ದಾವಣಗೆರೆ :
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತಕ್ಷಣ ಸುಗ್ರಿವಾಜ್ಞೆ ಹೊರಡಿಸಬೇಕೆಂದು ವಿಶ್ವ ಹಿಂದೂ ಪರಿಷದ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ನಮ್ಮ ತಾಳ್ಮೆಯ ಕಟ್ಟೆ ಹೊಡೆದಿದ್ದು, ಇನ್ನೂ ಕಾಯಲು ಸಾಧ್ಯವೇ ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ರಾಮಮಂದಿರ ನಿರ್ಮಾಣಕ್ಕಾಗಿ ಮಸೂದೆ ಹೊರಡಿಸಬೇಕೆಂದು ಆಗ್ರಹಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ವಿಚಾರದಲ್ಲಿ 1991ರಲ್ಲಿ ಅಂದಿನ ಪ್ರಧಾನಿ ಚಂದ್ರಶೇಖರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಒಪ್ಪಿಕೊಂಡಿರುವಂತೆ ಅಖಿಲ ಭಾರತ ಬಾಬರಿ ಮಸೀದಿ ಸಮಿತಿ ನಡೆದುಕೊಳ್ಳಬೇಕು. ಅಂದಿನ ಸಂಧಾನ ಸಭೆಯಲ್ಲಿ ಬಾಬರಿ ಮಸೀದಿ ಸಮಿತಿಯು ಬಾಬರಿ ಮಸೀದಿಯನ್ನು ಸರಯೂ ನದಿ ದಡದ ಬಂಜರು ಭೂಮಿಯಲ್ಲಿ ಕಟ್ಟಿದ್ದು, ಒಂದು ವೇಳೆ ಅದು ಮಂದಿರದ ಭಾಗ ಎಂಬುದು ಸಾಬೀತಾದರೆ, ತಾವು ಸ್ವಇಚ್ಛೆಯಿಂದ ಜಾಗ ಹಿಂದುಗಳಿಗೆ ಬಿಟ್ಟುಕೊಡುವುದಾಗಿ ಸಮ್ಮತಿ ನೀಡಿತ್ತು. ಆದ್ದರಿಂದ ಅಖಿಲ ಭಾರತ ಬಾಬರಿ ಮಸೀದಿ ಸಮಿತಿಯು ಕೊಟ್ಟ ಮಾತಿನಂತೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು.
1993ರಲ್ಲಿ ರಾಷ್ಟ್ರಪತಿ ಶಂಕರ ದಯಾಳ್ ಶರ್ಮ ವಿವಾದಿತ ಕಟ್ಟಡವಾದ ಬಾಬರಿ ಮಸೀದಿ ನಿರ್ಮಾಣಕ್ಕೂ ಮೊದಲು, ಅಲ್ಲಿ ಹಿಂದು ಮಂದಿರವಿತ್ತೇ ಅಥವಾ ಅಲ್ಲಿ ಮಸೀದಿಯೇ ಇತ್ತೆ ಎಂಬುದಾಗಿ ಸುಪ್ರೀಂ ಕೋರ್ಟ್ಗೆ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ 1994ರಲ್ಲಿ ರಾಷ್ಟ್ರಪತಿಗಳ ಪ್ರಶ್ನೆ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನಿಸಿತ್ತು. ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಪ್ರಮಾಣ ಪತ್ರದ ಮೂಲಕ ಹೌದು, ಅದು ಮಂದಿರವಿದ್ದ ಸ್ಥಳವೆಂಬುದಾಗಿ ವರದಿ ನೀಡಿದೆ.
ಕೇಂದ್ರ ಸರ್ಕಾರವು ಹಿಂದು ಸಮಾಜದ ಭಾವನೆಗಳನ್ನು ಅರ್ಥೈಸಿಕೊಂಡು ವಿವಾದಿತ ಪ್ರದೇಶವನ್ನು ಹಿಂದುಗಳಿಗೆ ಮರಳಿಸುವ ಕ್ರಮವನ್ನು ಕೈಗೊಳ್ಳುತ್ತದೆ. ಅದು ಮಸೀದಿ ಎಂದಾದರೆ ಮುಸ್ಲಿಂ ಸಮಾಜಕ್ಕೆ ಜಾಗ ಒಪ್ಪಿಸಲಾಗುವುದು ಎಂಬುದಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳ ಸಲಹೆಯಂತೆ ಲಕ್ನೋ ಪೀಠಕ್ಕೆ ವಿವಾದಿದ ಪ್ರದೇಶದ ನೆಲದಾಳದ ಕುರುಹುಗಳನ್ನು ತೆಗೆಸಿ, ವರದಿ ನೀಡಲು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಲಕ್ನೋ ಪೀಠವು ವಿವಾದಿತ ಪ್ರದೇಶದಡಿ ಕೆನಡಾ ದೇಶದ ರಾಡಾರ್ ಸಂಸ್ಥೆಯು ಜಿಪಿಆರ್(ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ಸರ್ವೇ ಮಾಡಿ, ಪೋಟೋ ಸೆರೆ ಹಿಡಿದು ಕೊಟ್ಟಿತ್ತು. ವಿವಾದಿತ ಪ್ರದೇಶದಡಿ ಪ್ರಾಚೀನ ಕಟ್ಟಡದ ಅವಶೇಷವಿದ್ದು, ಗಣೇಶ, ಲಕ್ಷ್ಮಿ, ವಿಷ್ಣುವಿನ ವಿಗ್ರಹ, ದೇವಸ್ಥಾನದ ಕಂಬಗಳು, ಅಡಿಪಾಯದ ಕಲ್ಲುಗಳು, ನೆಲಹಾಸು, ಗೋಡೆ ಹೀಗೆ ವಿಶಾಲ ಕಟ್ಟಡದ ಕುರುಹುಗಳನ್ನು ನೀಡಿತ್ತು. ಜಿಪಿಆರ್ ಸರ್ವೇ ವರದಿ ದೃಢೀಕರಿಸಲು ಹೈಕೋರ್ಟ್ ಆದೇಶದಂತೆ ಪ್ರಾಚ್ಯ ಸಂಶೋಧನಾ ಇಲಾಖೆ ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಿತ್ತು. ಇಲ್ಲಿ ಮೊದಲಿದ್ದ ಕಟ್ಟಡವು ವಿಶಾಲ ಉತ್ತರ ಭಾರತದ ದೇವಸ್ಥಾನಗಳ ಶೈಲಿಯಲ್ಲಿದೆ.
ಅಲಂಕೃತ ಗೋಡೆಗಳು, ಭಗ್ನ ಶಿಲ್ಪಗಳು, ಅಷ್ಟ ಭುಜಾಕೃತಿಯ ಫಲಕಗಳು, ಐವತ್ತು ಕಂಬಗಳ ಬೃಹತ್ ಕಟ್ಟಡದ ಅವಶೇಷಗಳಿತ್ತು ಎಂಬುದರ ಬಗ್ಗೆ ವರದಿ ನೀಡಿತ್ತು. ಆದರೂ ಕೇಂದ್ರ ಸರ್ಕಾರ ಮಂದಿರ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
77 ಎಕರೆ, 2.77 ಎಕರೆ ಜಾಗವನ್ನು ಮಂದಿರ ನಿರ್ಮಾಣಕ್ಕೆ ಬಿಟ್ಟು ಕೊಡಬೇಕು. ಮಸೂದೆ ಮಂಡಿಸಲಾಗದಿದ್ದರೆ ಹೊರಡಿಸುವ ಮೂಲಕವಾದರೂ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ವಿಭಾಗೀಯ ಕಾರ್ಯದರ್ಶಿ ಷಡಕ್ಷರಪ್ಪ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಹಿರಿಯ ಮುಖಂಡರಾದ ಕೆ.ಬಿ.ಶಂಕರ ನಾರಾಯಣ, ರವೀಂದ್ರ, ಪ್ರಹ್ಲಾದ ತೇಲ್ಕರ್, ಯೋಗೇಶ ಭಟ್, ರಾಜು ಬೇಕರಿ, ಡಿ.ಬಸವರಾಜ ಗುಬ್ಬಿ, ಕೃಷ್ಣಮೂರ್ತಿ, ಆರ್.ಪ್ರತಾಪ್, ಎಸ್ಓಜಿ ಹನುಮಂತಪ್ಪ ಇತರರಿದ್ದರು.