ಶೋಷಿತರು ಜಾಗೃತರಾಗದಿದ್ದರೆ ಸಂವಿಧಾನಕ್ಕೆ ಕಂಟಕ

ಚಿತ್ರದುರ್ಗ:

     ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತೆ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸರ್ವಶ್ರೇಷ್ಟವಾದ ಸಂವಿಧಾನ ಉಳಿಯಬೇಕಾದರೆ ಶಾಲಾ-ಕಾಲೇಜುಗಳಿಗೆ ಹೋಗಿ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಶಿವಮೊಗ್ಗದ ಡಾ.ಸಣ್ಣರಾಮನಾಯ್ಕ ತಿಳಿಸಿದರು.

      ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಒಕ್ಕೂಟ ಹಾಗೂ ಸಾಮಾಜಿಕ ಸಂಘರ್ಷ ಸಮಿತಿ, ರಾಜ್ಯ ಸಮಿತಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಕ್ರೀಡಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ-ಮುಕ್ತ ಸಂವಾದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

         ಸಂವಿಧಾನ ಬದಲಾಯಿಸಲು ಹೊರಟಿರುವ ಬ್ರಾಹ್ಮಣಶಾಹಿಗಳ ವಿರುದ್ದ ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇಂತಹ ವಿಚಾರ ಸಂಕಿರಣಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. 6324 ಜಾತಿ, 163 ಬುಡಕಟ್ಟುಗಳು ಭಾರತದಲ್ಲಿದೆ. ಶೋಷಿತರ ಪರವಾಗಿರುವ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುಂವಂತಿದೆ. ಅಂಬೇಡ್ಕರ್ ಶೋಷಿತರ ಪರವಾಗಿದ್ದಾರೆ ಎಂಬುದನ್ನು ಮಹಾತ್ಮಗಾಂಧಿ ಗ್ರಹಿಸಿದ್ದರು. ಸಂವಿಧಾನವನ್ನು ಕಿತ್ತೊಗೆಯಲು ಹೊರಟಿರುವವರ ಪರವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಯುವಕರು ನಿಂತಿರುವುದು ಅತ್ಯಂತ ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

         ಧರ್ಮದ ಹೆಸರಿನಲ್ಲಿ ದೇಶದಲ್ಲಿ ದುರಂತಗಳಾಗುತ್ತಿವೆ. ಇನ್ನಾದರೂ ನಾವುಗಳು ಜಾಗೃತರಾಗದಿದ್ದರೆ ಒಂದಲ್ಲ ಒಂದು ದಿನ ಸಂವಿಧಾನಕ್ಕೆ ಕಂಠಕ ಬರುವುದರಲ್ಲಿ ಅನುಮಾನವಿಲ್ಲ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಂಬೇಡ್ಕರ್ ರಚಿಸಲಾಗಿರುವ ಸಂವಿಧಾನ ಪರಿಪಾಲನೆಯಾಗುತ್ತಿದೆಯೇ ಇಲ್ಲವೋ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಡಿ ರಾಷ್ಟ್ರಪತಿಗೂ ಒಂದು ಓಟು. ಸಮಾಜದ ಕಟ್ಟಕಡೆಯ ಕನಿಷ್ಟ ಮನುಷ್ಯನಿಗೂ ಒಂದೇ ಓಟು ಎನ್ನುವ ಸಮಾನತೆಯನ್ನು ಬಿಟ್ಟರೆ ಬೇರೆ ಯಾವ ವಿಚಾರದಲ್ಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗೆ ಇನ್ನು ಸಮಾನತೆ ಸಿಕ್ಕಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಸಂವಿಧಾನ ವಿರೋಧಿಗಳು ದಲಿತರ ಹೆಚ್ಚು ಮತಗಳನ್ನು ಪಡೆಯುತ್ತಿದ್ದಾರೆ. ಸಂವಿಧಾನವನ್ನು ಕೈಬಿಟ್ಟರೆ ಮುಂದೆ ಆಗುವ ಅನಾಹುತಗಳಿಗೆ ಈ ತಲೆಮಾರಿನವರೆ ಕಾರಣ ಎನ್ನುವುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಜಾಗೃತಗೊಳಿಸಿದರು.

            ಸಮಾನತೆ, ಸ್ವಾತಂತ್ರ, ಬಂಧುತ್ವ ಸಂವಿಧಾನದ ಚಿಂತನೆ. ಆದರೆ ದಲಿತರು ಮುಕ್ತವಾಗಿ ಮಾತನಾಡಿzರೆ ಸನಾತನವಾದಿಗಳ ಗುಂಡುಗಳು ಮಾತನಾಡುತ್ತವೆ. ಹಾಗಾಗಿ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಸಂವಿಧಾನವನ್ನು ಪಾಲನೆ ಮಾಡಬೇಕಿದೆ ಎಂದು ಹೇಳಿದರು.

            ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ ಎಲ್ಲಾ ಸಮಾಜದ ಏಳಿಗೆಗೆ ಕಾರಣವಾಗಿರುವ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವಲ್ಲಿ ಎಲ್ಲರೂ ದುಡಿಯಬೇಕಿದೆ. ಸಂವಿಧಾನದ ಮೇಲ್ಪಂಕ್ತಿಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು. ಸಂವಿಧಾನದಲ್ಲಿ ಅಡಕವಾಗಿರುವ ವಿಚಾರ ಹಾಗೂ ಪರಿಚ್ಚೇದಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಿದೆ. ಹಾಗಾಗಿ ಚಿತ್ರದುರ್ಗದಲ್ಲಿ ಸಂವಿಧಾನ-ಮುಕ್ತ ಸಂವಾದ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು

            ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರೆದರೆ ಸಾಲದು. ಯಾವುದೇ ಒಂದು ರಂಗದಲ್ಲಿ ಹಿಂದುಳಿದಿದ್ದರೂ ಅಂತಹವರನ್ನು ದಲಿತರೆಂದು ಕರೆಯಬೇಕಾಗುತ್ತದೆ. ಅಂಬೇಡ್ಕರ್ ಮೇಲೆ ಅನೇಕ ಕೃತಿ, ವಿಮರ್ಶೆಗಳು ರಚನೆಯಾಗಿವೆ. ಅದರಲ್ಲಿ ಅವರು ಅನುಭವಿಸಿದ ನೋವು, ಸಂಕಟಗಳನ್ನು ಬರೆಯಲಾಗಿದೆ. ಸಂವಿಧಾನದ ಬಗ್ಗೆ ಎಷ್ಟು ವಿಮರ್ಶೆ, ಚರ್ಚೆಗಳು ನಡೆಯುತ್ತಿದೆ ಎನ್ನುವುದು ಮುಖ್ಯ. ಸಂವಿಧಾನ ಬದಲಾವಣೆ ದೇಶದ ಪ್ರಗತಿಗೆ ಪೂರಕವಲ್ಲ. ಬಹಳಷ್ಟು ಅಧ್ಯಯನ ಮಾಡಿ ರಚಿಸಲಾಗಿರುವ ಸಂವಿಧಾನವನ್ನು ಅಮೇರಿಕಾದಂತ ಬಲಶಾಲಿ ದೇಶ ಒಪ್ಪಿಕೊಂಡಿದೆ. ಜಗತ್ತು ಇರುವತನಕ ಸಂವಿಧಾನ ಅಜರಾಮರವಾಗಿರುತ್ತದೆ. ಸಂವಿಧಾನ ವಿಮರ್ಶೆ, ಪರಾಮರ್ಶೆ, ಅದರಲ್ಲಿ ಅಡಕವಾಗಿರುವ ವಿಚಾರಗಳು ಜಾರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಇಂತಹ ವಿಚಾರ ಸಂಕಿರಣಗಳು ಅತ್ಯವಶ್ಯಕ ಎಂದು ತಿಳಿಸಿದರು.

           ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡುತ್ತ ದೇಶದ ಪರಮ ಪವಿತ್ರವಾದ ಗ್ರಂಥ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವುದರ ವಿರುದ್ದ ವಿದ್ಯಾರ್ಥಿಗಳಲ್ಲಿ, ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಂವಿಧಾನ-ಮುಕ್ತ ಸಂವಾದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದೇವೆ. ಸಂವಿಧಾನದ ಶಕ್ತಿ ಹಾಗೂ ಮಹತ್ವವನ್ನು ತಿಳಿದುಕೊಂಡಿರುವವರು ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ನಿರ್ಲಕ್ಷೆ, ಬೇಜವಾಬ್ದಾರಿತನ ಮಾಡಿದರೆ ಮುಂದೊಂದು ದಿನ ಕಂಠಕ ಒದಗಿ ಬರುವುದರಲ್ಲಿ ಅನುಮಾನವಿಲ್ಲವೆಂದರು.

             ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರವಾಗಿ ಅಧ್ಯಯನ ನಡೆಸಿ ರಚಿಸಿರುವ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದರೆ ದೊಡ್ಡ ಆಂದೋಲನವಾಗಬೇಕು. ಅದಕ್ಕಾಗಿ ದೇಶದ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿರುವ ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು. 

             ಪರಿವರ್ತನಾ ಚಿಂತಕ ಪ್ರೊ.ಸಿ.ಕೆ.ಮಹೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್, ದಾವಣಗೆರೆ ವಿ.ವಿ.ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಟಿ.ಗೋವಿಂದಪ್ಪ, ಡಾ.ಕೆ.ಕೆ.ಕಮಾನಿ, ಗುರುನಾಥ್ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap