ಶಿರಾ:
ಕಳೆದ ನೂರಾರು ವರ್ಷಗಳಿಂದಲೂ ಅರಣ್ಯಕ್ಕಾಗಿ ಮೀಸಲಾಗಿದ್ದ ಸುಮಾರು 4.38 ಎಕರೆ ಭೂಮಿಯನ್ನು ಏಕಾಏಕಿ ಖಾಸಗಿ ವ್ಯಕ್ತಿಯೊಬ್ಬರು ಸಾಗುವಳಿ ಮಾಡಿದ ಹಿನ್ನಲೆಯಲ್ಲಿ ತಾಲ್ಲೂಕಿನ ಕೊಟ್ಟ, ಓಜುಗುಂಟೆ, ರಂಗಾಪುರ, ಆದಲೂರು ಗ್ರಾಮಸ್ಥರು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲ್ಲೂಕಿನ ಕೊಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಟ್ಟ ಸ.ನಂ.371 ರಲ್ಲಿ 4.38 ಎಕರೆ ಅರಣ್ಯಕ್ಕೆ ಮಿಸಲಾದ ಜಮೀನಿದ್ದು ಸದರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಮರ-ಗಿಡಗಳನ್ನು ಬೆಳೆಸಲಾಗಿತ್ತು.
ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ವ್ಯಕ್ತಿಯೊಬ್ಬರು ಏಕಾಏಕಿ ಅರಣ್ಯ ಭೂಮಿಗೆ ಬಂದು ಜೆ.ಸಿ.ಬಿ. ಯಂತ್ರದ ಮೂಲಕ ಗಿಡ-ಮರಗಳನ್ನು ತೆರವುಗೊಳಿಸುತ್ತಿರುವಾಗ ಅರಣ್ಯಕ್ಕೆ ಆಗಮಿಸಿದ ಕೊಟ್ಟ, ರಂಗಾಪುರ, ಓಜುಗುಂಟೆ ಹಾಗೂ ಆದಲೂರು ಗ್ರಾಮಸ್ಥರು ಜೆ.ಸಿ.ಬಿ. ಯಂತ್ರದ ಮಾಲೀಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ಜೆ.ಸಿ.ಬಿ. ಯಂತ್ರದ ಸಿಬ್ಬಂಧಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ ಈ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರುಗಳು ಅರಣ್ಯ ಭೂಇಗೆ ಆಗಮಿಸಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೂ ಪೋನಾಯಿಸಿದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿ ರಾಧ ಸದರಿ ಜಮೀನು ಅರಣ್ಯಕ್ಕೆ ಮೀಸಲಾಗಿದ್ದು ಈ ಕೂಡಲೇ ಅರಣ್ಯ ತೆರವು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರಕ್ಷಕ ಅಧಿಕಾರಿಗಳಿಗೆ ದೂರು ನೀಡಿದರು ಎನ್ನಲಾಗಿದೆ. ಸದರಿ ಖಾಸಗಿ ವ್ಯಕ್ತಿ ಯಾರೆಂಬ ಬಗ್ಗೆ ಈವರೆಗೆ ತಿಳಿದು ಬಂದಿಲ್ಲ.
ಈ ನಡುವೆ ಕಳೆದ ಒಂದು ವಾರದಿಂದಲೂ ಖಾಸಗಿ ವ್ಯಕ್ತಿಯೊಬ್ಬರು ಅರಣ್ಯ ಜಮೀನಿಗೆ ಆಗಮಿಸಿ ಅಕ್ಕ-ಪಕ್ಕದ ರೈತರಿಗೆ ಈ ಜಮೀನು ನಮ್ಮದು ನ್ಯಾಯಾಲಯದಲ್ಲಿ ನಮ್ಮಂತೆಯೇ ಆಗಿದೆ ಎಂದು ಹೇಳುತ್ತಿದ್ದರು ಎನ್ನಲಾಗಿದ್ದು ಈ ಸಂಬಂಧ ತನಿಖೆಯೂ ಆರಂಭಗೊಂಡಿದೆ.ಅರಣ್ಯದ ಜಮೀನಿನಲ್ಲಿಯೇ ಬೆಳಿಗ್ಗೆಯಿಂದಲೂ ಬೀಡುಬಿಟ್ಟಿರುವ ಗ್ರಾಮಸ್ಥರು ಅರಣ್ಯಕ್ಕೆ ಮೀಸಲಾದ ಜಮೀನಿನಲ್ಲಿ ಧನ-ಕರುಗಳು ಮೇವನ್ನು ಪಡೆಯುವಂತಾಗಿದ್ದು ಯಾವುದೇ ಕಾರಣಕ್ಕೂ ಈ ಜಮೀನನ್ನು ಖಾಸಗಿ ಉಳುಮೆಗೆ ಬಿಡುವುದಿಲ್ಲ ಎಂದು ಪಟ್ಟಿಗೆ ಕೂತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ