ಮಧುಗಿರಿ
ಐ.ಡಿ.ಹಳ್ಳಿ ಹೋಬಳಿಯ ಮುದ್ದೆನೇರಳೆಕೆರೆ ಗ್ರಾಮದಲ್ಲಿ ಶನಿವಾರದಂದು ಬೋವಿ ಜನಾಂಗದ ವತಿಯಿಂದ ನಡೆದ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಭಾಗವಹಿಸಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಆಂಧ್ರದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ಜನತೆ ಸದಾ ತೆಲುಗಿನಲ್ಲಿ ಮಾತನಾಡುವುದು ಮತ್ತು ವ್ಯವಹರಿಸುತ್ತಾರೆ. ಜನರು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಬಿಡುತ್ತಿರುವಂತಹ ಈ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ. ಈ ಗ್ರಾಮದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡುವುದಕ್ಕೆ ನಾನು ಸಿದ್ಧನಾಗಿದ್ದೇನೆ. ಹಾಗೆಯೇ ನಾವೆಲ್ಲರೂ ಕನ್ನಡ ನಾಡು, ನುಡಿ, ಜಲ, ಭಾಷೆಯ ವಿಷಯದಲ್ಲಿ ನಾವೆಲ್ಲರೂ ಸ್ವಾಭಿಮಾನದಿಂದ ಇರಬೇಕು. ನಮ್ಮ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ನಮ್ಮ ನಾಡಿನ ಕಲೆ, ಸಾಹಿತ್ಯ ಇಂತಹ ಅನೇಕ ಪುಸ್ತಕಗಳನ್ನು ಓದುವುದರ ಮೂಲಕ ನಾವುಗಳು ನಮ್ಮ ಕನ್ನಡ ಭಾಷೆಯನ್ಮು ಜನರಿಗೆ ಪರಿಚಯಿಸಬೇಕು. ಆಗ ಕನ್ನಡ ಭಾಷೆ ಶಾಶ್ವತವಾಗಿ ಉಳಿಯುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಗೆ ನಾನು ಮೊದಲ ಆದ್ಯತೆಯನ್ನು ನೀಡುತ್ತೇನೆ. ಗ್ರಾಮಸ್ಥರು ಸಮುದಾಯ ಭವನ ಮತ್ತು ಕುಡಿಯುವ ನೀರಿನ ಘಟಕವನ್ನು ಕೇಳಿದ್ದೀರಿ. ಆದ್ದರಿಂದ ಶೀಘ್ರದಲ್ಲಿ ಇದನ್ನು ಅನುಷ್ಠಾನ ಮಾಡುತ್ತೇನೆ. ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕೆಗಳಿಲ್ಲದೆ ಇಲ್ಲಿನ ಯುವಕರು ಉದ್ಯೋಗದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಮೊದಲು ಕೈಗಾರಿಕೆಯನ್ನು ಸ್ಥಾಪಿಸಲು ಸಿಎಂ ಕುಮಾರಸ್ವಾಮಿರವರ ಬಳಿ ಚರ್ಚಿಸಿದ್ದೇನೆ ಎಂದರು.
ಇದೇ ರೀತಿ ತಾಲ್ಲೂಕಿಗೆ ಎತ್ತಿನಹೊಳೆ ಯೋಜನೆಯು ಸಂಜೀವಿನಿಯಾಗಿದೆ. ಇದನ್ನು ಕುಮಾರಸ್ವಾಮಿಯವರು ಗಂಭೀರವಾಗಿ ಪರಿಗಣಿಸಿದ್ದಾರೆ. ಕೇವಲ ಎರಡು ವರ್ಷಗಳಲ್ಲಿ ತಾಲ್ಲೂಕಿನಲ್ಲಿರುವ ಒಟ್ಟು 52 ಕೆರೆಗಳಿಗೆ ನೀರು ಹರಿಸುತ್ತೇವೆ. ಆದ್ದರಿಂದ ರೈತರು ಆತ್ಮ ವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಇರಬೇಕಾಗಿದೆ. ಈ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿದ್ದರೂ ಸಹ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೆಚ್ಚಾಗಿ ಓಡಾಡಿ ತುಂಬಾ ಕಷ್ಟ ಬಿದ್ದು ನನಗೆ ಹೆಚ್ಚಿನ ಮತ ಬರುವಂತೆ ಮಾಡಿದ್ದೀರಿ. ಆದ್ದರಿಂದ ನಿಮ್ಮ ಋಣವನ್ನು ನಾನು ಎಂದೂ ಸಹ ಮರೆಯುವುದಿಲ್ಲ. ನಿಮ್ಮ ಋಣವನ್ನು ತೀರಿಸುವಂತಹ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಜೆಡಿಎಸ್ ಪಕ್ಷದ ಮುಖಂಡರಾದ ತುಂಗೋಟಿ ರಾಮಣ್ಣ ಮಾತನಾಡಿ, ಈ ನಮ್ಮ ಗಡಿ ಬಾಗದಲ್ಲಿ ಹಿಂದೆ ಬರೀ ತೆಲುಗು ಭಾಷೆಯ ನಾಟಕಗಳನ್ನು ಮಾತ್ರ ಪ್ರದರ್ಶನ ಮಾಡುತ್ತಿದ್ದರು. ಈ ಭಾಗದಲ್ಲಿ ಕನ್ನಡ ಭಾಷೆ ಮಾತನಾಡುವವರೇ ಇರಲಿಲ್ಲ. ಇಂತಹ ಗಡಿ ಭಾಗದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಈ ಗಡಿ ಭಾಗದಲ್ಲಿ ನಮ್ಮ ಶಾಸಕರಿಗೆ ಅತಿ ಹೆಚ್ಚು ಮತಗಳನ್ನು ಹಾಕಿಸಿರುವ ಕಾರಣ ಇಂದು ನಮ್ಮೆಲ್ಲರಿಗೂ ಉತ್ತಮವಾದ ಜನಪ್ರಿ ಶಾಸಕರು ದೊರೆತಿದ್ದಾರೆ. ಇವರು ಸಹ ಸುಮ್ಮನೆ ಕೈ ಕಟ್ಟಿಕೊಂಡು ಕುಳಿತುಕೊಳ್ಳದೆ, ಈ ಗ್ರಾಮಗಳಿಗೆ ನಮ್ಮ ಕಡೆಯಿಂದ ಏನಾದರೂ ಒಂದು ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಮುಂದಾಗಿದ್ದಾರೆ. ರೈತರಿಗೆ ಅತಿ ಶೀಘ್ರದಲ್ಲಿಯೇ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಮುಂದಾಗಿದ್ದಾರೆ. ಆದ್ದರಿಂದ ಇನ್ನೇನು ಸ್ವಲ್ಪ ದಿನಗಳಲ್ಲಿಯೆ ಕೈಗಾರಿಕಾ ಗಾರ್ಮೆಂಟ್ಸ್ ಗಳನ್ನು ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಎಪಿಎಂಸಿ ಸದಸ್ಯ ಕೂರಲಪ್ಪ ಮಾತನಾಡಿ, ನಮ್ಮ ಗ್ರಾಮದಲ್ಲಿ ಮುಖ್ಯವಾಗಿ ಸಮುದಾಯ ಭವನ ಬೇಕಾಗಿದೆ ಹಾಗೂ ದಿನನಿತ್ಯದ ಕುಡಿಯುವ ನೀರಿನ ಘಟಕ ಬೇಕಾಗಿದ್ದು, ನಮ್ಮ ಗ್ರಾಮಕ್ಕೆ ಈ ಎರಡು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿ ಕೊಂಡರು.
ಈ ಸಂದರ್ಭದಲ್ಲಿ ಬಿಇಒ ನರಸಿಂಹಯ್ಯ, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಎನ್.ರಾಜಣ್ಣ, ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಯರಗುಂಟೆ ಚಂದ್ರಣ್ಣ, ಶಾಲೆಯ ಮುಖ್ಯ ಶಿಕ್ಷಕಿ ನರಸಮ್ಮ, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು, ಚಿಕ್ಕ ನರಸಿಂಹಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನಪ್ಪ, ಶನಿವಾರಪ್ಪ, ಅಶ್ವತ್ಥಪ್ಪ, ಪಿಡಿಒ ರಮೇಶ್ ಬಾಬು, ಶ್ರೀಹರಿ ಗಣೇಶ್, ಕೈಮರ ಮಾರುತಿ, ಗ್ರಾಮದ ಯುವಕರಾದ ಧನಂಜನಯ್ಯ, ಮಂಜಣ್ಣ, ರಮೇಶ್, ದೊಡ್ಡ ಯಲ್ಕೂರು ಯುವ ಮುಖಂಡ ಮಧು, ಶಿಕ್ಷಕ ಶ್ರೀನಿವಾಸ್, ದಾಸಣ್ಣ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








