ಚಳ್ಳಕೆರೆ
ನಗರದಲ್ಲಿ ಹಲವಾರು ವರ್ಷಗಳಿಂದ ನಿವೇಶನ ಹಾಗೂ ಮನೆ ಎರಡೂ ಇಲ್ಲದ ಆರ್ಹರನ್ನು ಆಯ್ಕೆ ಮಾಡಿ ಅವರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ನಗರದ 3950 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡುವ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಈ ಬಗ್ಗೆ ಶಾಸಕರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೇ-2018ರಲ್ಲಿ ಇಲ್ಲಿನ ನೂತನ ಹೌಸಿಂಗ್ ಬೋರ್ಡ್(ಪಾವಗಡ ರಸ್ತೆ)ನಲ್ಲಿ ಕೆಎಚ್ಬಿ ವಿಂಗಡಿಸಿರುವ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದು, ಒಟ್ಟು 5250 ಮನೆಗಳಿಗೆ ಮಂಜೂರಾತಿ ದೊರಕಿದ್ದು, ಈ ಬಗ್ಗೆ ಈಗಾಗಲೇ 1300 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಇನ್ನು ಉಳಿದ 3950 ಫಲಾನುಭವಿಗಳ ಆಯ್ಕೆ ಕುರಿತಂತೆ ನಗರಸಭೆಯ ನಿಯಮಾನಿಸಾರ ಅರ್ಜಿಯನ್ನು ಕರೆದು ಪರಿಶೀಲನೆ ನಡೆಸಿ ನಿರ್ಮಾಣಗೊಂಡ ಮನೆಗಳನ್ನೇ ವಿತರಿಸಲಾಗುವುದು. ಯಾವುದೇ ಕಾರಣಕ್ಕೂ ಯಾರೂ ಸಹ ಮಧ್ಯವರ್ತಿಗಳ ಮಾತಿಗೆ ಮರಳಾಗದೆ ನೇರವಾಗಿ ಅರ್ಜಿಯನ್ನು ಪಡೆದು ಮನೆಗಳನ್ನು ಪಡೆಯಬಹುದಾಗಿದೆ.
ಒಟ್ಟು 262.50 ಕೋಟಿ ಯೋಜನೆ ಇದಾಗಿದ್ದು, ನಿವೇಶನ ಮತ್ತು ಮನೆ ಇಲ್ಲದವರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಆರ್ಹರಾಗಿರುತ್ತಾರೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಶೇ. 30, ಪರಿಶಿಷ್ಟ ವರ್ಗಕ್ಕೆ ಶೇ.20, ವಿಕಲಚೇತನರಿಗೆ ಶೇ.5 ಹಾಗೂ ಸಾಮಾನ್ಯ ವರ್ಗಕ್ಕೆ ಶೇ.45ರಷ್ಟು ಮೀಸಲಾತಿ ಇರುತ್ತದೆ. ರಾಜ್ಯ ಸರ್ಕಾರದ ಅನುದಾನ 86.34 ಕೋಟಿ, ಕೇಂದ್ರ ಸರ್ಕಾರದ ಅನುದಾನ 78.75 ಕೋಟಿ ಇದ್ದು, ಉಳಿದ 97 ಕೋಟಿ ಫಲಾನುಭವಿಗಳಿಂದ ಬರಿಸಬೇಕಾಗುತ್ತದೆ ಎಂದರು. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗೆ 1.70 ಲಕ್ಷ, ಸಾಮಾನ್ಯ ಫಲಾನುಭವಿಗೆ 2.30 ಲಕ್ಷ ವೆಚ್ಚದಲ್ಲಿ ಮನೆ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ಕರ್ನಾಟಕ ಗೃಹ ನಿರ್ಮಾಣ ಯೋಜನೆಯ ಈ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. 20 * 30 ಅಳತೆ ಪ್ರದೇಶದಲ್ಲಿ ಒಂದು ಪ್ಲಾಟ್ನಲ್ಲಿ ಮೂರು ಹಂತಗಳ ಮನೆಗಳನ್ನು ನಿರ್ಮಿಸಲಾಗುವುದು ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿ ಹೊಂದಿದ ಮನೆಗಳು ನಿರ್ಮಾಣವಾಗಲಿವೆ. ಸರ್ಕಾರದ ನಿಯಮಾನುಸಾರ ಯಾವುದೇ ವ್ಯಕ್ತಿಗೆ ಸರ್ಕಾರದ ವತಿಯಿಂದ ನಿವೇಶನ ನೀಡುವಂತಿಲ್ಲ. ಬದಲಾಗಿ ನಿರ್ಮಾಣಗೊಂಡ ಗೃಹಗಳನ್ನು ವಿತರಣೆ ಮಾಡಲಾಗುವುದು. ಫಲಾನುಭವಿ ನಿರ್ಮಾಣಗೊಂಡ ಮನೆಗಳ ಖರೀದಿಗೆ ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಸಹ ಸಿಗಲಿದೆ ಎಂದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಕ್ಷೇತ್ರದ ಶಾಸಕರ ಮಾರ್ಗದರ್ಶನ ಹಾಗೂ ಪೌರಾಡಳಿತ ಇಲಾಖೆಯ ನಿರ್ದೇಶನದ ಸೂಚನೆಯಂತೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಡಿ.15ರಿಂದ ಡಿ.31ರ ತನಕ ಅರ್ಜಿಗಳನ್ನು ಪಡೆಯಲಾಗುವುದು.
ನಗರಸಭೆಯಲ್ಲಿಯೇ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಪ್ರತಿಯೊಬ್ಬ ಅರ್ಜಿದಾರನು ಸಂಬಂಧಪಟ್ಟ ದಾಖಲಾತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ಪಡೆದ ನಂತರ ಪರಿಶೀಲನೆ ನಡೆಸಿ ಮಂಜೂರಾತಿ ನೀಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ