ಹೊಳಲ್ಕೆರೆ:
ಅಂಗವಿಕಲರನ್ನು ಯಾರು ಕಡೆಗಾಣಿಸಬಾರದು ಮತ್ತು ಅನುಕಂಪವನ್ನು ತೋರಿಸಬಾರದು ಕಾರಣ ನಾವು ಅಂಗವಿಕಲರು ಎಂಬ ಭಾವನೆ ಮತ್ತು ಮನೋಸ್ಥೈರ್ಯ ಅವರಿಗೆ ಉಂಟಾಗಿ ಸಮಾಜದಲ್ಲಿ ಅವರ ಶಕ್ತಿ ಕುಂದುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮ ವಸಂತರಾವ್ ಪವಾರ್ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಅಭಿಯೋಜನಾ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲ ಚೇತನ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರಿಗೆ ಮಾನವೀಯತೆಯನ್ನು ತೋರಬೇಕೆ ವಿನ: ಅವರನ್ನು ಹೀನಾಯವಾಗಿ ಮತ್ತು ಕೆಟ್ಟ ದೃಷ್ಟಿಯಿಂದ ಅವರ ಮನಸ್ಸಿಗೆ ನೋವನ್ನುಂಟು ಮಾಡಬಾರದು. ಅಂಗವಿಕಲತೆ ಯಾವುದೋ ಕಾರಣಗಳಿಂದ ಬರುತ್ತದೆ. ಕೆಲವರಿಗೆ ಎರಡು ಕಣ್ಣುಗಳು ಕಾಣದೆ ಕತ್ತಲೆಯಲ್ಲಿ ಇದ್ದರು ಅವರಿಗೆ ಅಗಾಧವಾದ ಗ್ರಹಿಕೆ ಶಕ್ತಿಯನ್ನು ದೇವರು ಪರವಾಗಿ ನೀಡಿದ್ದಾನೆ. ಸರ್ಕಾರ ಅಂಗವಿಕಲರಿಗೆ ಅನೇಕ ಯೋಜನೆಗಳನ್ನು ನೀಡಿದೆ. ಅವುಗಳನ್ನು ಅವರಿಗೆ ಪೊರೈಕೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಶೀಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿರುವ ಬಹಳಷ್ಟು ವಿವಿಧ ಅಂಗವಿಕಲರಿಗೆ ಸರ್ಕಾರ ನೀಡುವ ಸಂವಿಧಾನ ಹಕ್ಕಿನ ಪ್ರಕಾರ ಅವರಿಗೆ ಸೌಲಭ್ಯಗಳೇ ದೊರೆಯುತ್ತಿಲ್ಲ ಎಂದು ನ್ಯಾಯಾಧೀಶೆ ಅಸಮಧಾನ ವ್ಯಕ್ತ ಪಡಿಸಿದರು.
ಸರ್ಕಾರ ಪ್ರತಿ ತಿಂಗಳು ಅವರವರ ಅಂಗವಿಕಲತೆಯ ಆಧಾರದ ಮೇಲೆ ಮಾಶಾಸನವನ್ನು ನೀಡುತ್ತದೆ. ಅದು ಅವರಿಗೆ ತಲುಪುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರತಿಯೊಬ್ಬ ನಾಗರೀಕನು ಪರಿಶೀಲನೆ ಮಾಡಬೇಕು. ಅಂಗವಿಕಲರಿಗೆ ನ್ಯಾಯಾಂಗ ಇಲಾಖೆಯಲ್ಲಿ ವಿಶೇಷ ಅವಕಾಶ ನೀಡಲಾಗಿದೆ. ನ್ಯಾಯಾಲಯಕ್ಕೆ ನ್ಯಾಯಕ್ಕಾಗಿ ಬಂದ ಅಂಗವಿಕಲರಿಗೆ ವಕೀಲರು ಮೊದಲು ಆಧ್ಯತೆಯನ್ನು ನೀಡಬೇಕು. ಅವರ ಹಕ್ಕಿಗೆ ಅನ್ಯಾಯವಾಗದಂತೆ ನ್ಯಾಯವನ್ನು ನೀಡಬೇಕೆಂದು ತಿಳಿಸಿ ಅಂಗವಿಕಲ ವ್ಯಕ್ತಿಗಳಿಗೆ ಕಾನೂನಾತ್ಮಕ ಸವಲತ್ತುಗಳು ದೊರೆಯದಿದ್ದರೆ ನೇರವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಧೀಶೆ ಕರೆ ನೀಡಿದರು.
ಉಪನ್ಯಾಸವನ್ನು ವಕೀಲ ಕಾಲ್ಕೆರೆ ವಿಜಯ್‍ಕುಮಾರ್ ಮಾತನಾಡಿ ಕಾನೂನು ಅಡಿಯಲ್ಲಿ ಪ್ರತಿಯೊಬ್ಬರು ಸಮಾನರು. 1995ರಲ್ಲಿ ಅಂಗವಿಕಲರ ಅದಿನಿಯಮ ಜಾರಿಗೆ ಬಂತು. ಯಾವ ವ್ಯಕ್ತಿಗೆ ಶೇ.40ರಷ್ಟು ಅಂಗ ಹೀನತೆ ಕಂಡು ಬಂದವರಿಗೆ ವೈಧ್ಯರು ದೃಢೀಕರಣ ಪತ್ರ ನೀಡಿದವರಿಗೆ ಸವಲತ್ತನ್ನು ನೀಡಿದೆ ಇರುವ ಅಧಿಕಾರಿಗಳಿಗೆ 5 ಲಕ್ಷ ದಂಡ ಮತ್ತು 6 ತಿಂಗಳು ಸೆರೆಮನೆವಾಸ ಅನುಭವಿಸಬೇಕಾಗುತ್ತದೆ. ಅಂಗವಿಕಲರು ಸ್ವಯಂಉದ್ಯೋಗ ಕಲ್ಪಿಸಿಕೊಳ್ಳಲು ಸರ್ಕಾರ ಕನಿಷ್ಠ 50 ಸಾವಿರ ರೂಗಳನ್ನು ಉಚಿತವಾಗಿ ನೀಡುತ್ತದೆ. ಅಂಗವಿಕಲ ಯುವತಿಯನ್ನು ವಿವಾಹವಾದರೆ 50 ಸಾವಿರ ರೂಗಳನ್ನು ಬಡ್ಡಿರಹಿತವಾಗಿ ನೀಡುತ್ತದೆ. ಇದರಿಂದ ಯಾವುದಾದರು ವ್ಯವಹಾರವನ್ನು ಮಾಡಿಕೊಳ್ಳಲು ಅವಕಾಶವಿದೆ. ನೌಕರಿಯಲ್ಲಿ ಶೇ.3ರಿಂದ5ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಗರ್ಭೀಣಿಯರು ಹೆರಿಗೆಯಾದರೆ ಅವರ ಶೂಶ್ರುಷೆಗೆ ಒಬ್ಬ ನರ್ಸ್‍ನ್ನು ನೇಮಕ ಮಾಡಿಕೊಂಡರೆ ಮಾಸಿಕ 2 ಸಾವಿರ ರೂಗಳನ್ನು ನೀಡಲಾಗುವುದು. ಬಸ್ ರೈಲುಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶವಿದೆ ಎಂದು ಹಲವಾರು ಸವಲತ್ತುಗಳನ್ನು ಸರ್ಕಾರ ನೀಡುತ್ತದೆ ಎಂದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ರವಿಕುಮಾರ್ ವಿ., ಸರ್ಕಾರಿ ಅಭಿಯೋಜಕ ಪ್ರಶಾಂತ್ ಕುಮಾರ್, ಸರ್ಕಾರಿ ಅಪರ ವಕೀಲ ಡಿ.ಜಯಣ್ಣ, ಹಿರಿಯ ವಕೀಲ ಎಸ್.ಎಂ.ಆನಂದಮೂರ್ತಿ ವಕೀಲರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತು ಕಂದಾಯ ಇಲಾಖೆಯ ಗಾಯತ್ರಮ್ಮ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
