ಹೊನ್ನಾಳಿ:
ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಎಚ್. ಬಸವರಾಜ್ ಹೇಳಿದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಗುರುವಾರ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಅಂಬೇಡ್ಕರ್ ತಮ್ಮ ಅನನ್ಯ ಅಧ್ಯಯನದಿಂದಾಗಿಯೇ ಜಗತ್ತಿನ ಪ್ರಮುಖ ವ್ಯಕ್ತಿಯಾಗಿ ರೂಪುಗೊಂಡರು. ಅವರಂತೆ ನಾವೆಲ್ಲರೂ ಸುಶಿಕ್ಷಿತರಾಗಿ ಬದುಕೋಣ. ನಾಡಿಗೆ ಕೀರ್ತಿ ತರೋಣ ಎಂದು ತಿಳಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಯಾವುದೇ ಒಂದು ಜನಾಂಗಕ್ಕೆ ಮಾತ್ರ ಅನುಕೂಲವಾಗುವಂತೆ ಮೀಸಲಾತಿ ರೂಪಿಸಲಿಲ್ಲ. ಬದಲಾಗಿ, ಶತ ಶತಮಾನಗಳಿಂದ ಸಮಾಜದಲ್ಲಿ ಶೋಷಣೆಗೊಳಗಾದ ದೀನರು-ದಲಿತರ ಬಗ್ಗೆ ಅಧ್ಯಯನ ನಡೆಸಿ, ಎಲ್ಲಾ ಶೋಷಿತರಿಗೂ ಅನುಕೂಲ ಕಲ್ಪಿಸಿದರು. ಅವರು ಮೀಸಲಾತಿ ನೀತಿ ರೂಪಿಸದಿದ್ದರೆ ನಾವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ಅಂಧಕಾರದಲ್ಲಿಯೇ ಇರಬೇಕಿತ್ತು ಎಂದು ವಿವರಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ್ ನಾಯ್ಕರ್, ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸಣ್ಣ, ಕುರುವ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಚನ್ನೇಶ್ವರ, ಹುಣಸೇಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಶುಂಠೇರ್ ಇತರರು ಮಾತನಾಡಿದರು.
ಭೋವಿ ಸಮಾಜದ ಮುಖಂಡರಾದ ನಾಗರಾಜಪ್ಪ, ಶಿವಶಾಂತ ಪೆಟ್ರೋಲ್ ಬಂಕ್ ಮಾಲೀಕ ವಿ. ನಿಜಲಿಂಗಪ್ಪ, ಮುಖಂಡರಾದ ಅಂಜುನಾಯ್ಕ್, ಡಾ. ವಿಶ್ವನಟೇಶ್, ಕೃಷ್ಣಾನಾಯ್ಕ, ರೇವ್ಯಾನಾಯ್ಕ, ಕೊಡತಾಳ್ ರುದ್ರೇಶ್, ಶಾಂತರಾಜ್, ಹಾಲೇಶ್, ಚಂದ್ರಪ್ಪ, ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು, ಮುಖಂಡರು, ಸದಸ್ಯರು, ನೌಕರರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ