ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಆಗುತ್ತದೆ : ಪ್ರಕಾಶ್ ಜಾವಡೇಕರ್

ಬೆಂಗಳೂರು

           ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಆಗುತ್ತದೆ ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಸರ್ಕಾರದ ನಾಯಕರು ತಿರುಗೇಟು ನೀಡಿದ್ದಾರೆ.

           ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಪ್ರಕಾಶ್ ಜಾವಡೇಕರ್ ಹೇಳಿಕೆಯು ಉತ್ತರ ಕೊಡುವಂಥದ್ದಲ್ಲ. ಬಿಜೆಪಿ ಬರಿ ಸದ್ದು ಮಾಡುತ್ತಿದ್ದೆ ಅಷ್ಟೆ. ಸರ್ಕಾರ ಸದೃಢವಾಗಿಯೇ ಇದೆ. ಸರ್ಕಾರ ಬಂಡೆಯಂತೆ ಸ್ಥಿರವಾಗಿದ್ದು, ಉರುಳಿಸಬೇಕೆಂಬ ಯಾವುದೇ ಸಂಚು ಸಫಲವಾಗದು ಎಂದರು.

           ಕಾಂಗ್ರೆಸ್‍ನ ಕೆಲ ಅತೃಪ್ತ ಶಾಸಕರಿಂದಾಗಿ ಸರ್ಕಾರ ಸದ್ಯದಲ್ಲೇ ಉರುಳಲಿದೆ ಎಂಬ ಕೇಂದ್ರ ಸಚಿವ ಪ್ರಕಾಶ್ ಚಾವಡೇಕರ್ ಹೇಳಿಕೆಯನ್ನು ತಿರಸ್ಕರಿಸಿದರು.

           ಮೈತ್ರಿ ಸರ್ಕಾರದ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದು, ತಮ್ಮ ಪಕ್ಷದತ್ತ ಸೆಳೆಯಬೇಕೆಂಬ ಬಿಜೆಪಿ ಯತ್ನ ಫಲಿಸದು. ಸರ್ಕಾರ ಪತನವಾಗುತ್ತದೆ ಎಂಬ ಆಧಾರರಹಿತ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಲೇ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದರು.

          ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಅಪವಿತ್ರ ಮೈತ್ರಿಯಾಗಿದ್ದು, ಸದ್ಯದಲ್ಲೇ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನಿನ್ನೆ ಹೇಳಿಕೆ ನೀಡಿದ್ದರು.

         ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ನಾಯಕರು ಹತಾಶರಾಗಿದ್ದು, ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಆ ಪಕ್ಷದ ನಾಯಕರೆ ಒಪ್ಪಿಕೊಂಡಿದ್ದಾರೆ. ಬಿಜೆಪಿಯ ಕುದುರೆ ವ್ಯಾಪಾರ ರಾಜ್ಯ ನಾಯಕರಿಂದ ರಾಷ್ಟ್ರನಾಯಕರಿಗೆ ತಲುಪಿದೆ. ಬಿಜೆಪಿಯ ಯಾವುದೇ ಆಮಿಷ, ತಂತ್ರಗಳಿಗೆ ತಾವು ಮಣಿಯುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನೀಡಿದ ಮಾತಿನಂತೆ ಐದು ವರ್ಷ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ. ನಾವು ಬಿಜೆಪಿಯವರಷ್ಟು ಬುದ್ಧಿವಂತರಲ್ಲದಿದ್ದರೂ, ಅಜ್ಞಾನಿಗಳಲ್ಲ ಎಂದಿದ್ದಾರೆ.

         ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸ್ವಲ್ಪ ದಿನ ಕಾದು ನೋಡಿದರೆ ಬಿಜೆಪಿಯಲ್ಲಿಯೇ ಭೂಕಂಪ ಆಗುತ್ತದೆ ಎಂದು ತಿರುಗೇಟು ನೀಡಿದರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಇದೆ. ಹೀಗಾಗಿ ವಿಷಯಾಂತರ ಮಾಡಲು ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಆಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ ಎಂದಿದ್ದಾರೆ.

       ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಾವಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಮಾಡಿದ ತಂತ್ರಗಳೆಲ್ಲ ವಿಫಲವಾಗಿವೆ. ಹತಾಶರಾಗಿ ಬಿಜೆಪಿಯವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸ್ಥಿರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಬಿಜೆಪಿಯ ಹೇಳಿಕೆಗೆ ಜೆಡಿಎಸ್ ನಾಯಕರು ಸಹ ತಿರುಗೇಟು ನೀಡಿದ್ದಾರೆ. ಸಹಕಾರ ಸಚಿವ ಬಂಡೆಪ್ಪ ಖಾಶಂಪೂರ ಮಾತನಾಡಿ, ಆರು ತಿಂಗಳಿನಿಂದಲೂ ನಾವೆಲ್ಲ ನೋಡುತ್ತಲೇ ಇದ್ದೇವೆ. ಬಿಜೆಪಿಯವರು ಹೇಳುವಂತಹ ಯಾವುದೇ ಭೂಕಂಪ ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಗಮವಾಗಿಯೇ ಸಾಗಲಿದೆ ಎಂದು ಹೇಳಿದರು.

       ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಲೇ ಇದೆ. ಬಿಜೆಪಿಯವರ ಕುದುರೆ ವ್ಯಾಪಾರ ಗುಟ್ಟಾಗಿಯೇನೂ ಉಳಿದಿಲ್ಲ. ಬಿಜೆಪಿಯವರು ಆರು ತಿಂಗಳಿನಿಂದ ಹುಲಿ ಬಂತು ಹುಲಿ ಕಥೆ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link