ಬೆಂಗಳೂರು
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ನಮ್ಮ ಹಿಂದಿನ ಸರ್ಕಾರದ ಕನಸಿನ ಕೂಸು ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಯೋಜನೆಗೆ ತಮಿಳು ನಾಡಿನ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ರಾಜಕೀಯ ಉದ್ದೇಶಕ್ಕಾಗಿ ತಕರಾರು ತೆಗೆದಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದೇ ಸೂಕ್ತ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಮಾಜಿ ಮುಖ್ಯಮಂತ್ರಿಗಳು, ಕಾನೂನು ತಜ್ಞರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ಈಗ ಧ್ವನಿ ಎತ್ತಿದೆ. ಮೇಕೆದಾಟು ಹಿಂದಿನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ.
ಆದರೂ ಆ ರಾಜ್ಯ ರಾಜಕೀಯ ಉದ್ದೇಶ ಇಟ್ಟುಕೊಂಡು ತಕರಾರು ತೆಗೆದಿದೆ. ನಮ್ಮ ವ್ಯಾಪ್ತಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಸುಪ್ರೀಂಕೋರ್ಟ್ ಹಾಗೂ ನ್ಯಾಯ ಮಂಡಳಿ ಆದೇಶಗಳು ನಮಗೆ ಪೂರಕವಾಗಿವೆ. ಯೋಜನೆ ಬೇಡ ಎಂದು ಯಾವ ಅದೇಶವೂ ಹೇಳಿಲ್ಲ. ಯೋಜನೆಗೆ ನಾವು ತಮಿಳುನಾಡಿನ ಒಪ್ಪಿಗೆ ಪಡೆಯುವ ಅವಶ್ಯಕತೆ ಕೂಡ ಇಲ್ಲ ಎಂದರು.ತಮಿಳುನಾಡಿನ ತಕರಾರಿಗೆ ಯಾವುದೇ ಆಧಾರ, ಸಾಕ್ಷಿ ಇಲ್ಲ. ನ್ಯಾಯ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಆದೇಶಗಳು ಸ್ಪಷ್ಟವಾಗಿವೆ.
ನಮ್ಮ ಯೋಜನೆ ನ್ಯಾಯಯುತವಾಗಿದೆ. ನಮ್ಮ ವಕೀಲರು ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮನವೊಲಿಸುವ ಕೆಲಸ ಮಾಡಬೇಕು. ಒಂದು ವೇಳೆ ಕೋರ್ಟ್ ಮಧ್ಯಂತರ ತಡೆ ಆದೇಶ ಕೊಟ್ಟರೆ ಕಷ್ಟವಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು. ವಕೀಲರ ತಂಡ ಮುಂಜಾಗ್ರತೆ ವಹಿಸಬೇಕು ಎಂದು ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ