ಚಿತ್ರದುರ್ಗ:
ಕಬ್ಬಿನ ಬಾಕಿ ಹಣ ಪಾವತಿಗಾಗಿ ಬೆಳಗಾಂನಲ್ಲಿ ಗಲಾಟೆ ನಡೆಸಿದ ಒಂಬತ್ತು ಮಂದಿ ನಿಜವಾಗಿಯೂ ಅಸಲಿ ರೈತರಲ್ಲ. ವಿವಿಧ ಪಕ್ಷಗಳಲ್ಲಿ ಬೆಳೆದವರು ರೈತ ಸಂಘಟನೆಗೆ ಕೆಟ್ಟ ಹೆಸರು ಬರಲಿ ಎನ್ನುವ ದುರುದ್ದೇಶದಿಂದ ಗಲಾಟೆ ಮಾಡಿರುವುದರಿಂದ ನಮ್ಮ ಬೆಂಬಲವಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದುರಂಗಸ್ವಾಮಿ ನೇರವಾಗಿ ಬೆಳಗಾವಿ ಗಲಾಟೆಯನ್ನು ಖಂಡಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಅಖಂಡಕರ್ನಾಟಕ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಬ್ಬು ಬಾಕಿ ಹಣಕ್ಕಾಗಿ ಬೆಳಗಾವಿಗೆ ಹೋಗಿದ್ದ ರೈತ ಮಹಿಳೆಯೋರ್ವಳನ್ನು ನೀನು ಇಲ್ಲಿಯವರೆಗೆ ಎಲ್ಲಿ ಮಲಗಿದ್ದೆ ಎಂದು ಕೇಳಿರುವುದು ಸರಿಯಲ್ಲ. ಯಾವುದೇ ಪಕ್ಷದವರಾಗಲಿ ಮಾತನಾಡುವಾಗ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಕೀಳುಮಟ್ಟದ ಭಾಷೆಯನ್ನು ಬಳಸಬಾರದು. ನಿಜವಾಗಿಯೂ ರೈತರ ಮೇಲೆ ಅವರಿಗೆ ಕಾಳಜಿಯಿದ್ದರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಧ್ವಂದ್ವ ಹೇಳಿಕೆ ಬೇಡ. ಇದರಿಂದ ರೈತರಿಗೆ ಹಾಗೂ ಬ್ಯಾಂಕ್ ಮ್ಯಾನೇಜರ್ ನಡುವೆ ಘರ್ಷಣೆಯಾಗುವ ಸಂಭವವಿರುತ್ತದೆ. ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದಕ್ಕಾಗಿ ಭರವಸೆಗಳನ್ನು ನೀಡುವ ಬದಲು ಸಾಲ ಮನ್ನಾ ಮಾಡುವುದಿಲ್ಲವೆಂದು ನೇರವಾಗಿ ಹೇಳಿಬಿಡಲಿ. ರೈತರ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇಷ್ಟವಿಲ್ಲ. ಬ್ಯಾಂಕ್‍ನವರು ರೈತರಿಗೆ ಸಾಲದ ನೋಟಿಸ್ ಕೊಟ್ಟರೆ ರೈತರು ಇನ್ನು ಆಕ್ರೋಶಗೊಳ್ಳುತ್ತಾರೆ. ಅದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಿ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ತೊಗರಿ ಸಂಪೂರ್ಣವಾಗಿ ಒಣಗಿರುವುದರಿಂದ ರೈತ ಮತ್ತಷ್ಟು ಸಂಕಷ್ಟದಲ್ಲಿದ್ದಾನೆ. ಫಸಲ್‍ಭೀಮ ಯೋಜನೆಯಡಿ ರೈತರಿಗೆ ಶೀಘ್ರವೇ ಪರಿಹಾರ ಕೊಡಲಿ. ಹಿರಿಯೂರಿನ ಧರ್ಮಪುರ ಕೆರೆಗೆ ಫೀಡರ್‍ಚಾನಲ್ ಆಗಬೇಕೆಂದು ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮನವಿ ನೀಡಿದ್ದೇವು. ಇದುವರೆವಿಗೂ ಆಗಿಲ್ಲ. ಕೂಡಲೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ ಸೋಮಗುದ್ದುರಂಗಸ್ವಾಮಿ ದೇವೇಗೌಡರ ಕುಟುಂಬದವರು ಮುಖ್ಯಮಂತ್ರಿಯ ಅಧಿಕಾರದಲ್ಲಿ ಕೈಯಾಡಿಸುವುದು ಬೇಡ.
ಮಗನೆಂಬ ಮಮಕಾರವಿದ್ದರೆ ಮನೆಯಲ್ಲಿಟ್ಟುಕೊಳ್ಳಲಿ. ಹೆಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಅವರ ಕುಟುಂಬದವರು ಮರೆಯಬಾರದು ಎಂದು ನೆನಪಿಸಿದರು.
ಬಾಬಾಗೌಡ ಪಾಟೀಲ್‍ರನ್ನು ಅಖಂಡ ಕರ್ನಾಟಕ ರೈತ ಸಂಘದ ನಾಯಕರೆಂದು ಗುರುತಿಸಿಕೊಂಡಿದ್ದೇವೆ. ಅದಕ್ಕಾಗಿ ಮುಂದಿನ ತಿಂಗಳು 9 ರಂದು ಬೆಳಗಾಂನಲ್ಲಿ ಎಲ್ಲಾ ಜಿಲ್ಲೆಯ ರೈತರು ಸಭೆ ಸೇರಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಕುರುಬರಹಳ್ಳಿ, ತಾಲೂಕು ಅಧ್ಯಕ್ಷ ಎಂ.ಸಿದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್‍ರೆಡ್ಡಿ, ನಾರಪ್ಪ ಬಸ್ತಿಹಳ್ಳಿ, ತಿಪ್ಪೇಸ್ವಾಮಿ, ಷಣ್ಮುಖಪ್ಪ, ಎಲ್.ಬಸವರಾಜಪ್ಪ ಅಳಗವಾಡಿ, ಶಿವಕುಮಾರ್ ಹಳಿಯೂರು, ಶಾಂತಕುಮಾರ್, ಪರಮೇಶ್ವರಪ್ಪ ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ