ಕುಣಿಗಲ್
ನೋಡಿ ಸ್ವಾಮಿ…,.,,, ನಾವು ಇರೋದೆ ಹೀಗೆ..,.,., ಎನ್ನುತ್ತಿದೆ ಇಲ್ಲೊಂದು ಟ್ಯಾಂಕ್. ಇದು ಗ್ರಾಮೀಣ ಪ್ರದೇಶದ ಹಳ್ಳಿಜನರಿಗೆ ಕುಡಿಯುವ ನೀರುಣಿಸುವ ಬೃಹತ್ ಟ್ಯಾಂಕ್.
ಇಂದಿಗೂ ಸಹ ಸಹಸ್ರಾರು ಜನರಿಗೆ ಕುಡಿಯುವ ನೀರು ಪೂರೈಸುವ ಈ ಟ್ಯಾಂಕ್ ಪಾಳುಬಿದ್ದ ಮನೆಯಂತಾಗಿದ್ದು ಮುಳ್ಳು ಪೊದೆಗಳಿಂದ ಆವರಿಸಿ ದುರ್ನಾಥ ಬೀರುತ್ತ, ಕಾಡು ಪ್ರಾಣಿಗಳ ವಾಸಕ್ಕೆ ಯೋಗ್ಯ ಸ್ಥಳವಾಗಿ ನಿರ್ಮಾಣವಾಗಿದ್ದರೂ ಬಾಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕ್ಯಾರೇ ಅನ್ನೋರ್ ಇಲ್ಲಾ ಸ್ವಾಮಿ..,.
ತಾಲ್ಲೂಕಿನ ಪ್ರತಿಷ್ಠಿತ ಕ್ಷೇತ್ರವಾದ ಕೊತ್ತಗೆರೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಾಗೇನಹಳ್ಳಿ ಪಂಚಾಯಿತಿಯಲ್ಲಿ ಅಂದಿನ ಶಾಸಕ ಎಸ್.ಪಿ. ಮುದ್ದಹನುಮೇಗೌಡರ ಅವಧಿಯಲ್ಲಿ ಸುಮಾರು 16 ವರ್ಷಗಳಿಂದೆ ನಿರ್ಮಾಣವಾದ ಈ ಬೃಹತ್ ಓವರ್ಹೆಡ್ ಟ್ಯಾಂಕ್ 5 ಸಾವಿರ ಲೀ., ಸಾಮಥ್ರ್ಯ ಹೊಂದಿದ್ದು ಬಾಗೇನಹಳ್ಳಿ ಗ್ರಾಮದ 300 ಕುಟುಂಬಗಳಿಗೆ ನೀರುಣಿಸುವಂತಹ ವ್ಯವಸ್ಥೆಯನ್ನು ಅಂದು ಅಧ್ಯಕ್ಷರಾಗಿದ್ದ ಶಿವಣ್ಣ ನೇತೃತ್ವದಲ್ಲಿ ನಿರ್ಮಾಣವಾಗಿ ಇಂದಿನವರೆಗೆ ನಿತ್ಯ ನೀರು ಪೂರೈಸುತ್ತಲೇ ಇದೆ. ಆದರೆ 16 ವರ್ಷ ಕಳೆದರೂ ಒಮ್ಮೆಯೂ ಟ್ಯಾಂಕ್ ಸ್ವಚ್ಛತೆಯನ್ನು ಕಂಡಿಲ್ಲ. ಹಲವು ಕಡೆ ಒಡೆದು ಪೋಲಾಗುತ್ತಿರುವುದರಿಂದ ಸಮರ್ಪಕವಾಗಿ ನೀರು ಪೂರೈಕೆ ಆಗದೆ ಇರುವುದರಿಂದ ಇಂದು ಕೇವಲ 100 ಮನೆಗಳಿಗೆ ಮಾತ್ರ ನೀರು ಹರಿಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಗ್ರಾಮದಲ್ಲಿ ಶುದ್ದಕುಡಿಯುವ ನೀರು ಪೂರೈಸುವ ಘಟಕವಿಲ್ಲ. ಈ ಟ್ಯಾಂಕ್ನಿಂದ ಬರುವ ನೀರನ್ನೇ ಜನರು ಕುಡಿಯುತ್ತಿದ್ದು ಈ ಟ್ಯಾಂಕ್ನಿಂದ ಹಳ್ಳಿಗೆ ಪೂರೈಕೆಯಾಗುವ ಪೈಪ್ಲೈನ್ ಹಲವು ಕಡೆ ಡ್ಯಾಮೇಜ್ ಆಗಿದ್ದು ಅಲ್ಲಿ ನಿಂತ ನೀರು ಸಹ ಪೈಪ್ ಮೂಲಕ ಒಳ ಸೇರುವುದರಿಂದ ಸಾಂಕ್ರಮಿಕ ಕಾಯಿಲೆಗಳು ಉಲ್ಬಣವಾಗಲು ಕಾರಣವಾಗಿದೆ. ಅಲ್ಲದೆ ಈ ಟ್ಯಾಂಕ್ ನಿರ್ಮಿಸಿ 16 ವರ್ಷವಾದರೂ ಇಲ್ಲಿಯವರೆಗೆ ಒಮ್ಮೆಯೂ ಬ್ಲೀಚಿಂಗ್ ಹಾಕಿ ಶುದ್ದಗೊಳಿಸಿರುವುದನ್ನ ನೋಡೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಕಂಡೂ ಕಾಣದಂತಿರುವ ಇಲ್ಲಿನ ಪಿಡಿಒ ಮತ್ತು ಅಧ್ಯಕ್ಷರಾಗಲಿ ಅಥವಾ ಈ ಭಾಗದ ಸದಸ್ಯರುಗಳಾಗಲಿ ಇಂತಹ ಬೃಹತ್ ಟ್ಯಾಂಕ್ ಸುತ್ತ ಬೇಲಿ ಮುಚ್ಚಿಕೊಂಡಿದ್ದರೂ ಗಮನಹರಿಸದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನಾದರೂ ಜವಾಬ್ದಾರಿ ಅರಿತು ಟ್ಯಾಂಕ್ ಸ್ವಚ್ಛಗೊಳಿಸಿ, ಮುಳ್ಳಿನ ಪೊದೆಯಿಂದ ಟ್ಯಾಂಕ್ಗೆ ಮುಕ್ತಿ ನೀಡುವರೆ ಕಾದು ನೋಡಬೇಕಿದೆ.
ಅಂದು ಲಕ್ಷಾಂತರ ರೂ. ಕಂದಾಯದ ಹಣ ಖರ್ಚುಮಾಡಿ ನಿರ್ಮಿಸಿರುವ ಟ್ಯಾಂಕ್ ಹಾಳಾಗದೆ, ಬಳಕೆಯಾಗಲೇಬೇಕು. ಈ ಟ್ಯಾಂಕ್ನ್ನೇ ಶುದ್ಧಗೊಳಿಸಿ, ಸುತ್ತ ಬೆಳೆದಿರುವ ರೋಜನ್ ಮೆಳೆಯನ್ನು ಕತ್ತರಿಸಿ ಒಡೆದಿರುವ ಪೈಪ್ಗಳನ್ನ ಸರಿಪಡಿಸಿ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಸಂಬಂಧಪಟ್ಟವರು ಮಾಡಬೇಕೆಂದು ಸ್ಥಳೀಯ ಯುವಕ ವಿಷ್ಣುವಿಜಯ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ