ಬರ, ಬೀಜ ಖರೀದಿಸಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದರು. ಆದರೆ, ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಾಶವಾಗಿರುವ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ. ಸಾಲ ತೀರಿಸಲಾಗದೆ ರೈತರ ಜೀವನ ದುಸ್ತರವಾಗಿದೆ ಎಂದರು.
ಮುಂಗಾರು ಮಳೆ ವಿಫಲವಾದ ಕಾರಣ ರೈತರು ಅಲ್ಪ ಸ್ವಲ್ಪ ಬೆಳೆದ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೇ ಪರಿತಪಿಸುವಂತಾಗಿದೆ.
ರೈತರ ಹಿತದೃಷ್ಟಿಯಿಂದ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಕೂಲಂಕುಷವಾಗಿ ಚರ್ಚಿಸಿ ಮನವಿ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳು ಕಾರ್ಯಕ್ರಮ ನಿಮಿತ್ತ ಶನಿವಾರದಂದು ದಾವಣಗೆರೆ ನಗರಕ್ಕೆ ಭೇಟಿ ನೀಡುತ್ತಾರೆ. ಆ ವೇಳೆ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ