ದಾವಣಗೆರೆ :
ಜಿಲ್ಲಾ ವನಿತಾ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿದರುವ ಸಾಹಿತ್ಯೋಪಾಸಕಿ ಟಿ.ಎಸ್.ಶೈಲಜಾ ಅವರನ್ನು ನಗರದ ‘ಕಲಾಕುಂಚ’ ಸಭಾಂಗಣದಲ್ಲಿ ಜಿಲ್ಲೆ ಸಮಾಚಾರ ಪತ್ರಿಕಾ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಜ್ಯೋತಿಷಿ ಸಿ.ಕೆ.ಆನಂದತೀರ್ಥಾಚಾರ್, ಸಾಹಿತ್ಯೋಪಾಸಕಿಯಾಗಿ ಪುಸ್ತಕ ಪ್ರಕಟಣೆ ಮತ್ತು ದತ್ತಿ ದೇಣಿಗೆಯಂತಹ ಕಾರ್ಯವನ್ನು ಪ್ರಚಾರದ ಹಂಬಲವಿಲ್ಲದೆ ಮಾಡುತ್ತಿರುವ ಲೇಖಕಿ ಟಿ.ಎಸ್.ಶೈಲಜ ಇನ್ನೂ ಹೆಚ್ಚಿನ ಸಾಹಿತ್ಯಿಕ ಚಟುವಟಿಕೆಗಳಿಂದ ಗುರುತಿಸುವಂತಾಗಬೇಕು ಎಂದು ತಿಳಿಸಿದರು.
ಬಳಗದ ಸಂಚಾಲಕ, ಹಿರಿಯ ಛಾಯಾಗ್ರಾಹಕ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ, ಹಿರಿಯ ಸೋದರಿ ದಿ|| ಟಿ.ಗಿರಿಜ ಅವರ ನಂತರ ಅದೇ ರೀತಿಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾದ ಶೈಲಜ ಅವರ ದಿಟ್ಟತನ ಮತ್ತು ಸಾಹಿತ್ಯದ ಬಗೆಗಿನ ಕಾಳಜಿ ಮೆಚ್ಚುವಂತಹುದಾಗಿದೆ ಎಂದರು.
ಬಳಗದ ಸಂಸ್ಥಾಪಕ ವಿ.ಹನುಮಂತಪ್ಪ ಮಾತನಾಡಿ, ಗಿರಿಜ ಅವರೊಂದಿಗೆ ಅವರ ನೆನಪನ್ನು ಮರೆಯಲು ಬಿಡದೆ ಅವರ ಹೆಸರಿನಲ್ಲಿ ದತ್ತಿ ದೇಣಿಗೆಯನ್ನು ರಾಜ್ಯ ಮತ್ತು ನಗರಮಟ್ಟದಲ್ಲಿ ಸ್ಥಾಪಿಸಿದಲ್ಲದೆ, ಅವರ ಅಪ್ರಕಟಿತ ಕೃತಿಗಳ ಮುದ್ರಣ ಹಾಗೂ ಪರಿಷ್ಕತ ಮುದ್ರಣದಂತಹ ಗಮನಾರ್ಹ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಶೈಲಜ ಅವರು ಇಂದು ಪೀಳಿಗೆಗೆ ಅನುಕರಣೀಯ ಮತ್ತು ಅವರ ಸಾಹಿತ್ಯಿಕ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಈಶ್ವರ ಶರ್ಮಾ, ಬಳಗದ ಕೆ.ಎನ್.ಜಯಪ್ರಕಾಶ್, ಹೇಮಚಂದ್ರ ಜೈನ್, ಎಂ.ಟಿ.ಶರಣಪ್ಪ, ಶ್ರೀಕುಮಾರ್, ಭಾರತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ