ಭೈರಗೊಂಡ್ಲು ಡ್ಯಾಂ-ಸಂತ್ರಸ್ತರಿಗೆ ಸಂತೃಪ್ತ ಪರಿಹಾರ : ಡಿಸಿಎಂ

ಕೊರಟಗೆರೆ

           ರಾಜ್ಯ ಸಮ್ಮಿಶ್ರ ಸರ್ಕಾರ ಎತ್ತಿಹೊಳೆ ಯೋಜನೆಗೆ ಬದ್ದವಾಗಿದ್ದು, ಸತತ ಬರಗಾಲದಿಂದ ನಲುಗಿರುವ ತುಮಕೂರುಜಿಲ್ಲೆಗೆ ಈ ಯೋಜನೆ ವರದಾನವಾಗಲಿದೆ. ಭೈರಗೊಂಡ್ಲು ಬಳಿ ನಿರ್ಮಾಣವಾಗಲಿರುವ ಬಫರ್‍ಡ್ಯಾಂನಿಂದ 5 ಗ್ರಾಮಗಳು ಮುಳುಗಡೆಯಾಗಿ, 3500 ಕ್ಕೂ ಹೆಚ್ಚು ರೈತರು ಜಮೀನು ಕಳೆದುಕೊಳ್ಳುತ್ತಿರುವ ಆತಂಕ ಪಡುವ ಅವಶ್ಯಕತೆಯಿಲ್ಲ. ಪಕ್ಕದ ಜಿಲ್ಲೆಯ ದೊಡ್ಡಬಳ್ಳಾಪುರ ಮಾದರಿಯಲ್ಲಿಯೇ ಪರಿಹಾರ ಹಣ ಹಾಗೂ ಪುನರ್ವಸತಿ ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ನಮ್ಮ ತಾಲ್ಲೂಕಿನ ರೈತರ ಹಿತದೃಷ್ಟಿಗೆ ನಾನು ಬದ್ದ ಎಂದು ಡಿಸಿಎಂ ಪರಮೇಶ್ವರ್ ರೈತರಿಗೆ ಭರವಸೆ ನೀಡಿದರು.

            ಅವರು ತಾಲ್ಲೂಕಿನ ಕೋಳಾಲ ಹೋಬಳಿ ಎಂ.ಗೊಲ್ಲಹಳ್ಳಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀನಾಡಮಾರಮ್ಮ ದೇವಾಲಯದ ನೂತನ ಕಟ್ಟಡ ಮತ್ತು ದೇವಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗೆ ಎತ್ತಿನಹೊಳೆ ಯೋಜನೆ ತಾಲ್ಲೂಕಿನ ಸಾವಿರಾರು ರೈತರಿಗೆ ಸಹಕಾರಿಯಾಗಲಿದೆ ಎಂದರು.

            ಎತ್ತಿನಹೊಳೆ ಯೋಜನೆ ತುಮಕೂರು, ಕೋಲಾರ ಹಾಗೂ ಚಿಕ್ಕ ಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸಲಿದೆ. ತುಮಕೂರು ಜಿಲ್ಲೆಯ ನೂರಾರು ಕೆರೆಗಳಿಗೆ ಈ ಯೋಜನೆಯಿಂದ ನೀರು ಹರಿದು, ಲಕ್ಷಾಂತರ ರೈತರ ಬಾಳು ಹಸನಾಗಲಿದೆ ಎಂದರು.

           ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 50 ಸಾವಿರ ರೂ.ವರೆಗೆ ತಕ್ಷಣ ಸಾಲಾ ಮನ್ನಾ ಮಾಡಲು ಸಿದ್ದತೆ ನಡೆಸಿದ್ದು, ಉಳಿದಂತೆ 3 ಲಕ್ಷದೊಳಗೆ ಇರುವಂತಹ ಸಾಲವನ್ನು ಮನ್ನಾ ಮಾಡಲು ಹಂತ ಹಂತವಾಗಿ ತೀರುವಳಿಗೆ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ವಿಚಾರದಲ್ಲಿ ಸಹಕಾರ ನೀಡುವಂತೆ ಖುದ್ದು ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮೋದಿಯವರನ್ನು ಹಲವು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

              ಸಮಾಜದಲ್ಲಿ ನ್ಯಾಯ, ನೀತಿ, ಧರ್ಮ ನೆಲೆಗೊಳ್ಳಬೇಕು. ಧಾರ್ಮಿಕ ಆಚರಣೆಗಳು ಹೆಚ್ಚಾದಂತೆಲ್ಲಾ ಮನುಷ್ಯ ಸನ್ಮಾರ್ಗದಡೆಗೆ ಧಾವಿಸಲಿದ್ದಾನೆ. ಆದರೆ ಇಂದಿನ ಯುವಪೀಳಿಗೆ ಸನ್ಮಾರ್ಗದಿಂದ ದೂರ ಉಳಿಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಧರ್ಮದೆಡೆಗೆ ಯುವಪೀಳಿಗೆಯನ್ನು ಕರೆತರುವಂತಹ ವಾತಾವರಣ ಧಾರ್ಮಿಕ ಆಚರಣೆಯಿಂದ ಮಾತ್ರ ಸಾಧ್ಯ ಎಂದು ಪ್ರತಿಕ್ರಿಯಿಸಿದ ಡಿಸಿಎಂ ಎಂ.ಗೊಲ್ಲಹಳ್ಳಿ ಗ್ರಾಮಕ್ಕೆ ಇನ್ನೊಂದು ವಾರದಲ್ಲಿ ಹದಗೆಟ್ಟ ರಸ್ತೆಗೆ ಡಾಂಬರೀಕರಣ ವ್ಯವಸ್ಥೆಕಲ್ಪಿಸುವುದರ ಜೊತೆಗೆ ಬಸ್ಸಿನ ಸೌಲಭ್ಯ ನೀಡುತ್ತೇನೆ. ದೇವಾಲಯದ ಸಮೀಪ ಬಡ ಸಮುದಾಯದ ಹಿತದೃಷ್ಟಿಯಿಂದ ಸಮುದಾಯ ಭವನ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

             ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ನಮ್ಮ ಹಳ್ಳಿಯ ರೈತರು ವಿದ್ಯಾವಂತರು ಆಗದಿದ್ದರೂ ಸಹ ಬುದ್ದಿವಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಮನುಷ್ಯನು ಸತ್ತಾಗ ನಮ್ಮ ಹಿಂದೆ ಹಣ, ಆಸ್ತಿ, ಬಂಗಾರ ಏನೂ ಬರುವುದಿಲ್ಲ. ನಾವು ಸತ್ತ ಮೇಲೆ ನಾವು ಮಾಡಿದ ಉತ್ತಮ ಕೆಲಸ ಮಾತ್ರ ಉಳಿಯುತ್ತದೆ. ಭಗವಂತ ನಮಗೆ ನೀಡಿದ ಅಧಿಕಾರ ಮತ್ತು ಶ್ರೀಮಂತಿಕೆ ಎರಡನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಬಳಸುವಂತಹ ಚಿಂತನೆ ನಡೆಸಬೇಕು ಎಂದು ಹೇಳಿದರು.

             ಕೋಳಾಲ ಜಿಪಂಸದಸ್ಯ ಶಿವರಾಮಯ್ಯ ಮಾತನಾಡಿ, ಕೋಳಾಲ ಹೋಬಳಿಯ ಬಹುತೇಕ ಜನ ಒಕ್ಕಲುತನ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಈ ಭಾಗದ ಜನ ವ್ಯವಸಾಯದ ಜೊತೆಗೆ ತಮ್ಮ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತಾಗಬೇಕು ಎಂದರು.

             ಕಾರ್ಯಕ್ರಮದಲಿ  ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಪಂ ಸಿಇಓ ಅನಿಸ್‍ಕಣ್ಮಯಿಜಾಯ್, ಜಿಪಂ ಸದಸ್ಯ ನಾರಾಯಣಮೂರ್ತಿ, ಮಾಜಿ ನಗರಸಭಾ ಸದಸ್ಯ ವಾಲೆ ಚಂದ್ರಯ್ಯ, ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‍ಕುಮಾರ್‍ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಗ್ರಾಪಂ ಅಧ್ಯಕ್ಷೆ ರಾಧಮ್ಮ, ಸದಸ್ಯ ಮುತ್ತುರಾಜು, ಸಿದ್ದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮುಖಂಡರಾದ ಮುತ್ತುರಾಜು, ವೆಂಕಟೇಶ್, ಬಸವರಾಜು, ರಮೇಶ್, ಕೆಂಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link