ತುಮಕೂರು
ಸಂಘಸಂಸ್ಥೆ ಹಾಗೂ ಸಮುದಾಯ ಆಧಾರಿತ ಸರ್ಕಾರೇತರ ಸಂಸ್ಥೆಗಳು ನಡೆಸುವ ಆರೋಗ್ಯ ಶಿಬಿರಗಳಿಂದ ಬಡವ ರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ನಗರದ ಅಶೋಕರಸ್ತೆಯ ಹಜರತ್ ಮದರ್ಷಾ ಮಕಾನ್ ವಕ್ಫ್ ತುಮಕೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, 40 ವರ್ಷದ ನಂತರ ಮನುಷ್ಯನಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ, ಸೂಕ್ತ ಚಿಕಿತ್ಸೆ ದೊರೆತರೆ, ಇದನ್ನು ನಿವಾರಣೆ ಮಾಡಬಹುದು ಎಂದರು.
ಕಣ್ಣಿನ ತೊಂದರೆಗೆ ಹಲವು ಕಾರಣಗಳಿವೆ, ಬಿ.ಪಿ,ಶುಗರ್ನಂತಹ ಕಾಯಿಲೆಗಳು ಉಲ್ಬಣಗೊಂಡಾಗಲೂ ಕಣ್ಣಿನ ದೋಷ ಗೋಚರಿಸಬಹುದು ಹಾಗಾಗಿ ಇಂತಹ ರೋಗಗಳಿಗೆ ತುತ್ತಾದವರು ಸಾಧ್ಯವಷ್ಟು ಎಚ್ಚರಿಕೆವಹಿಸಬೇಕು. ವೈದ್ಯರ ಸಲಹೆಯಂತೆ ನಿಗದಿತ ಸಮಯಕ್ಕೆ ಔಷಧಗಳನ್ನು ಪಡೆಯುವ ಮೂಲಕ ಕಣ್ಣು ಹಾಳಾಗದಂತೆ ಎಚ್ಚರಿಕೆವಹಿಸಬೇಕು. ಇಂದು ಹಜರತ್ ಮದರ್ಷಾ ಮಕಾನ್ ವತಿಯಿಂದ ನಡೆಸುತ್ತಿರುವ ಈ ಶಿಬಿರ ಹೆಚ್ಚು ಉಪಯುಕ್ತವಾಗಿದೆ. ನುರಿತ ವೈದ್ಯರ ಶಿಬಿರದಲ್ಲಿ ಭಾಗವಹಿಸಿ, ಚಿಕಿತ್ಸೆ ನೀಡುತ್ತಿದ್ದು, ಜನರು ಇದರ ಉಪಯೋಗ ಪಡೆದು ಕೊಳ್ಳುವಂತೆ ಡಾ.ವೀರಭದ್ರಯ್ಯ ಸಲಹೆ ನೀಡಿದರು.
ಪತ್ರಕರ್ತರಾದ ಮುನೀರ್ ಅಹಮದ್ ಮಾತನಾಡಿ, ಹಜರತ್ ಮದರ್ಷಾ ಮಕಾನ್ನಲ್ಲಿ ನಡೆಯುತ್ತಿರುವ 2ನೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಇದಾಗಿದ್ದು, ಎಲ್ಲ ಸಮುದಾಯದ ಬಡವರನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಉಚಿತ ತಪಾಸಣಾ ಶಿಬಿರವನ್ನು ಸಹ ಹಮ್ಮಿಕೊಳ್ಳುವ ಇಚ್ಛೆ ಇದ್ದು, ಇಂತಹ ಸಂಸ್ಥೆಗಳಿಗೆ ಪ್ರೋತ್ಸಾಹಿಸುವ ಮೂಲಕ ಬಡವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ಹಜರತ್ ಮದರ್ಷಾ ಮಕಾನ್ ವಕ್ಫ್ ಕಮಿಟಿ ಅಧ್ಯಕ್ಷ ಮೆಹಬೂಬ್ ಪಾಷ ಮಾತನಾಡಿ ಎಲ್ಲ ಸಮುದಾಯದ ಬಡವರನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ಆಯೋಜಿಸಲಾಗಿದೆ. 500ಕ್ಕೂ ಹೆಚ್ಚು ಮಂದಿ ಈ ಶಿಬಿರದಲ್ಲಿ ಈಗಾಗಲೇ ಭಾಗವಹಿಸಿದ್ದು, ಶಿಬಿರ ಪೂರ್ಣಗೊಳ್ಳುವುದರೊಳಗೆ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ, ಮುಂದಿನ ದಿನಗಳಲ್ಲಿ ಹೃದ್ರೋಗ ಹಾಗೂ ಕಿಡ್ನಿಗೆ ಸಂಬಂಧಿಸಿದ ಶಿಬಿರವನ್ನು ಜಿಲ್ಲಾಸ್ಪತ್ರೆ ಸಹಕಾರದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಶೀಘ್ರವಾಗಿ ಶಿಬಿರದ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದರು.
ಶಿಬಿರದ ಸಂಚಾಲಕರಾದ ಸೈಫುಲ್ಲಾಖಾನ್, ಸಾಧಿಕ್ ಅಲಿ,ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಡಾ.ಕಲ್ಲೇಶ್, ವಕ್ಫ್ ಮಂಡಳಿ ಕಾರ್ಯದರ್ಶಿ ಆಯೀಷಾ ಸೇರಿದಂತೆ ಹಲವರು ಶಿಬಿರದಲ್ಲಿ ಭಾಗವಹಿಸಿದ್ದರು, ಶಿಬಿರದಲ್ಲಿ 800ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿ, ಅಗತ್ಯ ಸಲಹೆ ಮತ್ತು ಔಷಧಿ ನೀಡಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯ ಇರುವವರನ್ನು ಗುರುತಿಸಿ ಬೆಂಗಳೂರಿನ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸ್ ಕರೆತರಲು ಕ್ರಮ ಕೈಗೊಳ್ಳಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ