ವಿಶ್ವ ಶೌಚಾಲಯ ದಿನಾಚರಣೆ

ಹೊನ್ನಾಳಿ:

         ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಬಳಸಬೇಕು ಎಂದು ಕೆಂಚಿಕೊಪ್ಪ ಗ್ರಾಪಂ ಪಿಡಿಒ ಟಿ. ಸುರೇಶ್ ಹೇಳಿದರು.

        ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೆಂಚಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

        ಬಯಲಿನಲ್ಲಿ ಶೌಚ ಮಾಡುವುದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಬಯಲಿನಲ್ಲಿ ಶೌಚ ಮಾಡಿ ಅನಾರೋಗ್ಯದಿಂದ ಬಳಲುವ ಬದಲಿಗೆ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ನಾವೆಲ್ಲರೂ ಆರೋಗ್ಯ ಹೊಂದೋಣ ಎಂದು ತಿಳಿಸಿದರು.

         ನಮ್ಮ ಸರಕಾರಗಳು ಶೌಚಾಲಯಗಳ ನಿರ್ಮಾಣಕ್ಕೆ ಸಾಕಷ್ಟು ಧನಸಹಾಯ ನೀಡುತ್ತಿವೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಸುವ ಸಂಕಲ್ಪ ಮಾಡಬೇಕು ಎಂದು ವಿವರಿಸಿದರು.
ಜೀವವೈವಿಧ್ಯ ಸಮಿತಿಯ ಅಧ್ಯಕ್ಷ ಗಜೇಂದ್ರ ಜಿ.ಗೆಜ್ಜುರಿ ಮಾತನಾಡಿದರು,ಗ್ರಾಪಂ ಸದಸ್ಯರಾದ ಪವಿತ್ರ ಹುತ್ತೇಶ್, ಮಂಜುಳ ಮಂಜುನಾಥಾಚಾರ್, ಮಂಜಮ್ಮ ರಾಜೇಂದ್ರಪ್ಪ, ಷಡಕ್ಷರಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಿ. ಕೋಮೇಶ್ವರಪ್ಪ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

        ದಾವಣಗೆರೆಯ ಕಲಾ ತಂಡಗಳ ಕಲಾವಿದರು ಶೌಚಾಲಯಗಳ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link