ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹ

ದಾವಣಗೆರೆ :

        ಬಾಬರಿ ಮಸೀದಿಯನ್ನು ಪುನರ್ ನಿರ್ಮಿಸಿ, ಗಣರಾಜ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

          ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪಿಎಫ್‍ಐ ಕಾರ್ಯಕರ್ತರು, ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಘೋಷಣೆ ಕೂಗಿ ಒತ್ತಾಯಿಸಿ. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, 1992ರ ಡಿ.6 ರಂದು ಹಿಂದುತ್ವವನ್ನು ಪ್ರತಿಪಾದಿಸುವ ಫ್ಯಾಸಿಸ್ಟ್ ಶಕ್ತಿಗಳು ಅಯೋಧ್ಯೆಯಲ್ಲಿ ಸುಮಾರು 463 ವರ್ಷ ಹಳೆಯದಾದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ, ಭಾರತ ಎತ್ತಿ ಹಿಡಿದಿದ್ದ ಮೌಲ್ಯಗಳನ್ನು ಧ್ವಂಸಗೊಳಿಸಿ, ಸಂವಿಧಾನದ ಆಶಯವನ್ನು ಬುಡಮೇಲು ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಬಾಬರಿ ಮಸೀದಿ ಧ್ವಂಸಗೊಳ್ಳುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕನಂತಿದ್ದವು. ಬಾಬರಿ ಮಸೀದಿ ಧ್ವಂಸದ ಬಳಿಕ ದೇಶಾದ್ಯಂತ ದಾಳಿ, ಸಾವುನೋವುಗಳು ನಡೆದವು. ಬಾಬರಿ ಧ್ವಂಸಗೊಳಿಸಿದ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ ಸಹ ಆರೋಪಿಗಳು ಕಾನೂನಿನ ಮತ್ತು ಶಿಕ್ಷೆಯ ಭಯವಿಲ್ಲದೆ ನಿರ್ಭೀತಿಯಿಂದ ತಿರುಗಾಡುತ್ತಿದ್ದಾರೆ.

            ಬಾಬರಿ ಮಸೀದಿ ಧ್ವಂಸಗೊಳಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಬರಿ ಮಸೀದಿಯನ್ನು ಪುನರ್ ಸ್ಥಾಪಿಸಿ, ಗಣರಾಜ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಮಸೀದಿ ಧ್ವಂಸದ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಲಿಬರ್ಹಾನ್ ಆಯೋಗದ ವರದಿಯಲ್ಲಿ ಆರೋಪಿಸಲಾಗಿರುವ ಎಲ್ಲರ ವಿರುದ್ಧವೂ ಸರ್ಕಾರ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

             ಪ್ರತಿಭಟನೆಯಲ್ಲಿ ಪಿಎಫ್‍ಐ ಜಿಲ್ಲಾಧ್ಯಕ್ಷ ಫೈಯಾಜ್ ಅಹಮದ್, ಮುಖಂಡರಾದ ಆಸೀಫ್, ಹಜರ್, ಯಹಿಯಾ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link