ವೇದಗಳಲ್ಲಿ ಹಿಂದೂ ಧರ್ಮ ಎನ್ನುವ ಶಬ್ಧವೇ ಇಲ್ಲ

ಹುಳಿಯಾರು:

       ವೇದಗಳಲ್ಲಿ ಎಲ್ಲೂ ಹಿಂದೂ ಧರ್ಮ ಎನ್ನುವ ಶಬ್ಧವೇ ಇಲ್ಲ. ಹಿಂದೂ ಧರ್ಮ ಎನ್ನುವುದು ಹೊಸದಾಗಿ ಬಳಕೆಯಾಗುತ್ತಿರುವ ರಾಜಕೀಯ ಪರಿಬಾಷೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಸಿ.ಸಿದ್ಧರಾಮಯ್ಯ ತಿಳಿಸಿದರು.

       ಹುಳಿಯಾರಿನ ಕನಕದಾಸ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ದಯೆ ಇಲ್ಲದ ಧರ್ಮ ಯಾವುದಯ್ಯ, ದಯೆ ಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣ ಹೇಳುವಂತೆ ಸಕಲ ಜೀವರಾಶಿಗಳ ಒಳಿತನ್ನು ಬಯಸುವುದು ಧರ್ಮ. ಆದರೆ ಇಂದು ಮಠಪೀಠಗಳಾದಿಯಾಗಿ ಧರ್ಮಕ್ಕಿಂತ ಜಾತಿ ನಿಷ್ಠರಾಗುತ್ತಿದ್ದಾರೆ. ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಮಾಜ ಹೊಡೆಯುವ ಕೆಲಸಗಳಾಗುತ್ತಿವೆ. ಇದಕ್ಕೆ ಸಂಕಷ್ಠಕ್ಕೆ ಒಳಗಾದ, ತಳಸ್ಥರದ, ಅಕ್ಷರ ವಂಕಿತ, ಅಸಿವಿನ ಲೋಕದ ಮಕ್ಕಳು ಬಳಕೆಯಾಗುತ್ತಿದ್ದಾರೆ. ಇದಕ್ಕೆ ಸಿಂಧಗಿಯಲ್ಲಿ ಪಾಕಿಸ್ಥಾನದ ಭಾವುಟ ಹಾರಿಸಿದವರು, ಗೌರಿ ಹತ್ಯೆಗೆ ಬಳಕೆಯಾದವರು ನಿದರ್ಶನವಾಗಿದೆ ಎಂದು ಹೇಳಿದರು.

         ಕನ್ನಡದ ಆದಿ ಕವಿ ಪಂಪ ಮನುಷ್ಯ ಜಾತಿ ತಾನೊಂದೇ ವಲಂ ಎಂದರು, ಇತ್ತೀಚಿನ ಕವಿ ಕುವೆಂಪು ಸಹ ಮನುಕ ಮತ ವಿಶ್ವ ಪಥ ಎಂದರು. ಅಷ್ಟೇ ಏಕೆ ಅಕ್ಷರ ಜ್ಞಾನವಿಲ್ಲದ ಜನಪದರು ಕೂಡ ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ನೀ ಜ್ಯೋತಿಯಾಗು ಎಂದಿದ್ದಾರೆ. ಅಂದರೆ ಜನಪದರಾದಿಯಾಗಿ ಎಲ್ಲಾ ದಾರ್ಶನಿಕರು, ಕವಿಗಳು ಆಲೋಚನೆಗಳು, ಚಿಂತನೆ ಲೋಕಮಾನ್ಯವಾಗಿದ್ದವು. ನಾವು ನಮ್ಮ ಮಕ್ಕಳಿಗೆ ಇದನ್ನು ಹೇಳಿಕೊಡಬೇಕು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಹಾಗೂ ಅಧ್ಯಾಪಕರು ಈ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸುವಲ್ಲಿ ಸೋಲುತ್ತಿದ್ದೇವೆ. ಹಾಗಾಗಿಯೇ ರಾಜಕೀಯ ಸ್ವಾರ್ಥಕ್ಕೆ ಮತ್ತೊಬ್ಬರ ಕೈಗೊಂಬೆಗಳನ್ನಾಗಿ ಅವರ ಕಾಲಾಳುಗಳಾಗುತ್ತಿದ್ದರೆ ಎಂದರು.

          ಮಹಾಭಾರತದ ಮೂಲ ಕತೆ ಕನಕದಾಸರ ನಳಚರಿತ್ರೆ. ಮಹಭಾರತದಲ್ಲಿರುವಂತೆ ನಳಚರಿತ್ರೆಯಲ್ಲೂ ಜೂಜಾಟದಲ್ಲಿ ರಾಜ್ಯ ಕಳೆದುಕೊಂಡು ಹೆಂಡತಿಯನ್ನೂ ಪಣವಾಗಿಟ್ಟು ನಳ ಸೋತು ಕಾಡಿಗೆ ಹೋಗುತ್ತಾನೆ. ಈ ಕತೆಯ ಬೀಜ ಎನ್ನುವಂತೆ ಮಹಾಭಾರತದಲ್ಲೂ ಸಹ ಪಾಂಡವರಿಗೂ ಕೌರವರಿಗೂ ಜೂಜಾಟವಾಗಿ ದ್ರೌಪತಿಯನ್ನು ಸೋತಿದ್ದು ಯುದ್ಧ ಆಗಿದ್ದು ಎಲ್ಲವೂ ಸಾಮ್ಯತೆ ಇದೆ ಎಂದರಲ್ಲದೆ ಕನಕದಾಸರು ಉಡುಪಿಯ ಶ್ರೀ ಕೃಷ್ಣನನ್ನು ತಿರುಗಿಸಿದ ಕತೆಯ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದವಿದೆ. ಆದರೆ ಈ ಸನ್ನಿವೇಶವನ್ನು ಕನಕದಾಸರಿಗೂ ವೈದಿಕರಿಗೂ ಸಂಘರ್ಷದ ಸೂಚಕವಾಗಿ ನೋಡಿದರೆ ವೈದಿಕರು ಬಲಕ್ಕೆ ಮಣಿಯುವವರಾಗಿರುವುದರಿಂದ ಕನಕದಾಸರೊಂದಿಂಗೆ ಒಪ್ಪಂದ ಮಾಡಿಕೊಂಡು ಕಿಂಡಿ ಮೂಲಕ ಶ್ರೀ ಕೃಷ್ಣನನ್ನು ತೋರಿಸಿದ್ದಾರೆ ಅಷ್ಟೆ ಎಂದರು.

           ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕದಾಸ ಪ್ರೌಢಶಾಲೆಯ ಮುಖ್ಯಶಿಕ್ಷಕ ಚನ್ನಬಸಪ್ಪ ಅವರು ವಹಿಸಿದ್ದರು. ಕನಕದಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್, ನಿರ್ದೇಶಕರುಗಳಾದ ಕೆಂಚಮ್ಮ, ಮಾಯಪ್ಪ, ಮಕ್ಕಳ ಕವಿ ಬಿಳಿಗೆರೆ ಕೃಷ್ಣಮೂರ್ತಿ, ಕನಕದಾಸ ಕಾಲೇಜು ಪ್ರಾಚಾರ್ಯ ಪರಮೇಶ್, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಶಿವರುದ್ರಪ್ಪ, ನಿವೃತ್ತ ಪ್ರಾಚಾರ್ಯ ಸಿದ್ದಪ್ಪ, ನಿವೃತ್ತ ಮುಖ್ಯ ಶಿಕ್ಷಕ ಜಿ.ಕೃಷ್ಣಯ್ಯ, ಪಿಎಸ್‍ಐ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap