ದಾವಣಗೆರೆ:
ಸಮರ್ಪಕ ಮರಳು ಪೂರೈಕೆಗಾಗಿ ಒತ್ತಾಯಿಸಿ ಸೋಮವಾರ ಹೊನ್ನಾಳಿ ಬಂದ್ ನಡೆಸುತ್ತಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವರನ್ನು ಬಂಧಿಸಿ, ಪೊಲೀಸರು ಮಲೆಬೆನ್ನೂರು ಐಬಿಯಲ್ಲಿ ಇರಿಸಿ ಸಂಜೆಯ ವೇಳೆಗೆ ಬಿಡುಗಡೆ ಮಾಡಿದರೂ, ಕದುಲದ ರೇಣುಕಾಚಾರ್ಯ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಅಲ್ಲಿಯೇ ಹೋರಾಟ ಮುಂದುವರೆಸಿದ್ದಾರೆ.
ಈ ಹೋರಾಟದ ಹಿನ್ನೆಲೆಯಲ್ಲಿ ಮಂಗಳವಾರ ಮಲೆಬೆನ್ನೂರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ರೇಣುಕಾಚಾರ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿ, ಸದನದಲ್ಲೂ ಈ ಬಗ್ಗೆ ಹೋರಾಡುವಂತೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ದಪ್ಪ ಚರ್ಮದ ಈ ಸಮ್ಮಿಶ್ರ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ನನಗೆ ಹೋರಾಟ ಹೊಸದಲ್ಲ. ಶಾಸಕನಿದ್ದಾಗ, ಇಲ್ಲದಿದ್ದಾಗಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ನನ್ನ ವಿರುದ್ಧ ದೂರು ದಾಖಲಿಸಲಿ, ಬಂಧಿಸಲಿ. ನಾನು ಜೈಲಿಗೂ ಹೋಗಿ ಬಂದಿದ್ದೇನೆ. ಅಲ್ಲದೆ, ನನ್ನ ಮೇಲೆ 50ರಿಂದ 60 ಕೇಸುಗಳಿವೆ. ಇದಕ್ಕೆಲ್ಲಾ ನಾನು ಬಗ್ಗುವುದಿಲ್ಲ. ಆದರೆ, ಮರಳಿಗಾಗಿ ಹೋರಾಟ ನಡೆಸುತ್ತಿರುವ ಅಮಾಯಕರ ವಿರುದ್ಧ ದೂರು ದಾಖಲಿಸಿರುವುದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ನಾನು ಶಾಸಕನಾದ ಬಳಿಕ 5 ಬಾರಿ ಟಾಸ್ಕ್‍ಫೋರ್ಸ್ ಸಮಿತಿ ಸಭೆ ನಡೆಸಿ, ಸಾರ್ವಜನಿಕರಿಗೆ ಕಡಿಮೆ ದರಲ್ಲಿ ಮುಕ್ತವಾಗಿ ಮರಳು ಪೂರೈಸಲು ಸೂಚಿಸಿದ್ದೇವೆ. ಆದರೆ, ಮರಳು ಕೊಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿ ಈಗ ಮರಳು ಕೊಡದೇ ವಚನ ಭ್ರಷ್ಟರಾಗಿದ್ದಾ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಂತ್ರಿ ನಮ್ಮ ಹಿಂದೆ ಹೋರಾಟಕ್ಕೆ ನಿಂತಿರುವವರ ಮೇಲೆ ಮೂರ್ನಾಲ್ಕು ಕೇಸ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.
ಜನರು ಮನೆ, ಶೌಚಾಲಯ, ದೇವಸಾನ ನಿರ್ಮಿಸಿಕೊಳ್ಳಲು ತಕ್ಷಣವೇ ಮುಕ್ತವಾಗಿ ಮರಳು ಪೂರೈಸಬೇಕು.ನ್ಯಾಮತಿ, ಹೊನ್ನಾಳಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು. ತಕ್ಷಣವೇ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಶಿವಕುಮಾರ, ಜಿಪಂ ಸದಸ್ಯ ಎಂ.ಆರ್.ಮಹೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ರೇಣುಕಾಚಾರ್ಯರ ಬೆಂಬಲಿಗರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
