ಚಿತ್ರದುರ್ಗ:
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲಿಷ್ಟರಾಗಬೇಕಾದರೆ ಮೊದಲು ಸಂಘಟಿತರಾಗಿ ಎಂದು ಮಡಿವಾಳ ಜನಾಂಗಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಡಿವಾಳರ ಸಂಘ ಬೆಂಗಳೂರು, ಜಿಲ್ಲಾ ಮಡಿವಾಳರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಮಹಿಳಾ ಮಡಿವಾಳರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಜನಾಂಗದಲ್ಲೂ ಸಂಘಟನೆ ಭಾವನೆ ಬೆಳೆಯುತ್ತಿದೆ. ಅದರಂತೆ ಮಡಿವಾಳ ಜನಾಂಗವೂ ಸಂಘಟನೆಯಾಗುವುದರಲ್ಲಿ ತಪ್ಪೇನಿಲ್ಲ. ಸಂಘಟನೆ ಎನ್ನುವುದು ಯಾವುದೇ ಒಂದು ಜನಾಂಗದ ವಿರುದ್ದವಲ್ಲ. ಅವರವರ ಸಮಸ್ಯೆಗಳನ್ನು ನಿವಾರಿಸಿಕೊಂಡು ಸರ್ಕಾರದಿಂದ ದೊರಕುವ ಸವಲತ್ತುಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ಅತ್ಯವಶ್ಯಕ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ಹಿಮಾಚಲದವರೆಗೆ ಇರುವ ಮಡಿವಾಳ ಜನಾಂಗ ಒಂದಾದರೆ ಎರಡು ರಾಜ್ಯಗಳನ್ನು ರಚನೆ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ದೊಡ್ಡ ದೊಡ್ಡ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಆಸ್ತಿ ಮಾಡಿಕೊಂಡಿವೆ. ಆದರೆ ಮಡಿವಾಳ ಸ್ವಾಮೀಜಿಗೆ ಅಂತಹ ಯಾವುದೇ ಶಕ್ತಿಯಿಲ್ಲ. ಅದಕ್ಕಾಗಿ ಮಡಿವಾಳ ಜನಾಂಗದವರು ಸ್ವಾಮೀಜಿ ನೆರವಿಗೆ ಮುಂದೆ ಬನ್ನಿ. ನಿಮ್ಮ ಜನಾಂಗದ ಒಂದು ನಿವೇಶನದ ಸಮಸ್ಯೆಯಿತ್ತು. ಅದನ್ನು ಬಗೆಹರಿಸಿ ಜಾಗ ಉಳಿಸಿಕೊಟ್ಟಿದ್ದೇನೆ. ಆ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಿ ಮಡಿವಾಳ ಮಠಕ್ಕೆ ಆದಾಯ ಬರುವಂತೆ ಮಾಡಿಕೊಳ್ಳಿ. ವಿಧಾನಸಭೆಯಲ್ಲಿ ಮಡಿವಾಳ ಜನಾಂಗದ ಯಾವೊಬ್ಬ ಶಾಸಕರು ಇಲ್ಲ. ಕಾನೂನು ರಚಿಸುವ ಜಾಗ ವಿಧಾನಸಭೆಯಲ್ಲಿ ನಿಮ್ಮ ಜನಾಂಗದ ಯಾರಾದರೂ ಶಾಸಕರಿದ್ದಾರೆ ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬಹುದು. ಹಾಗಾಗಿ ಮುಂದಿನ ವಿಧಾನಸಭೆ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಡಿವಾಳ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತಾಗಿ ಎಂದು ತಿಳಿಸಿದರು.
ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಸಣ್ಣ ಸಣ್ಣ ಜಾತಿಯ ಮಹಿಳೆಯರಿಗೆ ಮೀಸಲಾತಿ ಸಿಕ್ಕಾಗ ಮಾತ್ರ ರಾಜಕೀಯವಾಗಿ ಅಧಿಕಾರ ನೀಡಿದಂತಾಗುತ್ತದೆ ಎಂದರು.
ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಜನಪ್ರತಿನಿಧಿಗಳಿಗೆ ಜಾತಿ ಇರಬಾರದು. ಜಾತಿ ಮೀರಿ ಬೆಳೆದಾಗ ಬಸವಾದಿ ಶರಣರ ಪರಂಪರೆಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ. ಸಮಾಜದಲ್ಲಿ ಹೆಣ್ಣಿನ ಸಹಕಾರವಿಲ್ಲದೆ ಪುರುಷರು ಏನು ಸಾಧನೆ ಮಾಡಲು ಆಗುವುದಿಲ್ಲ. ನಾನು ಸಂಸದನಾಗಲು ಪತ್ನಿ ಸಹಕಾರ ಕಾರಣ ಎಂದು ನೆನಪಿಸಿಕೊಂಡರು.
ಹೆಣ್ಣಿಗೆ ಗೌರವ ಕೊಡಬೇಕು. ಹೆಣ್ಣನ್ನು ಪೂಜಿಸದ ಜಾಗದಲ್ಲಿ ಶ್ರೇಯಸ್ಸು ಇರುವುದಿಲ್ಲ.ದೈನಂದಿನ ಜೀವನದಲ್ಲಿ ಹೆಣ್ಣನ್ನು ಗೌರವಿಸಬೇಕು. ಇಂದಿರಾಗಾಂಧಿ ಹದಿನೈದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಉಕ್ಕಿನ ಮಹಿಳೆ ಎಂದು ಹೆಸರು ಪಡೆದರು. ಒನಕೆ ಓಬವ್ವ, ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಇವರುಗಳೆಲ್ಲಾ ಹೆಣ್ಣು ತಾನೆ. ಆದ್ದರಿಂದ ಮಡಿವಾಳ ಜನಾಂಗದ ಮಹಿಳಾ ಸಮಾವೇಶ ನಡೆಯುತ್ತಿರುವುದು ಅತ್ಯಂತ ಸಂತೋಷ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಯಾವ ಪಕ್ಷದವರಾದರೂ ಗೆಲ್ಲಬಹುದು, ಸೋಲಬಹುದು. ಆದರೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎಂಬ ಗುರುತು ಶಾಶ್ವತವಾಗಿ ಉಳಿಯುವುದು ತುಂಬಾ ಮುಖ್ಯ ಎಂದು ಹೇಳಿದರು.
ಮಡಿವಾಳ ಮಾಚಿದೇವರು ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರು. ಮಡಿವಾಳ ಸಮುದಾಯದವರು ಶರಣ ಪರಂಪರೆಗೆ ಸೇರಿದವರು. ಅದಕ್ಕಾಗಿ ಕುಲಕಸುಬನ್ನು ಯಾರು ಕೀಳೆಂದು ಭಾವಿಸಬಾರದು. ಕಾಯಕದಲ್ಲಿ ಭಗವಂತನನ್ನು ಕಾಣಬೇಕು. ಹಿಂದುಳಿದ ಮಡಿವಾಳ ಸಮುದಾಯಕ್ಕೆ ಪರಂಪರೆ, ಇತಿಹಾಸ, ಭಕ್ತಿ, ನಂಬಿಕೆ ಇದೆ. ಹುಟ್ಟು ಮುಖ್ಯವಲ್ಲ. ಮೇಲ್ಜಾತಿಯವರು ಕೀಳು ಕೆಲಸ ಮಾಡಿದರೆ ಹೇಗೆ ಉತ್ತಮರಾಗುತ್ತಾರೆ. ಜಾತಿಯಿಂದ ಯಾರನ್ನು ಮೇಲು-ಕೀಳೆಂದು ಅಳೆಯುವುದು ಸರಿಯಲ್ಲ. ಕೆಳಜಾತಿಯವರು ಮೇಲ್ಜಾತಿಯವರ ಮೇಲೆ ಸಂಘರ್ಷವನ್ನು ಮಾಡಬಾರದು ಎಂದು ಮಡಿವಾಳ ಜನಾಂಗಕ್ಕೆ ತಿಳಿಸಿದರು.ಬಸವ ಮಡಿವಾಳ ಮಾಚಿದೇವಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮಡಿವಾಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಂಜಿನಪ್ಪ, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಸ್.ವಿ.ವಿಜಯಣ್ಣ, ಸಮಾಜ ಸೇವಕ ಗೋಪಿಕೃಷ್ಣ, ನಗರಸಭೆ ಸದಸ್ಯೆ ಅನಿತ ಟಿ.ರಮೇಶ್, ಮಡಿವಾಳರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಲೆಕ್ಕಪರಿಶೋಧಕ ಮಂಜುನಾಥ್, ವೆಂಕಟರಾಮ್, ಕೆ.ಓ.ಎಫ್.ಒಕ್ಕೂಟದ ಅಧ್ಯಕ್ಷ ಬಿ.ಹನುಮಂತರಾಯ, ಜಿಲ್ಲಾ ಮಡಿವಾಳ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ವಿ.ಎಲ್.ಪ್ರಶಾಂತ್, ಸಮಾಜ ಸೇವಕ ಗೋಪಿಕೃಷ್ಣ ವೇದಿಕೆಯಲ್ಲಿದ್ದರು.ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಟಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ