ಚಳ್ಳಕೆರೆಯ ಕುವರ ಸಿ.ಕೆ.ಜಾಫರ್ ಶರೀಪ್ ನಿಧನ

ಚಳ್ಳಕೆರೆ

      ರಾಷ್ಟ್ರದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾರ್ಗದರ್ಶನ ನೀಡಿ, ಪಕ್ಷಕ್ಕೆ ನೈತಿಕ ಬಲವನ್ನು ತುಂಬಿದ ಕರ್ನಾಟಕದ ರಾಜಕೀಯ ಕ್ಷೇತ್ರದ ಭೀಷ್ಮ ಪಿತಾಮಹ ಎನ್ನಿಸಿಕೊಂಡರು. ಮಾಜಿ ರೈಲ್ವೆ ಸಚಿವ, ಹಿರಿಯ ರಾಜಕೀಯ ಮುತ್ಸದಿ, ರಾಜ್ಯದ ಪ್ರಭಾವಿ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಿ.ಕೆ.ಜಾಫರ್ ಶರೀಫ್‍ರವರು. ಅವರು ಹುಟ್ಟೂರು ಚಳ್ಳಕೆರೆಯಲ್ಲಿ ಅವರ ಸಾವಿನ ಸುದ್ದಿ ಕೇಳಿ ನೂರಾರು ಜನರು ಕಂಬನಿ ಮಿಡಿದಿದ್ದಾರೆ.

      ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಮುತ್ಸದಿ ನಾಯಕ ನಿಧನದ ಸುದ್ದಿ ಕೇಳಿದ ಚಳ್ಳಕೆರೆ ನಗರ ಹಾಗೂ ಅವರ ಮೂಲ ಹುಟ್ಟೂರಾದ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲೂ ಸಹ ಇವರ ನಿರವ ಮೌನಆವರಿಸಿದೆ. ದೊಡ್ಡೇರಿ ಗ್ರಾಮದ ಅವರ ಹಳೆಯ ಜಾಗದ ಬಳಿ ನೆರೆದಿದ್ದ ಹಲವಾರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ವಿಶೇಷ ಛಾಪು ಮೂಡಿಸಿದ ರಾಜಕಾರಣಿ ಎಂದರೆ ಜಾಫರ್ ಶರೀಫ್. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಚಳ್ಳಕೆರೆಗೆ ಭೇಟಿ ನೀಡಿದಾಗ ಅವರೊಡನೆ ಮಾತನಾಡಿದ್ದು, ಯಾವುದೇ ಕೆಲಸ ಕಾರ್ಯಗಳ ವಿಚಾರದಲ್ಲಿ ಬೆಂಗಳೂರಿನ ಅವರ ಮನೆಗೆ ತೆರಳಿದರೆ ಎಲ್ಲಾ ಕೆಲಸ ಕಾರ್ಯಗಳನ್ನು ಸಂತೋಷದಿಂದ ಮಾಡಿಕೊಡುತ್ತಿದ್ದರು ಎಂದು ಗ್ರಾಮದ ಮುಖಂಡ ಅಬ್ದುಲ್ ಗನಿಸಾಬ್ ಗ್ರಾಮದಲ್ಲಿದ್ದ ಅವರ ಹುಟ್ಟಿದ ಜಾಗವನ್ನು ಇಲ್ಲಿನ ಮಸೀದಿಗಾಗಿ ಅವರೇ ಉಚಿತವಾಗಿ ನೀಡಿದ್ಧಾರೆ ಎಂದರು.

       ಚಳ್ಳಕೆರೆ ನಗರ ಹಾಗೂ ತಾಲ್ಲೂಕಿನ ಜನತೆಯ ಬಹು ವರ್ಷಗಳ ಕನಸಾದ ರೈಲ್ವೆಯನ್ನು ಚಳ್ಳಕೆರೆಗೆ ತಂದ ಕೀರ್ತಿ ಜಾಫರ್ ಶರೀಫ್‍ರವರದ್ದು. ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದ ಅವರು ತಮ್ಮ ಹುಟ್ಟೂರಿಗೆ ರೈಲು ತರುವ ವಿಚಾರದಲ್ಲಿ ಅಂದಿನ ಧೀಮಂತರಾಷ್ಟ್ರೀಯ ನಾಯಕಿ ಇಂದಿರಾ ಗಾಂಧಿ, ಪ್ರಧಾನ ಮಂತ್ರಿ ಪಿ.ವಿ.ನರಸಿಂಹಮೂರ್ತಿ ನಿರಂತರವಾಗಿ ಒತ್ತಾಯಿಸಿ ಈ ಭಾಗಕ್ಕೆ ರೈಲಿನ ಸೌಕರ್ಯವನ್ನು ದೊರಕಿಸಿಕೊಡಲು ಏಕಾಕಿಯಾಗಿ ಹೋರಾಟ ನಡೆಸಿದವರು.

       ರಾಯದುರ್ಗ ದಿಂದ ಚಿತ್ರದುರ್ಗಕ್ಕೆ ರೈಲ್ವೆ ಮಾರ್ಗವನ್ನು ಗುರುತಿಸಿ ಅದನ್ನು ಸರ್ವೆ ಮಾಡಿಸಿ, ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ತಾಲ್ಲೂಕಿಗೆ ರೈಲಿನ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿ ರೈಲ್ವೆ ಮಾರ್ಗದ ಸರ್ವೆಯನ್ನು ಕೈಗೊಳ್ಳುವಲ್ಲಿ ಯಶಸ್ಸಿಯಾದರು. ಜಾಫರ್ ಶರೀಫ್‍ರವರ ನಿರಂತರ ಹೋರಾಟ ಹಾಗೂ ವಿಶೇಷ ಕಾಳಜಿಯಿಂದ ಚಿತ್ರದುರ್ಗದಿಂದ ರಾಯದುರ್ಗಕ್ಕೆ ಚಳ್ಳಕೆರೆ ಮೂಲಕ ರೈಲು ಹಾದು ಹೋಗುವ ಭಾಗ್ಯ ದೊರೆಯಿತು.

       ಜಾಫರ್ ಶರೀಫ್‍ರವರ ಮುಂದಾಲೋಚನೆಯಿಂದ ಬಂದ ಈ ರೈಲು ಇಂದು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಲಾಭದಾಯವಾಗಿ ಮುನ್ನಡೆಯುತ್ತಿದೆ. ಸಂಸದರಾಗಿದ್ದ ಜಾಫರ್ ಶರೀಫ್‍ರವರು 1991ರಲ್ಲಿ ಪುನಃ ಸಂಸದರಾಗಿ ಆಯ್ಕೆಯಾಗಿ 1991-1995ರ ತನಕ ಪಿ.ವಿ.ನರಸಿಂಹರಾವ್‍ರವರ ಸಂಪುಟದಲ್ಲಿ ರೈಲ್ವೆ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದರು.

       ಜಾಫರ್ ಶರೀಪ್‍ರವರ ನಿರಂತರ ಪ್ರಯತ್ನದಿಂದ ದಿನಾಂಕ 27 ಫೆಬ್ರವರಿ 1990ರಲ್ಲಿ ಚಳ್ಳಕೆರೆ ನಗರದಲ್ಲಿ ಮೀಟರ್ ಗೇಜ್ ರೈಲ್ವೆ ಮಾರ್ಗ ಪ್ರಾರಂಭವಾಯಿತು. ಅಂದು ರೈಲ್ವೆ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಈ ಮಾರ್ಗವನ್ನು ಉದ್ಘಾಟನೆ ಮಾಡಿದ್ದು, ಮುಖ್ಯಮಂತ್ರಿಯಾಗಿದ್ದ ವೀರೇಂದ್ರಪಾಟೇಲ್, ಚಿತ್ರದುರ್ಗ ಲೋಕಸಭಾ ಸದಸ್ಯ ಸಿ.ಪಿ.ಮೂಡಲಗಿರಿಯಪ್ಪ, ಸಂಸದರಾಗಿದ್ದ ಎಚ್.ಹನುಮಂತಪ್ಪ, ಶಾಸಕರಾದಗಿದ್ದ ಎನ್.ಜಯಣ್ಣ, ಎಚ್.ಏಕಾಂತಯ್ಯ, ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಆಗಿದ್ದ ಎಸ್.ಪಿ.ಜೈನ್, ರೈಲ್ವೆ ಇಂಜಿನಿಯರ್ ಇ.ಶ್ರೀಧರನ್ ಅಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಇಲ್ಲಿನ ರೈಲ್ವೆ ಮಾಸ್ಟರ್ ಬಿ.ಹನುಮಂತಪ್ಪ ಮಾಹಿತಿ ನೀಡಿದ್ಧಾರೆ.

         ಚಳ್ಳಕೆರೆ ನಗರದ ಪ್ರಸ್ತುತ ಇಂದಿನ ವಾಲ್ಮೀಕಿ ನಗರದ ಸಮೀಪದಲ್ಲಿ ಇವರಿಗೆ ಸೇರಿದ ಸುಮಾರು 10 ಎಕರೆ ತೋಟವಿದ್ದು ಈ ಅದು ಬೇರೆಯವರಿಗೆ ವರ್ಗಾವಣೆಯಾಗಿದ್ದರೂ ಆ ಪ್ರದೇಶವನ್ನು ಇಂದಿಗೂ ಜನ ಜಾಫರ್ ಶರೀಫ್ ಲೇಔಟ್ ಎಂದು ಗುರುತಿಸುತ್ತಾರೆ. ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಇವರ ವಾಸದ ಮನೆ ಇದ್ದು ಈಗ ಅದು ಬೇರೆಯವರ ಪಾಲಾಗಿದೆ. ಪ್ರಸ್ತುತ ಇಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಜಾಫರ್ ಶರೀಫ್‍ರವರ ಮನೆ ಇದೆ. ಅವರ ಹಲವಾರು ಒಡನಾಡಿಗಳು ಇಂದು ಇಲ್ಲವಾದರೂ ಅವರ ಹೆಸರು ಮಾತ್ರ ಈ ಪ್ರದೇಶದಲ್ಲಿ ಅಚ್ಚಹಸಿರಾಗಿ ಉಳಿದಿದೆ.

         ಜಾಫರ್ ಶರೀಪ್‍ರವರ ಒಡನಾಡಿಗಳಾದ ಎ.ವೆಂಕಟಪ್ಪ, ಕೆ.ಟಿ.ಧರಣೇಂದ್ರಯ್ಯ, ಎನ್.ಜಯಣ್ಣ, ಪಟೇಲ್ ಪಾಪನಾಯಕ ಯಾರೂ ಈಗಿಲ್ಲ. ಆದರೆ, ಜಾಫರ್ ಶರೀಫ್‍ರವರು ಕೇವಲ ಚಳ್ಳಕೆರೆ ತಾಲ್ಲೂಕಿಗೆ ರೈಲು ತಂದಿದ್ದಷ್ಟೇಯಲ್ಲದೆ ಅವರ ಅವಧಿಯಲ್ಲಿ ಕೊಂಕಣ ರೈಲ್ವೆಯ ಸರ್ವೆಯನ್ನು ಸಹ ಮಾಡಿಸುವ ಮೂಲಕ ರಾಜ್ಯದಲ್ಲಿ ರೈಲು ಸಂಚಾರಕ್ಕೆ ಹೆಚ್ಚಿನ ಶ್ರಮವನ್ನು ಪಟ್ಟವರು.

          ಪ್ರತಿವರ್ಷ ನಗರದ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿನ ತಮ್ಮ ತಂದೆ ಮಹಮ್ಮದ್ ಕರೀಂಸಾಬ್‍ರವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿ ಕೆಲ ಕಾಲ ಪ್ರಾರ್ಥನೆ ನಡೆಸುತ್ತಿದ್ದರು. ತಪ್ಪದೆ ಪ್ರತಿವರ್ಷವೂ ತಂದೆಯ ಸಮಾಧಿಗೆ ದರ್ಶನ ಪಡೆಯುತ್ತಿದ್ದ ಇವರು ಇಲ್ಲಿದ್ದ ಹಳೆಯ ಗೆಳೆಯರೊಂದಿಗೆ ಸೇರಿ ತಮ್ಮ ಗೆಳತನದ ಮೆಲಕು ಹಾಕುತ್ತಿದ್ದರು. ತಾಲ್ಲೂಕಿನ ಹಿರಿಯ ರಾಜಕಾರಣಿ ಜಾಫರ್ ಶರೀಫ್‍ರವರ ನಿಧನದಿಂದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link