ಬ್ಯಾಡಗಿ:
ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಒಂದು ಸಾಂದರ್ಭಿಕ ಕೂಸು, ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಪಕ್ಕದ ಮನೆಯಲ್ಲಿ ಹುಟ್ಟುವ ಕೂಸಿಗೆ ಹೆಸರಿಟ್ಟು ಸಂಭ್ರಮಿಸಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಲೇವಡಿ ಮಾಡಿದರು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತ ಮಹಿಳೆಗೆ ಅವಮಾನಿಸಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕವು ಪಟ್ಟಣದ ಹಳೇಪುರಸಭೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ತಾವೇ ನೀಡಿದ ಭರವಸೆಯಂತೆ ಪ್ರಮಾಣವಚನ ಪಡೆದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದರು, ಆದರೆ ಇದೀಗ ಸಾಲಮನ್ನಾ ವಿಚಾರವನ್ನು 5 ವರ್ಷಗಳಿಗೆ ವಿಸ್ತರಿಸುತ್ತಿರುವುದು ದುರಂತದ ಸಂಗತಿ ಎಂದ ಅವರು, ರಾಜ್ಯದಲ್ಲಿ ರೈತನಾಗಿ ಹುಟ್ಟಿರುವುದೇ ದುರಂತದ ಸಂಗತಿ ಎಂದರು.
ಭಾವನಾತ್ಮಕ ಭಾಷಣದ ಕಲೆಯನ್ನು ಕರಗತ ಮಾಡಿಕೊಂಡಿರುವ ಕುಮಾರಸ್ವಾಮಿ, ಮಂಡ್ಯ, ಹಾಸನ, ಮೈಸೂರು ಜಿಲ್ಲೆಗಳ ರೈತರ ಮತಗಳನ್ನು ಪಡೆದುಕೊಳ್ಳುವಲ್ಲಿ ಯಶಶ್ವಿಯಾಗಿದ್ದಾರೆ, ಅದೇ ಸಂದರ್ಭದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಜೊತೆ ಕೈಜೋಡಿಸಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದೂ ಆಯಿತು, ಆದರೆ ರಾಜ್ಯದ ಉದ್ದಗಲದಲ್ಲಿರುವ ಅದೇ ರೈತರು ಸಾಲಮನ್ನಾ ಸೇರಿದಂತೆ ಕಬ್ಬಿನ ಬಾಕಿ ಹಣ ಮರಳಿಸುವುದೂ ಸೇರಿದಂತೆ ದರ ಹೆಚ್ಚಳಕ್ಕೆ ಮನವಿ ಮಾಡಿದರೇ ಎಚ್‍ಡಿಕೆ ಸುಳ್ಳು ಮಾತುಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆಂದು ಆರೋಪಿಸಿದರು.
ಗೂಂಡಾಗಳೆಂದು ಕರೆದ ಇಬ್ಬರೂ ಮುಖ್ಯಮಂತ್ರಿಗಳು: ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹದಾಯಿ ಹೋರಾಟಕ್ಕಿಳಿದಿದ್ದ ಉತ್ತರ ಕರ್ನಾಟಕದ ರೈತರಿಗೆ ಪೊಲೀಸರ ಬೆತ್ತದ ರುಚಿ ತೋರಿಸಿದ್ದ ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ, ಮಹದಾಯಿ ಪ್ರತಿಭಟನೆಯಲ್ಲಿರುವವರು ರೈತರಲ್ಲ ಬದಲಾಗಿ ಗೂಂಡಾಗಳೆಂದು ಸಂಬೋಧಿಸಿದ್ದರು, ಇದೀಗ ಅವರ ಹಾದಿಯಲ್ಲೇ ಸಾಗುತ್ತಿರುವ ಎಚ್‍ಡಿ ಕುಮಾರಸ್ವಾಮಿಯೂ ಕೂಡ ಬೆಳಗಾವಿ ಜಿಲ್ಲೆಯ ರೈತರನ್ನು ಗೂಂಡಾಗಳೆಂದು ಸಂಬೋಧಿಸಿದ್ದು ಎಷ್ಟರಮಟ್ಟಿಗೆ ಸರಿ..? ರೈತರು ತಮ್ಮ ಸಮಸ್ಯೆಗಳನ್ನು ತಮ್ಮ ಬಳಿ ತರದಂತೆ ಭಯದ ವಾತಾವರಣವನ್ನು ಕುಮಾರಸ್ವಾಮಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಳುವ ಬೇಡ, ಆಳುವ ಮುಖ್ಯಮಂತ್ರಿ ಬೇಕು: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಹಿರಂಗ ಸಭೆಗಳಲ್ಲಿ ಕಣ್ಣೀರಿಟ್ಟು ಭಾವನಾತ್ಮಕ ಭಾಷಣ ಮಾಡುವುದನ್ನು ಎಚ್.ಡಿ. ಕುಮಾರಸ್ವಾಮಿ ಮೊದಲು ನಿಲ್ಲಿಸಬೇಕು, ಇಂತಹವರಿಂದ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ, ಬೇಡಿಕೆಗಾಗಿ ಹೋರಾಟಕ್ಕಿಳಿದ ಒಬ್ಬ ರೈತ ಮಹಿಳೆ ವಿರುದ್ಧ ‘ಎಲ್ಲಿ ಮಲಗಿದ್ದೆ’ ಎಂಬ ಹೀನಾಯ ಪದ ಬಳಕೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿದ ಅವರು, ನಮಗೆ ಎಂದಿಗೂ ಅಳುವ ಮುಖ್ಯಮಂತ್ರಿ ಬೇಡ, ಆಳುವ ಮುಖ್ಯಮಂತ್ರಿ ಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ತಾಲೂಕಗಳನ್ನು ಬರಗಾಲವೆಂದು ಸಾರಲಿ: ಪುರಸಭೆ ಅಧ್ಯಕ್ಷ ಬಿ.ಎಂ.ಛತ್ರದ ಮಾತನಾಡಿ, ಸರ್ಕಾರ ಇಲ್ಲಿಯವರೆಗೂ ಕೇವಲ ರಾಣೆಬೆನ್ನೂರು ಮತ್ತು ಹಿರೇಕೆರೂರು ತಾಲೂಕುಗಳನ್ನು ಮಾತ್ರ ಬರಗಾಲವೆಂದು ಘೋಷಿಸಿದ್ದು, ಬಿಜೆಪಿ ಶಾಸಕರಿರುವ ತಾಲ್ಲೂಕಗಳನ್ನು ಮಾತ್ರ ಕೈಬಿಡುವ ಮೂಲಕ ಮಲತಾಯಿ ಧೋರಣೆ ತೋರಿದೆ, ಉಳಿದ ನಾಲ್ಕೂ ತಾಲ್ಲೂಕಗಳಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ರೈತ ಪರ ಹಿತಾಸಕ್ತಿಯಿದ್ದರೇ ನಿಯೋಗದೊಂದಿಗೆ ತೆರಳಿ ನಾಲ್ಕೂ ತಾಲ್ಲೂಕುಗಳನ್ನು ಬರಗಾಲವೆಂದು ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದ ಅವರು, ಬರುವ ನ.30 ರೊಳಗಾಗಿ ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳನ್ನು ಬರಗಾಲವೆಂದು ಘೋಷಿಸಿದ್ದಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರದ ವಿರುದ್ಧ ಬೃಹತ್ ಪ್ರಮಾಣದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಂಕ್ರಪ್ಪ ಮಾತನವರ, ಚನ್ನವೀರಗೌಡ ಬುಡ್ಡನಗೌಡ್ರ, ವೀರಯ್ಯ ಹಿರೇಮಠ, ಸುರೇಶ ಯತ್ನಳ್ಳಿ, ರವೀಂದ್ರ ಪಟ್ಟಣಶೆಟ್ಟಿ, ಸುರೇಶ ಆಸಾದಿ, ವಿರೇಂದ್ರ ಶೆಟ್ಟರ, ಶೇಖರಗೌಡ ಗೌಡ್ರ, ಅರುಣ ಪಾಟೀಲ, ನಾರಾಯಣಪ್ಪ ಕರ್ನೂಲ, ಸುಧಾ ಕಳ್ಳಿಹಾಳ, ನೀಲವ್ವ ದೊಡ್ಡಮನಿ, ಪ್ರಶಾಂತ ಯಾದ್ವಾಡ, ವಿಷ್ಣುಕಾಂತ ಬೆನ್ನೂರು, ನಾಗರಾಜ ಹಾವನೂರು, ನಿಂಗರಾಜ ಆಡಿನವರ, ಕೆಂಪೆಗೌಡ ಪಾಟೀಲ, ಚಂದ್ರಪ್ಪ ಬಾರ್ಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
