ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಕರೆ

ದಾವಣಗೆರೆ :

       ಆಸಕ್ತಿ ಇರುವ ಕ್ಷೇತ್ರದಲ್ಲಿ ಮಕ್ಕಳು ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ಸಾಧನೆ ಮಾಡಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

       ನಗರದ ಬಾಪೂಜಿ ಬಾಲಿಕಾ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಹಿಂದೆಲ್ಲಾ ಸಂಗೀತ ಕೇವಲ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಪ್ರತಿಯೊಬ್ಬ ಪ್ರತಿಭಾವಂತರಿಗೂ ಅವಕಾಶಗಳು ಇವೆ. ಟಿವಿ ಕಾರ್ಯಕ್ರಮಗಳಲ್ಲಿ ಮಕ್ಕಳ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನೋಡುತ್ತಿದ್ದೇವೆ. ಸರ್ಕಾರವೂ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಉತ್ತೇಜಿಸಲು ಇಂಥಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

      ಕೇವಲ ಪಠ್ಯವಲ್ಲದೇ ಮಕ್ಕಳಲ್ಲಿ ಅಡಗಿರುವ ಭಿನ್ನ-ವಿಭಿನ್ನ ಪ್ರತಿಭೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ನಡೆಸುತ್ತಿದೆ. ಯಾವುದೇ ಮಕ್ಕಳು ಅವಿದ್ಯಾವಂತರಾಗಬಾರದೆಂದು ಸರ್ಕಾರ ಉಚಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಹಾಲು, ಮಧ್ಯಾಹ್ನದ ಊಟ, ಪುಸ್ತಕ, ಸೈಕಲ್ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

     ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವರಾಜಪ್ಪ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅವಶ್ಯಕವಾಗಿದೆ. ಆದರೆ, ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮೊರೆ ಹೋಗುತ್ತಿರುವುದು ವಿಷಾಧನೀಯ. ಮೊಬೈಲ್‍ನಲ್ಲೇ ಮುಳುಗಿ ಹೋಗಿ ಅನೇಕ ಜಾನಪದ, ಸಾಂಸ್ಕತಿ ಕಲೆ-ಪ್ರತಿಭೆಯಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಮಕ್ಕಳದನ್ನು ಮೊಬೈಲ್‍ನಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಹಾಗೂ ಮಕ್ಕಳೂ ಕೂಡ ತಮ್ಮ ಗುರಿ ತಲುಪವವರೆಗೆ ಮೊಬೈಲ್‍ನಿಂದ ದೂರ ಇರಬೇಕೆಂದು ಕಿವಿಮಾತು ಹೇಳಿದರು.

       ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ಮಕ್ಕಳಲ್ಲಿನ ಚೈತನ್ಯ ನೋಡಿದರೆ ಆಶ್ಚರ್ಯವಾಗುತ್ತದೆ. ಅತ್ಯದ್ಭುತ ಪ್ರತಿಭೆ ಜೊತೆಗೆ ಚೈತನ್ಯವನ್ನು ಇಂದಿನ ಪ್ರತಿಭಾ ಕಾರಂಜಿಯ ವಿವಿಧ ಕಲಾ ಪ್ರದರ್ಶನಗಳಲ್ಲಿ ಕಂಡು, ನಮ್ಮಲ್ಲೂ ಅಂತಹ ಚೈತನ್ಯ ಇರಬೇಕು ಎನ್ನಿಸಿತು. ವಿಠಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಮಕ್ಕಳು ಕೋಲಾಟ, ಜಾನಪದ ನೃತ್ಯ, ಹಾಡು, ಹೆಣ್ಣುಮಕ್ಕಳು ವೀರಗಾಸೆ, ಛದ್ಮವೇಷ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾಗಿ ಅರಿವು ಮೂಡಿಸಬಹುದೆಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಹಾಗೂ ಹಕ್ಕಿಪಿಕ್ಕಿ ಸಮುದಾಯದ ಗೀತೆ, ಜಾನಪದ ಗೀತೆಗಳು ದಾರ್ಶನಿಕ ಹಾಗೂ ಭಾವಪರವಶತೆಯೆಡೆ ಕೊಂಡೊಯ್ಯುತ್ತಿವೆ ಎಂದು ಹೇಳಿದರು

        ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಿದ್ದು, ಪಠ್ಯದೊಂದಿಗೆ ಪಠ್ಯೇತರ ಪ್ರತಿಭೆಯನ್ನು ಹೊರ ತೆಗೆಯುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರ್ಯಕ್ರಮದಲ್ಲಿ 7 ವಲಯಗಳಿಂದ ಸಾಮೂಹಿಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಅನೇಕ ಕಾರ್ಯಕ್ರಮಗಳಿವೆ. ಕಂಠಪಾಠ, ಭಾಷಣ, ಸಂಗೀತ, ಛದ್ಮವೇಷ, ಜಾನಪದ ನೃತ್ಯ, ಭಕ್ತಿಗೀತೆ, ಅಭಿನಯ ಗೀತೆ, ಕೋಲಾಟ, ಕವಾಲಿ, ಗಝಲ್, ನಾಟಕ, ದೃಶ್ಯಕಲೆ, ಉರ್ದು ಭಾಷಣ, ಭರತನಾಟ್ಯ, ಮಿಮಿಕ್ರಿ ಹೀಗೆ 75 ಸ್ಪರ್ಧೆಗಳು ಈ ದಿನ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟಕ್ಕೆ ಅಲ್ಲಿಯೂ ಸ್ಥಾನ ಪಡೆದರೆ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವರು ಎಂದರು.

          ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಸಾಕಮ್ಮ ಗಂಗಾಧರನಾಯ್ಕ, ಮಹಾನಗರಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ, ಇಓ ನಿರಂಜನ್, ವಿಷಯ ಪರಿವೀಕ್ಷಕರು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ತೀರ್ಪುಗಾರರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಸಿದ್ದಗಂಗಾ ಪ್ರೌಢಶಾಲೆ ಮಕ್ಕಳು ನಾಡಗೀತೆ ಹಾಡಿದರು. ಬಿ.ಆರ್. ಬಸವರಾಜಪ್ಪ ಸ್ವಾಗತಿಸಿದರು. ಶಿಕ್ಷಕ ಗುರುಸಿದ್ದಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link