ಹರಿಹರ:
ಪ್ರವಾದಿ ಮೊಹಮ್ಮದ್ರವರು ಜಗತ್ತಿಗೆ ಮನುಷ್ಯತ್ವದ ಮೌಲ್ಯಗಳನ್ನು ಕಲಿಸಿದ ಮಹಾನ್ ಮಾನವತಾವಾದಿ ಯಾಗಿದ್ದಾರೆಂದು ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿದರು.
ನಗರದ ಹೊರವಲಯದ ಆಂಜನೇಯ ಬಡಾವಣೆಯಲ್ಲಿರುವ ಶ್ರೀ ಮರುಳಸಿದ್ದೇಶ್ವರ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ಇಲಾಹಿ ಸಮಾಜ ಕಲ್ಯಾಣ ಮತ್ತು ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ಈದ್ ಮಿಲಾದ್ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ತೋಳ್ಬಲ, ಹಣಬಲ ಇದ್ದವರದ್ದೆ ಕಾನೂನು ಎಂಬಂತಿದ್ದ ಈ ಜಗತ್ತಿನಲ್ಲಿ ಮಾನವೀಯತೆ, ಸಹೋದರತ್ವ, ಸಹಬಾಳ್ವೆ, ಎಲ್ಲರನ್ನೂ ಪ್ರೀತಿಸುವ ಸಂಸ್ಕøತಿ, ಶಾಂತಿ, ಅಹಿಂಸೆಯನ್ನು ಬಿತ್ತಲು ಅಸಂಖ್ಯಾತ ಮಹಾನುಭಾವರು ಶ್ರಮಿಸಿದ್ದಾರೆ. ಇಂತಹವರ ಸಾಲಿನಲ್ಲಿ ಪ್ರವಾದಿ ಮೊಹಮ್ಮದರು ಪ್ರಮುಖರಾಗಿದ್ದಾರೆ.
ಇಸ್ಲಾಂ ಎಂದರೆ ಶಾಂತಿ ಎಂದು ಅರ್ಥ. ಇಸ್ಲಾಂ ಧರ್ಮ ಪ್ರಸಾರ ಮಾಡುವ ಮೂಲಕ ಅವರು ಮನುಷ್ಯನಲ್ಲಿದ್ದ ಕ್ರೂರತ್ವವನ್ನು ನಿವಾರಿಸಿ ಮೃದುತ್ವವನ್ನು ಅರಳಿಸಿದರು. ಹೆಣ್ಣು, ಗಂಡು ಮಧ್ಯದ ಲಿಂಗ ತಾರತಮ್ಯ ಮಾಡಬಾರದು. ಹೆಣ್ಣು ಮಕ್ಕಳಿಗೂ ಶಿಕ್ಷಣ, ಆಧ್ಯತೆ ಕೊಡಿಸಲು ಬಲವಾಗಿ ಪ್ರತಿಪಾದಿಸಿದರು. ಇಂತಹವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ತಮ್ಮ ಧರ್ಮದವರ ನಡುವೆ ಆಚರಿಸುವ ಬದಲು ವಿಶೇಷ ಚೇತನರ ಶಾಲೆಯಲ್ಲಿ ಇಲಾಹಿ ಸಂಸ್ಥೆಯವರು ಆಚರಿಸುತ್ತಿರುವ ಈ ಸೇವಾ ಕಾರ್ಯವು ಪ್ರವಾದಿಯವರಿಗೆ ಗೌರ ನೀಡುವಂತಹುದ್ದಾಗಿದೆ. ಸರ್ವ ಧರ್ಮೀಯ ಗುರುಗಳ ಸಮ್ಮುಖದಲ್ಲಿ ಈ ಸಂಸ್ಥೆಯವರು ನಡೆಸುವ ಚಟುವಟಿಕೆಗಳು ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಹೆಚ್ಚಿಸುತ್ತಿದೆ ಎಂದರು.
ಆರೋಗ್ಯ ಮಾತೆ ಚರ್ಚ್ನ ಫಾ.ನಿತಿನ್ ಮುಂತಿಯಾರ್ ಮಾತನಾಡಿ, ವಿಶೇಷ ಚೇತನರನ್ನು ನೋಡಿದರೆ ನಾವು ಭಗವಂತನಿಗೆ ಎಷ್ಟೆ ಧನ್ಯವಾದ ಅರ್ಪಿಸಿದರೂ ಕಡಿಮೆಯೆ. ನಮಗೆ ಎಲ್ಲಾ ಅಂಗಗಳು ಸುಸ್ಥಿಯಲಿದ್ದು ನಾವು ದೇವರ ಕರೆ ಬರುವವರೆಗೂ ಸಮಾಜದ ಒಳಿತಿಗೆ ಶ್ರಮಿಸಬೇಕು. ಅಬಲರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕೆಂದರೆ.
ಮಸ್ಜಿದ್-ಎ-ಆಜಂ ಧರ್ಮಗುರು ಮೌಲಾನಾ ಜುಬೇರ್ ಆಲಂರವರು ಮಾತನಾಡಿ, ಅಲ್ಲಾಹನ ಸಂದೇಶದ ವಾಹಕರಾಗಿ ಪ್ರವಾದಿಯವರು ಮಾಡಿದ ಕೆಲಸ ನಮಗೆ ದಾರಿ ದೀಪವಾಗಿದೆ. ಅವರ ಬದುಕು, ಸಂದೇಶಗಳನ್ನು ಪಾಲಿಸುವುದೆ ನಾವು ಅವರಿಗೆ ನೀಡಬಹುದಾದ ಗರಿಷ್ಠ ಗೌರವವಾಗಿದೆ ಎಂದರು.
ನಂತರ ಶಾಲೆಯ ಮಕ್ಕಳಿಗೆ ಹಣ್ಣು, ಹಂಪಲು ವಿತರಣೆ, ಅನ್ನದಾಸೋಹ ನಡೆಸಲಾಯಿತು. ವಚನಾನಂದ ಶ್ರೀಗಳಿಗೆ ಧಾರ್ಮಿಕ ಗ್ರಂಥವನ್ನು ನೀಡಿ ಸತ್ಕರಿಸಲಾಯಿತು.
ಇಲಾಹಿ ಸಮಾಜ ಕಲ್ಯಾಣ ಮತ್ತು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ರಹಮತ್ ಉಲ್ಲಾ, ಉಪಾಧ್ಯಕ್ಷ ಶಕೀಲ್ ಅಹ್ಮದ್, ಕಾರ್ಯದರ್ಶಿ ರಹಮತ್ ಉರ್ ರಹಮಾನ್, ಸಹ ಕಾರ್ಯದರ್ಶಿ ಕೆ.ಜಫರುಲ್ಲಾ, ಖಜಾಂಚಿ ಎಚ್.ಮುಸ್ತಫಾ, ಜಹೀರ್, ಮುಖ್ತಿಯಾರ್, ಇಮ್ತಿಯಾಜ್, ಮುನವ್ವರ್, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಮತ್ತಿಹಳ್ಳಿ, ಮುಖ್ಯ ಶಿಕ್ಷಕರಾದ ಉಮೇಶ್ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ