ಕೊನೆಗೂ ಮರಳು ದಂಗೆ ನಡೆಸಿದ ರೇಣುಕಾಚಾರ್ಯ

ಹೊನ್ನಾಳಿ:

        ಬಡ ಜನರಿಗೆ ಮನೆ, ದೇವಸ್ಥಾನ, ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗದ ಕಾರಣ, ಕಾನೂನು ಮುರಿದು ಮರಳು ತುಂಬಿಸಿಯೇ ತೀರುತ್ತೇನೆ. ತಾಕತ್ತಿದ್ದರೆ, ನನ್ನನ್ನು ಬಂಧಿಸಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊನೆಗೂ ಸಾರ್ವಜನಿಕರೊಂದಿಗೆ ನದಿ ಪಾತ್ರಕ್ಕೆ ಇಳಿದು ಮರಳು ತುಂಬಿಸುವ ಮೂಲಕ ಸೋಮವಾರ ಮರಳು ದಂಗೆ ನಡೆಸಿದರು.

          ಇಲ್ಲಿನ ಹಿರೇಕಲ್ಮಠದಿಂದ ಶಾಸಕ ಎಂ.ಪಿ.ರೇಣುಕಾಚಾರ್ಯರ ನೇತೃತ್ವದಲ್ಲಿ ಎತ್ತಿನಗಾಡಿಯ ಮೂಲಕ ತೆರಳಿದ ಹಲವು ಗ್ರಾಮಗಳ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ತಾಲೂಕಿನ ಹೊಳೆಮಾದಾಪುರಕ್ಕೆ ತೆರಳಿ, ಅಲ್ಲಿಯ ನದಿ ಪಾತ್ರಕ್ಕೆ ಇಳಿದು ಸ್ವತಃ ಶಾಸಕ ಎಂ.ಪಿ.ರೇಣುಕಾರ್ಯ ಅವರೇ ಎತ್ತಿನ ಗಾಡಿಗಳಿಗೆ ಮರಳು ತುಂಬುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿ, ಮುಂದೆ ನಿಂತು ಎತ್ತಿನ ಗಾಡಿಗಳಿಗೆ ಮರಳು ತುಂಬಿಸುತ್ತಿದ್ದರೆ, ಉಲ್ಲಂಘನೆಯಾಗುತ್ತಿದ್ದ ಕಾನೂನು ಕಾಪಾಡಬೇಕಾಗಿದ್ದ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಯಾವುದೇ ಕ್ರಮವೂ ಕೈಗೊಳ್ಳದೇ ಕೈಚೆಲ್ಲಿ ನಿಂತಿದ್ದರು.

         ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ತಾಲೂಕಿನಲ್ಲಿ 11 ಮರಳು ಕ್ವಾರೆಗಳಿದ್ದು, ಎಲ್ಲಿಯೂ ಕೂಡ ಬಡ ಜನರಿಗೆ ಅಶ್ರಯ ಮನೆ, ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣ ಸೇರಿದಂತೆ ಸರ್ಕಾರಿ ಕಾಮಗಾರಿಗಳಿಗೆ ಮರಳು ದೊರಕದಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಾವು ಹಲವಾರು ಬಾರಿ ತಾಲೂಕು ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಜನತೆಗೆ ಸರಳವಾಗಿ ಮರಳು ಸಿಗುವಂತೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

          ಮರಳು ಸಮಸ್ಯೆ ಕುರಿತಂತೆ 5 ಬಾರಿ ಅಧಿಕಾರಿಗಳ ಸಭೆ ನಡೆಸಲಾಗಿದೆ ಅದರೂ ಕೂಡ ತಾಲೂಕು ಮತ್ತು ಜಿಲ್ಲಾಡಳಿತ ಬಡವವರಿಗೆ ಮರಳು ದೊರಕಿಸಿಕೊಡುವ ಬಗ್ಗೆ ನಿರ್ಲಕ್ಷ್ಯ ತೋರುತ್ತಾ ಬಂದಿದ್ದು, ಅಶ್ರಯ ಮನೆ ನಿರ್ಮಾಣಕ್ಕಾಗಿ ಕಡು ಬಡವರು, ಅನಿವಾರ್ಯವಾಗಿ ಎತ್ತಿನಗಾಡಿಗಳಲ್ಲಿ ನದಿಯಿಂದ ಮರಳು ತಂದರೆ ಪೊಲೀಸ್ ಅಧಿಕಾರಿಗಳು ಅಮಾಯಕರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದೆ. ಈಗ ನಾನೇ ಮುಂದೆ ನಿಂತು ಮರಳು ತುಂಬಿಸುತ್ತಿದ್ದೇನೆ. ನನ್ನ ಮೇಲೆ ಪ್ರಕರಣ ದಾಖಲಿಸಲಿ ನೋಡೋಣ? ಇನ್ನೂ ಮುಂದೆಯೂ ಮರಳು ಜನರಿಗೆ ಸಿಗದಿದ್ದರೆ, ಮುಂದೆ ಜನರೊಂದಿಗೆ ಸೇರಿ ಮರಳಿಗಾಗಿ ದಂಗೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

         ತಾಲೂಕಿನಲ್ಲಿ ಸುಮಾರು 5300 ಅಶ್ರಯ ಮನೆಗಳು ಮಂಜೂರಾಗಿವೆ. ಆದರೆ, ಸಮರ್ಪಕ ಮರಳು ದೊರೆಯದ ಕಾರಣ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಅಲ್ಲದೆ, ಶೌಚಾಲಯ ನಿರ್ಮಾಣಕ್ಕೆ ಅಲ್ಲದೇ ಅನೇಕ ದೇವಾಲಯಗಳ ಹಾಗೂ ಅಭಿವೃದ್ದಿ ಕಾಮಗಾರಿಗಳು ಕೂಡ ತಾಲೂಕಿನಲ್ಲಿ ಅಪೂರ್ಣಗೊಂಡಿವೆ ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದ್ದು, ತಾನು ಒಬ್ಬ ಶಾಸಕನಾಗಿ ಕಾನೂನು ಕಾಪಾಡುವುದು ಎಷ್ಟು ಮುಖ್ಯವೋ ಬಡ ಜನತೆಯ ಹಿತ ಕಾಪಾಡುವುದು ಸಹ ಅಷ್ಟೇ ಮುಖ್ಯ ಎಂದರು.
ಬಡ ಜನತೆಯ ಪರವಾಗಿ ತಾವು ಯಾವುದೇ ಹೋರಾಟಕ್ಕೂ ಸಿದ್ಧ ಲೀಸರು ಅಮಾಯಕ ಜನರನ್ನು ಜೈಲಿಗೆ ಕಳಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಕೆಲಸವಾಗಿದೆ. ಅಲ್ಲದೆ, ತಾವು ಕೈಗೊಂಡಿರುವ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆ ಸಹ ಜನ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಪ್ರತಿಭಭಟನೆಯ ನೇತೃತ್ವವನ್ನು ಜಿ.ಪಂ. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಉಮಾ ರಮೇಶ್, ಜಿ.ಪಂ. ಸದಸ್ಯರಾದ ಸುರೇಂದ್ರನಾಯ್ಕ, ಎಂ.ಆರ್.ಮಹೇಶ್, ತಾ.ಪಂ. ಉಪಾಧ್ಯಕ್ಷ ರವಿಕುಮಾರ್, ಕೆ.ವಿ. ಚನ್ನಪ್ಪ ಸೇರಿದಂತೆ ಬಿಜೆಪಿ ಮುಖಂಡರು. ಪ.ಪಂ.ಸದಸ್ಯರುಗಳು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link