ದಾವಣಗೆರೆ :
ವಿಶೇಷಚೇತನ ಮಕ್ಕಳ ಬಗ್ಗೆ ಯಾರಿಗೂ ಅನುಕಂಪ ಬೇಡ. ಅವರಲ್ಲಿನ ಸಾಮಥ್ರ್ಯವನ್ನು, ಚೇತನ್ಯವನ್ನು ನಾವು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ಜಯಶೀಲಾ ಕರೆ ನೀಡಿದರು.
ಇಲ್ಲಿನ ಎಂ.ಸಿ.ಸಿ ಬಿ ಬ್ಲಾಕ್‍ನ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು, ಶಿಕ್ಷಕರೇ ವಿಶೇಷಚೇತನರಿಗೆ ಆತ್ಮಸ್ಥೈರ್ಯ ತುಂಬುವ ನೇತಾರರಾಗಿದ್ದು ಈ ಕಾರ್ಯವನ್ನು ಶಿಕ್ಷಕರು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ವಿಕಲಚೇತನ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ವಿಕಲಚೇತನರು ಇಂದು ಕ್ರೀಡಾ, ಸಾಂಸ್ಕತಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡುತ್ತಿದ್ದಾರೆ. ಅಂತಹ ಅನೇಕ ಸಾಧಕರು ನಮ್ಮ ಕಣ್ಮುಂದೆ ಇದ್ದಾರೆ. ವಿಕಲಚೇತನರನ್ನು ಸೋಲಿಸುವವರು ಮತ್ತೊಬ್ಬರಿಲ್ಲ. ಅಷ್ಟು ಅಪಾರವಾದ ಶಕ್ತಿ ಅವರಲ್ಲಿರುತ್ತದೆ. ಹಾಗಾಗಿ ಪೋಷಕರು ಅಂತಹ ಮಕ್ಕಳನ್ನು ಕೀಳಾಗಿ ನೋಡದೇ ಅವರ ಆಸಕ್ತಿಯನ್ನು ಗುರುತಿಸಿ ಅವರೂ ಕೂಡ ಇತರರಂತೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್, ವಿಕಲಚೇತನ ಮಕ್ಕಳು ಇಂದು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುತ್ತಿರವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸರ್ಕಾರದಿಂದ ವಿಕಲಚೇತನರಿಗೆ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಮತದಾರರ ನೋಂದಣಿ ಅಭಿಯಾನವನ್ನು ಈಚೆಗೆ ಮಾಡಿದ್ದು, ಅದರಲ್ಲಿ ಜಿಲ್ಲೆಯ 17 ಸಾವಿರ ವಿಕಲಚೇತನರು ಮಾತ್ರ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇನ್ನೂ 3 ಸಾವಿರ ವಿಶೇಷಚೇತನರ ಹೆಸರು ಸೇರ್ಪಡೆಗೊಳ್ಳಬೇಕಿದೆ. ಅಂತಹವರ ಹೆಸರನ್ನು ಸೇರ್ಪಡೆ ಮಾಡಿಸುವ ಕಾರ್ಯ ಬಹುಬೇಗ ಆಗಬೇಕು. ಇದಕ್ಕೆ ಇಲಾಖೆಗಳ ಸಹಕಾರ ಬೇಕು ಎಂದರು.
ಜಿ.ಪಂ. ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ವಿಕಲಚೇತನರು ಸಮಾಜಕ್ಕೆ ಭಾರವಲ್ಲ. ಅವರಲ್ಲಿ ಎಲ್ಲಾ ರೀತಿಯ ಶಕ್ತಿ, ವಿಶೇಷ ಚೈತನ್ಯ ಇದೆ. ಅಂತಹ ಶಕ್ತಿಗೆ ಪ್ರೇರಣೆ, ಪ್ರೋತ್ಸಾಹವನ್ನು ಸರ್ಕಾರ ಹಾಗೂ ನಾವೆಲ್ಲಾ ನೀಡಬೇಕು. ವಿಜ್ಞಾನ, ತಂತ್ರಜ್ಞಾನದಲ್ಲಿ ಎಷ್ಟೆಲ್ಲ ಸಂಶೋಧನೆಗಳು ಆಗಿದ್ದರೂ ದೇಶದಲ್ಲಿ ಅಂಗವಿಕಲತೆ ನಿವಾರಣೆ ಆಗಿಲ್ಲ ಯಾವ ದೇಶ ಅಂಗವಿಕಲತೆಯಿಂದ ಮುಕ್ತ ಆಗುತ್ತದೋ ಆ ದೇಶದಲ್ಲಿ ಅಸಮಾನತೆ ನಿವಾರಣೆ ಆಗಲು ಸಾಧ್ಯ ಎಂದರು.
ಜಿಲ್ಲಾ ವಿಕಲಚೇತನಾಧಿಕಾರಿ ಜಿ.ಎಸ್. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2011ರ ಸರ್ವೆ ಪ್ರಕಾರ 40,819 ಅಂದಾಜು ವಿಕಲಚೇನರಿದ್ದು, ಇಲಾಖೆಯಲ್ಲಿ ಗ್ರಾಮೀಣ ಮತ್ತು ನಗರ ಸೇರಿ 27,331 ನೋಂದಣಿ ಮಾಡಿಕೊಂಡಿದ್ದಾರೆ .ಡಿಸೆಂಬರ್-2018 ರ ಅಂತ್ಯಕ್ಕೆ 13581 ವಿಲಚೇತನರು ತಲಾ 600 ರೂ. ಹಾಗೂ 13704 ತೀವ್ರತರದ ವಿಕಲಚೇತನರು ತಲಾ 1400 ರೂ. ಸೇರಿದಂತೆ ಒಟ್ಟು 27285 ವಿಕಲಚೇತನರು ಮಸಾಶನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲೆಯ ವಿಕಲಚೇತನ ಸಾಧಕರಾದ ವಿಕಲಚೇತನರ ಕ್ರಿಕೆಟ್‍ನ ಭಾರತ ತಂಡದ ಜಿಲ್ಲೆಯ ಆಟಗಾರ ಬಿ.ಎಂ.ಜೆ.ಪ್ರವೀಣ್, ರಾಜ್ಯಮಟ್ಟದ ಆಟಗಾರ ಬಿ.ಸುನಿಲ್, ಪ್ರತಿಭಾನ್ವಿತ ವಿಕಲಚೆತನ ವಿದ್ಯಾರ್ಥಿನಿ ಎಸ್. ಸಿಂಧು, ಕ್ರೀಡಾಪಟು ಸಿದ್ದೇಶ್, ಈಜುಪಟು ಉತ್ತೇಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ವಿಕಲಚೇತನರಿಗೆ 10 ಯಂತ್ರಚಾಲಿತ ತ್ರಿಚಕ್ರ ವಾಹನ, 10 ವೀಲ್ ಚೇರ್, 3 ಸಿ.ಪಿ ಚೇರ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಪಾಲಿಕೆ ಸದಸ್ಯ ಜಿ.ಬಿ. ಲಿಂಗರಾಜ್, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಯ್ಯಸ್ವಾಮಿ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಗಿರೀಶ್, ವೀರೇಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ