ಹೊಯ್ಸಳ ಲಾಂಛನ ಬಳಕೆಗೆ ಆಕ್ಷೇಪಕ್ಕೆ ಖಂಡನೆ

ದಾವಣಗೆರೆ:

          ಹೊಯ್ಸಳರ ಲಾಂಛನವನ್ನು ಕರವೇ ಹೊರತು ಪಡಿಸಿ, ಬೇರ್ಯಾವ ಕನ್ನಡಪರ ಸಂಘಟನೆಗಳು ಬಳಸಬಾರದು ಎಂಬುದಾಗಿ ಹೇಳಿಕೆ ನೀಡಿರುವ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೀಡಿರುವ ಹೇಳಿಕೆಯನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

       ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರಾದ ಕೆ.ಜಿ.ಯಲ್ಲಪ್ಪ, ಎಸ್.ಜಿ.ಸೋಮಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಪ್ರವೀಣ ಶೆಟ್ಟಿ, ಶಿವರಾಮೇಗೌಡ ಪ್ರಕರಣದಲ್ಲಿ ನಾರಾಯಣಗೌಡ ಪರ ಬಂದಿರುವ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಹೊಯ್ಸಳರ ಲಾಂಛನನ್ನು ಬೇರ್ಯಾವ ಸಂಘನಟನೆಗಳು ಸಹ ಬಳಸಬಾರದು ಎಂಬುದಾಗಿ ಹೇಳಿಕೆ ನೀಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

       ಹೊಯ್ಸಳರ ಲಾಂಛನವು ಯಾವುದೇ ಸಂಘಟನೆ, ವ್ಯಕ್ತಿಗಳ ಸ್ವತ್ತಲ್ಲ. ಅದು ಇಡೀ ರಾಜ್ಯ, ರಾಷ್ಟ್ರದ ಅಭಿಮಾನದ ಸಂಕೇತವಾಗಿದೆ. ಕರವೇ ರಾಜ್ಯಾಧ್ಯಕ್ಷರಾಗಲೀ, ಜಿಲ್ಲಾಧ್ಯಕ್ಷರಾಗಲೀ ಲಾಂಛನದ ಮೇಲೆ ಹಕ್ಕುಸ್ವಾಮ್ಯ ಹೊಂದಿಲ್ಲ. ನಾಡಿನ ಪ್ರತಿಯೊಬ್ಬರಿಗೂ ಅದನ್ನು ಬಳಸುವ ಹಕ್ಕಿದೆ. ಕರ್ನಾಟಕ ರಕ್ಷಣಾ ವೇದಿಕೆ ಹೆಸರನ್ನು ನೋಂದಣಿ ಮಾಡಿಸಿರಬಹುದು. ಆದರೆ, ಲಾಂಛನದ ಮೇಲೆ ಪೇಟೆಂಟ್‍ನ್ನು ಯಾರೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

         ಕನ್ನಡ ನಾಡು, ನುಡಿ, ಜಲ, ಜನಪರ ಹೋರಾಟವನ್ನು ಕರವೇ ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳೂ ಮಾಡುತ್ತಿವೆ. ಕರವೇ ಮಾತ್ರ ಕನ್ನಡದ ಕೆಲಸ ಮಾಡುತ್ತಿಲ್ಲ. ಯಾವುದೇ ಸಂಘಟನೆಗಳೂ ಆಸ್ತಿ ಮಾಡಿಕೊಳ್ಳುತ್ತಿಲ್ಲ, ಅವ್ಯವಹಾರ ಮಾಡುತ್ತಿಲ್ಲ. ಕನ್ನಡಪರ ಹೋರಾಟಕ್ಕೆ, ಸಂಘಟನೆಗಳ ಹೆಸರಿಗೆ ಚ್ಯುತಿ ತಂದಿಲ್ಲ. ಆದರೂ, ಕರವೇ ಜಿಲ್ಲಾಧ್ಯಕ್ಷ ರಾಮೇಗೌಡರ ಹೇಳಿಕೆಗೆ ನಮ್ಮೆಲ್ಲರ ಆಕ್ಷೇಪವಿದೆ ಎಂದರು.

         ಇವತ್ತು ಲಾಂಛನಕ್ಕೆ ಲಗಾಮು ಹಾಕುವವರು ನಾಳೆ ತಾಯಿ ಭುವನೇಶ್ವರಿ ಫೋಟೋ ಬಳಸದಂತೆ ಹೇಳಿದರೂ ಅಚ್ಚರಿ ಇಲ್ಲ. ಸಂಘ-ಸಂಸ್ಥೆಗಳ ನೋಂದಣಿ ಕಾಯ್ದೆಯಡಿ ಕರ್ನಾಟಕ ರಕ್ಷಣಾ ವೇದಿಕೆ ನೋಂದಣಿಯಾದಂತೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ನೋಂದಣಿಯಾಗಿವೆ. ಹೀಗಿದ್ದರೂ ಕರ್ನಾಟಕ ರಕ್ಷಣಾ ವೇದಿಕೆ
ಹೆಸರಿನ ಮುಂದೆ, ಹಿಂದೆ ಯಾವುದೇ ಪದ ಬಳಸಿಯೂ ಬೇರೊಂದು ಸಂಘಟನೆ ಇರಬಾರದು ಎಂದು ಹೇಳತ್ತಿರುವುದು ಸರ್ವಾಧಿಕಾರಿ ದೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ವಿವಿಧ ಬಣಗಳ ವಿಚಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನ್ಯಾಯಾಲಯಕ್ಕೆ ಹೋಗಿತ್ತು. ನಾರಾಯಣಗೌಡ ನೇತೃತ್ವದ ಸಂಘಟನೆ ಪರ ತೀರ್ಪು ಬಂದಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಬೇರೆ ಯಾರೂ ಕರವೇ ಹೆಸರನ್ನೇ ಬಳಸದಂತೆ ಹೇಳುವ ಜಿಲ್ಲಾಧ್ಯಕ್ಷರ ಹೇಳಿಕೆಗೆ ನಮ್ಮ ವಿರೋಧವಿದೆ. ನಮ್ಮ ಸಂಘಟನೆಗಳೂ ಕಾನೂನಿನಡಿ ನೋಂದಾಯಿಸಲ್ಪಟ್ಟಿವೆ ಎಂಬುದನ್ನು ಜಿಲ್ಲಾಧ್ಯಕ್ಷರು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ನಾಗೇಂದ್ರ ಬಂಡೀಕರ್, ಸಂತೋಷ ಕುಮಾರ ದೊಡ್ಡಮನಿ, ಕೆ.ಹೆಚ್.ಮಹಬೂಬ್ ಬಾಷಾ, ದೇವರಾಜ, ಇಮ್ರಾನ್ ರಜಾ, ಎಂ.ಅನ್ವರ್ ಹುಸೇನ್, ಶಬ್ಬೀರ್ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link