ದಾವಣಗೆರೆ:
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂದು ಬೆಂಗಳೂರಿನ ನಿವೃತ್ತ ಅಭಿಯಂತರ, ಸಮಾಜದ ಹಿರಿಯ ಮುಖಂಡ ಕೆ. ಮಂಜುನಾಥ್ ಆಗ್ರಹಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸವಿತಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಸವಿತಾ ಸಮಾಜದ ನೌಕರರ ಜಿಲ್ಲಾ ಸಮಾವೇಶ ಹಾಗೂ ನೂತನ ಸವಿತಾ ಸಂಪರ್ಕ ಕಾಂ. ಜಾಲತಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸವಿತಾ ಸಮಾಜ ಬಾಂಧವರು ಎಲ್ಲಾ ರಂಗಗಳಲ್ಲೂ ಹಿಂದುಳಿದಿದ್ದು, ರಾಜ್ಯದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಇದ್ದಾರೆ.
ಹೀಗಾಗಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಿ, ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನಮ್ಮನ್ನೂ ಎಸ್‍ಸಿಗೆ ಸೇರಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಇದುವರೆಗೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಸಮಾಜದವರ ಸಮಾರಂಭ, ಕಾರ್ಯಕ್ರಮಗಳನ್ನು ಏರ್ಪಡಿಸಲು ಆಯಾ ಸಮಾಜಗಳಿಗೆ ಪ್ರತ್ಯೇಕವಾದ ಸಮುದಾಯ ಭವನಗಳಿವೆ. ಆದರೆ, ನಮ್ಮ ಸಮಾಜಕ್ಕೆ ಸಮುದಾಯ ಭವನಗಳಿಲ್ಲ. ಆದ್ದರಿಂದ ಸಮಾಜದ ಮುಖಂಡರು, ನೌಕರರು ಸಂಘಟಿತರಾಗಿ, ಸರ್ಕಾರದ ಮಟ್ಟಕ್ಕೆ ನಿಯೋಗ ಕೊಂಡ್ಡೊಯ್ದು ನಮ್ಮ ಸಮಾಜಕ್ಕೂ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಅನುದಾನ ನೀಡುವಂತೆ ಒತ್ತಾಯಿಸಬೇಕೆಂದು ಸಲಹೆ ನೀಡಿದರು.
ಸರ್ಕಾರದಿಂದ ಇರುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸವಿತಾ ಸಮಾಜ ಬಾಂಧವರು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುನ್ನೆಲೆಗೆ ಬರಲು ಪ್ರಯತ್ನಿಸಬೇಕು. ಸರ್ಕಾರ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಮೀಸಲಿಟ್ಟಿದೆ. ಆದರೆ, ಈ ಬಗ್ಗೆ ಸಮಾಜ ಬಾಂಧವರಿಗೆ ಮಾಹಿತಿಯೇ ಇಲ್ಲದಿರುವುದರಿಂದ ಯಾವುದೇ ಸೌಲಭ್ಯ ಪಡೆಯಲಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಸೌಲಭ್ಯಗಳ ಬಗ್ಗೆ ನಮ್ಮ ಸಮಾಜದವರಲ್ಲಿ ಜಾಗೃತಿ ಮೂಡಿಸುವ ಮೂಲಕ ಸೌಲಭ್ಯ ತಲುಪುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಸಮಾಜದ ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ನಮ್ಮ ಕುಲ ಕಸುಬಿಗೆ ಸೀಮಿತಗೊಳಿಸಬೇಡಿ. ಮಕ್ಕಳು ಶಿಕ್ಷಣ ಪಡೆದು ಜ್ಞಾನವಂತರಾದರೆ, ಸಮಾಜದ ಪ್ರಗತಿ ಸಾಧ್ಯವಾಗಲಿದೆ. ಆದ್ದರಿಂದ ಕೊನೆಯ ಪಕ್ಷ ಎಸ್ಸೆಸ್ಸೆಲ್ಸಿವರೆಗಾದರೂ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಸಮಾಜದಲ್ಲಿರುವ ಪ್ರತಿಭಾನ್ವಿತರು ಐಎಎಸ್, ಕೆಎಎಸ್ ತರಬೇತಿ ಪಡೆದು ಉನ್ನತ ಅಧಿಕಾರಿಗಳಾಗಲು ಪ್ರಯತ್ನಿಸಬೇಕು. ಇದಕ್ಕೆ ನಿತ್ಯವೂ ಸಮಾಜದ ಸಹಕಾರ ಇದೆ ಎಂದರು.
ಸವಿತಾ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಿ.ಬಿ. ವೆಂಕಟಚಲಪತಿ ಮಾತನಾಡಿ, ನಮ್ಮ ಸಮಾಜದ ಪ್ರತಿಭಾನ್ವಿತರು, ಸಮಾಜ ಬಾಂಧವರ ಸಹಕಾರದಿಂದ ಸರ್ಕಾರಿ ನೌಕರಿ ಪಡೆದು, ಹಣ ಬಂದಾದ ಮೇಲೆ ತಮ್ಮ ಅಭಿವೃದ್ಧಿಗೆ ಸಹಕರಿಸಿದ ಸಮಾಜವನ್ನು ಮರೆಯುತ್ತಿರುವುದು ಸರಿಯಲ್ಲ. ಇಂತಹ ಮನೋಭಾವದಿಂದ ನೌಕರರು ಹೊರ ಬಂದು ಸಮಾಜಕ್ಕಾಗಿ ಕೆಲಸ ಮಾಡಿ, ಸಮಾಜವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂದು ಕಿವಿಮಾತು ಹೇಳಿದರು.
ಸಂಘದಿಂದ ನೂತನವಾಗಿ ಲೋಕಾರ್ಪಣೆ ಮಾಡಿರುವ ಸವಿತಾ ಸಂಪರ್ಕ.ಕಾಂ ಜಾಲತಾಣದಲ್ಲಿ 6ನೇ ತರಗತಿಯಿಂದ ಪದವಿ ಹಂತದವರೆಗಿನ ಎಲೆಕ್ಟ್ರಾನಿಕ್ ಪಠ್ಯಪುಸ್ತಕಗಳ ಸಂಪೂರ್ಣ ಮಾಹಿತಿ ಅಳವಡಿಸಲಾಗಿದೆ. ಅಲ್ಲದೆ, ಆರ್‍ಟಿಇ, ಮೊರಾರ್ಜಿ ದೇಸಾಯಿ, ನವೋದಯ ವಸತಿಯುತ ಶಾಲೆಗಳಿಗೆ ಹಾಗೂ ವಿದ್ಯಾಸಿರಿಗೆ ಅರ್ಜಿ ಹಾಕುವ ವಿಧಾನದ ಮಾಹಿತಿ ಒಳಗೊಂಡಂತೆ ಹಿಂದುಳಿದ ವರ್ಗಗಳ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಯ ಜೊತೆಗೆ ಹಡಪದ ಹಪ್ಪಣ್ಣ, ಇಮ್ಮಡಿ ಬಿಜ್ಜಳ, ಜೀವಾಜಿ ಮಹಾಲೀ ಸೇರಿದಂತೆ ಅನೇಕ ಹೋರಾಟಗಾರರ, ದಾರ್ಶನಿಕರ ಪರಿಚಯ ಅಳವಡಿಸಲಾಗಿದೆ. ಆದ್ದರಿಂದ ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಜಾಲತಾಣದಲ್ಲಿ ವಧು-ವರರ ನೋಂದಣಿ ಸಹ ಆರಂಭಿಸಲಾಗಿದೆ. ಈಗಾಗಲೇ ದೇಶ, ವಿದೇಶದ 2 ಸಾವಿರ ಜನ ಈ ವೆಬ್‍ಸೈಟ್ ಅನ್ನು ವೀಕ್ಷಣೆ ಮಾಡಿದ್ದು, ತುಂಬಾ ಪ್ರಾಮುಖ್ಯತೆ ಪಡೆಯುತ್ತಿದೆ. ಉದ್ಯೋಗ, ಶಿಕ್ಷಣ ಒಳಗೊಂಡಂತೆ ಪರಿಪೂರ್ಣ ಮಾಹಿತಿ ಈ ವೆಬ್‍ಸೈಟ್‍ನಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಮಾಜದ ನಿವೃತ್ತ ನೌಕರರು, ಸದಸ್ಯರನ್ನು ಸನ್ಮಾನಿಸಲಾಯಿತು.ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯ ಕರಿಯಪ್ಪ, ತುಮಕೂರು ಪ್ರಾಧ್ಯಾಪಕ ಭೀಮಸೇನ್, ಸುರೇಶ್, ಜನಾರ್ಧನ್, ಆಂಜನೇಯಲು ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ್ ಸ್ವಾಗತಿಸಿದರು. ಜಯಪ್ರಕಾಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ