ಚಳ್ಳಕೆರೆ
ನಗರದ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಸ್ಪಷ್ಟ ಸೂಚನೆ ಇದ್ದರೂ ಸಹ ಇದರ ಪಾಲನೆ ಮಾತ್ರ ನಿಯಮ ಬದ್ದವಾಗಿ ಆಗುತ್ತಿಲ್ಲ. ಕಾರಣ ಅಂಗನವಾಡಿಗೆ ಬರುವ ಪುಟ್ಟ ವಯಸ್ಸಿನ ಮುಗ್ಧ ಮಕ್ಕಳು ತಮಗೆ ಅರಿವಿಲ್ಲದಂತೆಯೇ ಶಾಲಾ ಕಟ್ಟಡ ಸುತ್ತಲು ಓಡಾಟ ನಡೆಸುವುದರಿಂದ ಗಿಡಗಂಟೆಗಳು ಬೆಳೆದಿದ್ದು ಮಕ್ಕಳಿಗೆ ವಿಷ ಜಂತುಗಳಿಂದ ಅಪಾಯವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಳ್ಳಕೆರೆಯ ಮದಕರಿ ನಗರದ ವಾರ್ಡ್ ನಂ.27ರಲ್ಲಿ ಅಂಗನವಾಡಿ ಕಟ್ಟಡವಿದ್ದು ಇಲ್ಲಿ ಸಹ ಹಲವಾರು ಪುಟ್ಟ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಆಗಮಿಸುತ್ತಿದ್ಧಾರೆ. ಆದರೆ, ಅಂಗನವಾಡಿ ಕೇಂದ್ರದ ಪಕ್ಕ, ಮುಂಭಾಗದಲ್ಲಿ ಬೆಳೆದಿರುವ ಜಾಲಿ ಗಿಡ ಹಾಗೂ ಇತರೆ ಗಿಡಗಳಿಂದ ಆವೃತ್ತವಾಗಿದ್ದು, ಮಕ್ಕಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ.
ಕಾರಣ ಮಕ್ಕಳು ಕಲಿಕೆ ವೇಳೆಯಲ್ಲಿ ಮೂತ್ರ ವಿಸರ್ಜನೆಗೆ ಅನಿವಾರ್ಯವಾಗಿ ಹೊರಗೆ ಬರಬೇಕಿದೆ. ಪ್ರತಿನಿತ್ಯ ಈ ಅಪಾಯಕಾರಿ ಗಿಡಗಳ ಮಧ್ಯದಲ್ಲೇ ತಮ್ಮ ಕಾರ್ಯವನ್ನು ಮುಗಿಸಬೇಕಿದೆ. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗೆ ಯಾರೂ ಇರುವುದಿಲ್ಲ. ಅದ್ದರಿಂದ ಗಿಡಗಂಟೆಗಳಲ್ಲಿ ಅಡಗಿರುವ ವಿಷ ಜಂತುಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದರೆ ಮಕ್ಕಳ ಪ್ರಾಣಕ್ಕೆ ಅಪಾಯವಿದೆ. ಸಂಬಂಪಟ್ಟ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಶುಚಿತ್ವ ಕಾಪಾಡಲು ಮುಂದಾಗಬೇಕಿದೆ. ಕಡೆಯ ಪಕ್ಷ ಬೆಳೆದಿರುವ ಗಿಡಗಳನ್ನು ತೆಗೆಸಿದಲ್ಲಿ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಹಾಗೂ ಅಪಾಯವು ತಪ್ಪುತ್ತದೆ.
ಸಿಡಿಪಿಒ ಮಾಹಿತಿ :- ಈ ಬಗ್ಗೆ ಇಲ್ಲಿನ ಶಿಶು ಅಭಿವೃದ್ಧಿ ಅಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಇಲ್ಲಿನ ನಗರಸಭೆಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ಸಮಜಾಯಿಸಿ ನೀಡಿರುತ್ತಾರೆ. ನಗರಸಭೆಯವರೇ ಇಲ್ಲಿನ ಗಿಡಗಂಟೆಗಳನ್ನು ಸ್ವಚ್ಚಗೊಳಿಸಿಕೊಡಬೇಕೆಂದು ಮಾಹಿತಿ ನೀಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
