ಚಿತ್ರದುರ್ಗ:
ಯಾವ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು. ಭಾವನೆಗಳಿಗೆ ವಿರುದ್ದವಾಗಿ ಮಾತನಾಡಿದಾಗ ಸಂಘರ್ಷ, ಅಸಮಾನತೆ, ಅಶಾಂತಿಯುಂಟಾಗುತ್ತದೆ ಎಂದು ಇಹ್ಸಾನ್ ಸಂಸ್ಥೆ ಬೆಂಗಳೂರಿನ ಅಧ್ಯಕ್ಷರಾದ ಎನ್.ಕೆ.ಎಂ.ಮೌಲನಾ ಶಾಪಿ ಸಹದಿ ಹೇಳಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಅಬ್ದುಲ್ ನಜೀರ್ ಸಾಬ್ ಮತ್ತು ಗ್ರಾಮೀಣಾಭಿವೃದ್ದಿ ಚಿಂತನೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದ ಸಮ್ಮುಖ ವಹಿಸಿ ಮಾತನಾಡಿದರು.
ಜಗತ್ತಿಗೆ ಶಾಂತಿ ಸಮಾನತೆಯ ಸಂದೇಶವನ್ನು ಸಾರಿದ ಪ್ರವಾದಿ ಮಹಮದ್ ಪೈಗಂಬರ್ರವರನ್ನು ವಿರೋಧಿಸುವವರು ಇದ್ದರು. ಅದೆ ರೀತಿ ಎಲ್ಲಾ ಧರ್ಮದ ಶರಣರು ದಾರ್ಶನಿಕರುಗಳು ಸಾಕಷ್ಟು ವಿರೋಧಗಳನ್ನು ಎದುರಿಸಿದ್ದರು. ಬಾಯಾರಿದ ಮನುಷ್ಯನಿಗೆ ನೀರು ಕೊಡುವುದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಹಾಗಾಗಿ ನಜೀರ್ಸಾಬ್ರವರ ಕನಸು ನನಸಾಗಬೇಕಾದರೆ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಅಭಿವೃದ್ದಿಯ ಕಡೆ ಹೋಗಬೇಕು ಎಂದು ಕರೆ ನೀಡಿದರು.
ಜಾತಿ, ಧರ್ಮ ರಾಜಕಾರಣ ಅವರವರಿಗೆ ಬಿಟ್ಟು ವಿಚಾರ. ಕೆಲವು ಮಠಾಧಿಪತಿಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲರಿಗೂ ಶಿಕ್ಷಣ ಸಿಗುವಂತೆ ಧಾರ್ಮಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವು ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲರನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೆ ಕೆಲವು ಕೋಮುವಾದಿಗಳು ದೇಶದಲ್ಲಿ ಧರ್ಮ ಜಾತಿಗಳ ನಡುವೆ ವಿಷಬೀಜ ಬಿತ್ತಿ ಮತಗಳನ್ನು ವಿಭಜಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಅಂತಹವರ ವಿರುದ್ದ ಇನ್ನಾದರೂ ಜಾಗೃತಗೊಂಡು ಚುನಾವಣೆಯಲ್ಲಿ ನೀಡುವ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.
ಮುಸ್ಲಿಂರಿಗೆ ನಾಯಕತ್ವದ ಕೊರತೆಯಿದೆ. ನಜೀರ್ಸಾಬ್ರವರಿಗೆ ಜಾತಿ ಇರಲಿಲ್ಲ. ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದರು. ಹಾಗಾಗಿ ಪ್ರತಿಯೊಬ್ಬರು ಜಾತಿ ಸಂಘರ್ಷದಿಂದ ಹೊರಬರಬೇಕಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಪಾರ್ಸಿ ಧರ್ಮ ಇವುಗಳ್ಯಾವು ಹಿಂಸೆಯನ್ನು ಮಾಡುವಂತೆ ಹೇಳಿಲ್ಲ. ಸಮಾನತೆ ಎಂಬುದೇ ಎಲ್ಲಾ ಧರ್ಮಗಳ ಸಾರ ಎಂಬುದನ್ನು ತಿಳಿದುಕೊಂಡು ಎಲ್ಲರೂ ಸೌಹಾರ್ಧತೆಯಿಂದ ಬದುಕುವುದನ್ನು ಮೊದಲು ಕಲಿಯಬೇಕು. ಜಾತ್ಯಾತೀತ ದೇಶ ಭಾರತದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವವರ ವಿರುದ್ದ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ. ಅದಕ್ಕಾಗಿ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಿ ಭಾರತವನ್ನು ಕಾಪಾಡಬೇಕಿದೆ ಎಂದು ಮನವಿ ಮಾಡಿದರು.
ದಲಿತ ಮುಖಂಡ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡಿ ಆಗಸ್ಟ್ ತಿಂಗಳು ಕಳೆಯಿತೆಂದರೆ ಚಿತ್ರದುರ್ಗದಲ್ಲಿ ಧಾರ್ಮಿಕ ಮೆರವಣಿಗೆಗಳನ್ನು ನೋಡಲು ಆಗುವುದಿಲ್ಲ. ಜನರಲ್ಲಿ ಭಯ ಹುಟ್ಟಿಸಿ ಮೆರವಣಿಗೆಯನ್ನು ಮಾಡುವುದು ಯಾರಿಗೂ ಶೋಭೆಯಲ್ಲ. ಧರ್ಮ ಅವರವರ ವೈಯಕ್ತಿಕ ವಿಚಾರ. ಆದರೆ ಜಾತಿ ಧರ್ಮಗಳ ವಿರುದ್ದ ಶಕ್ತಿ ಪ್ರದರ್ಶನ ಮಾಡಬಾರದು. ಧರ್ಮದ ಹೊರತಾಗಿ ಪ್ರಗತಿಪರವಾಗಿ ಆಲೋಚನೆ ಮಾಡುವವರು ದೇಶಕ್ಕೆ ಬೇಕಾಗಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ದಿ ಖಾತೆ ವಹಿಸಿಕೊಂಡ ಎರಡೇ ವರ್ಷದಲ್ಲಿ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ದಿಯ ಮಹತ್ವ ಏನು ಎಂಬುದನ್ನು ತೋರಿಸಿದರು. ಪ್ರತಿ ಗ್ರಾಮಕ್ಕೂ ಬೋರ್ವೆಲ್ಗಳನ್ನು ಕೊರೆಸಿ ಜನರಿಗೆ ಕುಡಿಯುವ ನೀರು ಕೊಡುವಲ್ಲಿ ಕ್ರಾಂತಿ ಮಾಡಿದವರು. ಅಂತಹವರ ತಾತ್ವಿಕ ಚಿಂತನೆ ಎಲ್ಲರಲ್ಲಿಯೂ ಮೂಡಿದಾಗ ಮಾತ್ರ ಜೀವನದಲ್ಲಿ ಸುಧಾರಣೆ ಕಂಡುಕೊಳ್ಳಬಹುದು ಎಂದರು.
ಜಾತಿ ವ್ಯವಸ್ಥೆಯಲ್ಲಿ ನಜೀರ್ಸಾಬ್ರವರಿಗೆ ನಂಬಿಕೆಯಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬೇಕೆಂಬುದು ಅವರ ಮಹದಾಸೆಯಾಗಿತ್ತು. ದೇಶದಲ್ಲಿ 25 ರಿಂದ 30 ಕೋಟಿ ಮುಸ್ಲಿಂ ಜನಾಂಗದವರಿದ್ದಾರೆ. ಆದರೆ ನಾಯಕತ್ವದ ಕೊರತೆ ಇದೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ಸಾಚಾರ್ ವರದಿ ಇನ್ನು ಜಾರಿಯಾಗಿಲ್ಲ ಎಂದು ಮುಸ್ಲಿಂ ಜನಾಂಗವನ್ನು ಎಚ್ಚರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್ಕುಮಾರ್ ಮಾತನಾಡುತ್ತ ನಜೀರ್ಸಾಬ್ರವರು ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಇಡೀ ರಾಜ್ಯಾದ್ಯಂತ ಕೊಳವೆಬಾವಿಗಳನ್ನು ಕೊರೆಸಿ ಜನರಿಗೆ ನೀರಿನ ದಾಹ ತೀರಿಸಿದ ಅವರನ್ನು ನೀರ್ಸಾಬಿ ಎಂದೂ ಈಗಲೂ ಜನ ಅಭಿಮಾನದಿಂದ ಕರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳು ಜಾತಿ ಜಾತಿಗಳ ನಡುವೆ ಸಂಘರ್ಷವಿಟ್ಟು ದೇಶದ ಶಾಂತಿಯನ್ನು ಕದಡುತ್ತಿದ್ದಾರೆ. ಟಿಪ್ಪುಜಯಂತಿ ಮಾಡಿದರೆ ದೊಡ್ಡ ಅನಾಹುತವೇ ಆಗುತ್ತೇನೋ ಎನ್ನುವ ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ನಜೀರ್ಸಾಬ್, ಟಿಪ್ಪುಸುಲ್ತಾನ್, ಅಬ್ದುಲ್ಕಲಾಂರವರ ಕೊಡುಗೆ ದೇಶಕ್ಕೆ ಅಪಾರ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ವಿನಂತಿಸಿದರು.
ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಎಟುಝಡ್ ಸುದ್ದಿವಾಹಿನಿಯ ಸಿ.ಇ.ಓ. ಬೆಂಗಳೂರಿನ ಸೈಯದ್ ಕನ್ನಡ ನಜೀರ್, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಜಾನಪದ ಹಾಡುಗಾರ ಹರೀಶ್ ವೇದಿಕೆಯಲ್ಲಿದ್ದರು.ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
