ದಾವಣಗೆರೆ:
ಒಳ ಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ಕ್ಷತ್ರಿಯ ಸಮುದಾಯಗಳನ್ನು ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಯಾದವ ಮಹಾಸಭದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ತಿಳಿಸಿದರು.
ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಕ್ಷತ್ರಿಯ ಸಮುದಾಯಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮರಾಠ ಸಮಾಜವು ಹಿಂದೂ ಕ್ಷತ್ರಿಯ, ಅರಸು ಕ್ಷತ್ರಿಯ, ರಾಜು ಕ್ಷತ್ರಿಯ, ಭಾವಸಾರ ಕ್ಷತ್ರಿಯ, ಸೋಮವಂಶಿ ಸಹಸ್ರಾರ್ಜುನ ಕ್ಷತ್ರಿಯ, ರಜಪೂತ ಕ್ಷತ್ರಿಯ, ಚೌಹಾನ್ ಕ್ಷತ್ರಿಯ, ಮರಾಠಾ ಕ್ಷತ್ರಿಯ, ಸೋಮವಂಶಿ ಆರ್ಯ ಕ್ಷತ್ರಿಯ ಸುಮಾರು 36 ಒಳ ಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿದೆ. ಈ ಎಲ್ಲಾ ಒಳ ಪಂಗಡಗಳು ಒಂದಾದರೆ, ಕರ್ನಾಟಕದಲ್ಲಿ 8ರಿಂದ 9 ಲೋಕಸಭಾ ಸದಸ್ಯರನ್ನು, 30ರಿಂದ 35 ಶಾಸಕರನ್ನು ಆರಿಸಿ ತರಬಹುದಾಗಿದೆ ಎಂದರು.
ಮರಾಠ ಸಮಾಜವು ಒಂದಾದರೆ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕರ್ನಾಟಕದಲ್ಲಿ ಅಭಿವೃದ್ಧಿ ಸಾಧಿಸಬಹುದು. ಆದ್ದರಿಂದ ಒಗ್ಗೂಡಿಸಲು ಏಕತೆ, ಜಾಗೃತಿ, ಅಭಿವೃದ್ಧಿಯ ಮಂತ್ರ ಸಾರಬೇಕಾಗಿದೆ. ಜಾತಿ ವ್ಯವಸ್ಥೆಯನ್ನು ಆಧರಿಸಿರುವ ಕರ್ನಾಟಕದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಮಹಾನ್ ಕ್ಷತ್ರಿಯ ಪರಂಪರೆ ಅವನತಿಯ ಅಂಚಿಗೆ ತಲುಪುವ ಅಪಾಯವೂ ಇದೆ ಎಂದು ಹೇಳಿದರು.
ಶ್ರೀರಾಮ, ಶ್ರೀಕೃಷ್ಣ, ಶ್ರೀಸಹಸ್ರಾರ್ಜುನ ಮಹರಾಜರು, ಪಾಂಡವರು, ಶ್ರೀವನ್ನಿರಾಯ ಸ್ವಾಮಿ, ಶ್ರೀಮಹಾರಾಣಾ ಪ್ರತಾಪ, ಶ್ರೀಶಿವಾಜಿ ಮಹಾರಾಜರು, ಶ್ರೀಸಂತ ನಾಮದೇವ ಮಹಾರಾಜರು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಹೀಗೆ ಅನೇಕ ಮಹಾನೀಯರು ಜನಿಸಿರುವ ಕ್ಷತ್ರಿಯ ಪರಂಪರೆಯನ್ನು ಉಳಿಸಿ, ಬೆಳೆಸುವುದು ಯುವಕರ ಮುಖ್ಯ ಜವಾಬ್ದಾರಿಯಾಗಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯಸಿಂಗ್, ಸಮಾಜದ ಮುಖಂಡರುಗಳಾದ ಯಶವಂತ್ರಾವ್ ಜಾಧವ್, ಮಾಲತೇಶ್ರಾವ್ ಜಾಧವ್, ಮರಿಯೋಜಿರಾವ್, ನೇಕಾರ ಸಮಾಜದ ಗುಬ್ಬಿ ಬಸವರಾಜ್, ರಾಮಚಂದ್ರ ಕಲಾಲ್, ತಪೋವನದ ಶಶಿಕುಮಾರ್, ತಾರ ಸಿಂಗ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/9_dvg_06_3.gif)