ಧಾರವಾಡ:
ಇಂದು ಬೆಳ್ಳಂಬೆಳಗ್ಗೆ, ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಅಣ್ಣಿಗೇರಿ ತಾಲೂಕಿನ ಕೋಳಿವಾಡ ಕ್ರಾಸ್ ಬಳಿ ನಡೆದಿದೆ.
ಮೃತ ಆರು ಮಂದಿಯೂ ಮುಂಬೈ ಮೂಲದವರು ಎಂದು ತಿಳಿದುಬಂದಿದೆ. ವಿಶ್ವನಾಥ್ ಮಾತ್ರೆ (76), ದಿನಕರ್ ಮಾತ್ರೆ (74), ರಮೇಶ್ ಜಯಮಾಲ (70), ಸುಮೇದ ಜಮಖಂಡಿ (65), ಲಾಹೂ ಕೆಲೋಸ್ಕರ (65), ಸುಚಿತ್ರಾ ರಾಹೂಲ್ (65) ಮೃತ ದುರ್ದೈವಿಗಳು. ದುರ್ಘಟನೆಯಲ್ಲಿ 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು, ಬೆಂಗಳೂರು ಮೂಲದ ಕಾತ್ಯಾಯಿನಿ ಟ್ರಾವಲ್ಸ್‌ನ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.