ಹುಳಿಯಾರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕುಮಾರಿ ಗೀತಕ್ಕನವರು ಮಾತನಾಡಿ, ಯಾವ ವ್ಯಕ್ತಿಯೂ ಅಧಿಕಾರ, ಹಣ, ಬಣ್ಣ, ಶಕ್ತಿಗಳಿಂದ ಶ್ರೇಷ್ಠನಾಗಲು ಸಾಧ್ಯವಿಲ್ಲ. ಮಾಡುವ ಕೆಲಸದಿಂದ ಶ್ರೇಷ್ಠನಾಗಬೇಕು. ನಾವು ಮಾಡುವ ಪೂಜೆ ಭೌತಿಕವಾಗಿರದೆ ಆಂತರಿಕವಾಗಿ ಭಕ್ತಿಯಿಂದ ದೇವರನ್ನು ಪೂಜಿಸಬೇಕು ಎಂದರು.
ಮೃಗಗಳಂತೆ ಸ್ವಾರ್ಥ ಭಾವನೆ ನಡೆಸುವುದನ್ನು ಬಿಟ್ಟು ಮನುಷ್ಯತ್ವವನ್ನು ರೂಢಿಸಿಕೊಳ್ಳಬೇಕು. ಸ್ವಾರ್ಥವನ್ನು ತ್ಯಜಿಸಿ ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಸೆಗೆ ಬಲಿಯಾಗಬಾರದು ಎಂದರಲ್ಲದೆ, ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ಇದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಅಧ್ಯಕ್ಷ ಎಚ್.ಡಿ.ದುರ್ಗರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಬಿ.ನಾಗರಾಜು, ಗಣಪತಿ ದೇವಸ್ಥಾನದ ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ