“ಮುನ್ನೀರ್ ಬೆನ್ನೀರೆನೆ, ಬೆರೆಸಲಣ್ಣಾ ತಣ್ಣೀರೊಳವೇ?..? ಮೂರು ನದಿಗಳ ಸಂಗಮವೇ ಈ ಸಮುದ್ರ. ಸಮುದ್ರದ ನೀರೇ ಕೊತ ಕೊತ ಕುದಿಯುತ್ತಿದ್ದರೆ, ಇನ್ನೂ ಅದನ್ನು ತಂಪಾಗಿಸಲು ತಣ್ಣೀರೆಲ್ಲಿ ತರಲಿ…? ಎಂದು ನೋವಿನಿಂದ ತನ್ನ ಮಾತನ್ನು ಆರಂಭಿಸಿದಾಕೆ ಒಬ್ಬ ಧೀರ ಯೋಧನ ಮಡದಿ.
ನನ್ನ ಹೊಸ ಬಾಳಿನ ಹೊಸ್ತಿಲಿಗೆ ಕಾಲಿಟ್ಟು ಬಾಳೆಂಬ ಭಾವಗೀತೆಯಲ್ಲಿ ನನ್ನ ಬರಹಗಳಿಗೆ ಭಾವನೆಗಳನ್ನ ತುಂಬಿ, ಪತ್ರದ ಮುಖೇನ ನನ್ನ ಅಂತರಂಗದ ಅಪ್ಪುಗೆಯನ್ನ ನನ್ನ ಪ್ರಿಯತಮನಿಗೆ ತಿಳಿಸುವ ಮುಖಾಂತರ ಇಬ್ಬರ ವಿರಹ ವೇದನೆಯನ್ನು ಪತ್ರದ ಮೂಲಕ ನಿವೇದನೆ ಮಾಡಿಕೊಳ್ಳುತ್ತಿದ್ದೆವು. ಮರಳಿ ಪತ್ರ ಬರುವಿಕೆಗೆ ಕಾಯುತ್ತಿದ್ದ ನನಗೆ ಬಂದದ್ದು ನನ್ನ ಯೋಧನ ಸಾವಿನ ಸುದ್ದಿ. ನನ್ನ ಬಾಳ ದಾರಿಗೆ ಮುಳ್ಳನ್ನು ಚೆಲ್ಲಿದ ಜವರಾಯನೇ ಮುನಿಸಿಕೊಂಡರೆ, ನನ್ನ ಅಂತರಾಳದ ನೋವನ್ನು ಯಾರ ಹತ್ತಿರ ಹಂಚಿಕೊಳ್ಳಲಿ….? ಎಂದು ತನ್ನ ಅಂತರಂಗದ ಅಳಲನ್ನು ಬಿಚ್ಚಿಟ್ಟು, ಕೊನೆಗೆ ಈ ದೇಶಕ್ಕೆ ಒಂದು ದಿವ್ಯ ಸಂದೇಶವನ್ನು ಕೊಟ್ಟ ಒಬ್ಬ ಭಾರತೀಯ ಯೋಧನ ಮಡದಿಯ ಮಾತುಗಳಿವು. ಆಕೆಯ ಕರಾಳ ಜೀವನದ ಕಥೆ ಕೊನೆಗೆ “ದೇಶ ಸೇವೆಯೇ ಈಶ ಸೇವೆ” ಎನ್ನುವ ಮಾತಿನೊಂದಿಗೆ ಮುಕ್ತಾಯವಾಗುವ ಈ ನನ್ನ ಅಂಕಣ ನಿಮ್ಮ ಮುಂದೆ….
ಮಾಂಗಲ್ಯ ಧಾರಣೆಯಾಗಿ ಎರಡು ವರ್ಷ ಕಳೆದು, ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ನಾನು, ಸಪ್ತಪದಿ ತುಳಿದರೆ ದೇಶ ಕಾಯುವ ಸೈನಿಕನೊಂದಿಗೇ ಬಾಳ ಪಯಣದ ಹೆಜ್ಜೆಯನ್ನು ಇಡಬೇಕು ಎನ್ನುವ ಹೆಬ್ಬಯಕೆಯನ್ನು ಹೊಂದಿದ್ದ ನನಗೆ ಅಂದುಕೊಂಡಂತೆಯೇ ಎಲ್ಲವೂ ನಡೆಯಿತು. ಮಾವು ಚಿಗುರುವ ಕಾಲ ಅಂದರೆ ವಸಂತ ಮಾಸ ಬೆಳಗಿನ ಜಾವ 05:00 ರ ಸಮಯ, ಕಿಟಕಿಯ ಬಾಗಿಲಿನಿಂದ ಮನಸ್ಸಿಗೆ ಮುದ ನೀಡುವಂತಹ ತಂಪಾದ ಗಾಳಿಯ ಆಗಮನ, ಕನಸುಗಳು ರೆಕ್ಕೆ ಬಿಚ್ಚಿಕೊಳ್ಳುವ ಸಮಯ, ಚಿಲಿಪಿಲಿ ಹಕ್ಕಿಗಳ ಕಲರವದೊಂದಿಗೆ ನೂರಾರು ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಹೊತ್ತು ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವಾಗ, ಮನೆಯ ಒಳಗಡೆಯಿಂದ ಟ್ರಿಣ್ ಟ್ರಿನ್ ಎನ್ನುವ ಫೋನ್ ಶಬ್ದ ಕೇಳಿಸಿತು. ಅರೆ ನಿದ್ರಾವಸ್ಥೆಯಲ್ಲಿಯೇ ಹೋಗಿ ಫೋನ್ ತೆಗೆದುಕೊಂಡ ನನಗೆ ನೆಮ್ಮದಿಯ ನಿದ್ರೆ ದೂರಾಯಿತು, ನೂರಾರು ಕನಸಿನಲ್ಲಿ ಒಂದೂ ಕನಸನ್ನು ಕಾಣದ ಕಗ್ಗತ್ತಲು ಆವರಿಸಿ, ಹಕ್ಕಿ-ಪಿಕ್ಕಿಗಳ ಕಲರವ ನೀರವ ಮೌನ. ಮನಸು ಮುದುಡಿ, ಕನಸು ಕದಡಿ, ತಂಪಾದ ಗಾಳಿ ಕಾದ ಸಮುದ್ರದ ನೀರಿನಂತೆ ನನ್ನ ಹೃದಯದ ಮಿಡಿತ ಕಂಪಿಸಿತು. ಕಣ್ಣಾಲಿಗಳಲ್ಲಿ ಕಂಬನಿ ಜಿನುಗಿತು. ಫೋನ್ ಕರೆ ಬಂದದ್ದು ನನ್ನ ಕೈ ಹಿಡಿದು ನಡೆಸುವ ಬಾಳ ಪಯಣಿಗನ ಸಾವಿನ ಸುದ್ದಿ…..?
ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಭಾರತ-ಪಾಕಿಸ್ತಾನಿಯರ ನಡುವೆ ಕಾರ್ಗಿಲ್ ಯುದ್ದದ ಗುಂಡಿನ ಕಾಳಗದಲ್ಲಿ ಹೋರಾಡಿ ತನ್ನ ಜೀವನ್ಮರಣವನ್ನೂ ಲೆಕ್ಕಿಸದೆ “ದೇಶ ಸೇವೆಯೇ ಈಶ ಸೇವೆ” ಎಂದು ಎದೆಯೊಡ್ಡಿ ಪಾಕಿಸ್ತಾನಿಗಳ ಗುಂಡೇಟಿಗೆ ಬಲಿಯಾಗಿ ನಮಗೆಲ್ಲಾ ನೆಮ್ಮದಿಯ-ನಿದ್ರೆ ಕೊಟ್ಟು, ಅವರು ಚಿರ-ನಿದ್ರೆಗೆ ಜಾರಿದ ನನ್ನ ಪ್ರಣಯರಾಜನ ಪ್ರಾಣಪಕ್ಷಿ ಹಾರಿಹೋದ ಪರಿಯನ್ನು ನಾ ಏನೆಂದು ಹೇಳಲಿ……?
ಸಾಗರೋಪಾದಿಯಲ್ಲಿ ಹರಿದುಬರುತ್ತಿರುವ ಜನ, ರಕ್ತದ ಕಲೆಗಳಲ್ಲಿ ಮಡುಗಟ್ಟಿದ್ದ ತನ್ನ ಗಂಡನ ಶವದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಡದಿಯ ಕಣ್ಣೀರು, ಅಲ್ಲಿ ನೆರಿದಿದ್ದ ಜನರ ಮನಸ್ಸನ್ನು ತಲ್ಲಣಗೊಳಿಸಿತು. ಹದಿ ಹರೆಯದ ವಯಸ್ಸಿನಲ್ಲಿದ್ದ ನನ್ನ ಗಂಡನಿಗೆ ದೇಶಾಭಿಮಾನ, ದೇಶ-ಪ್ರೆಮ, ಎಲ್ಲಿಲ್ಲದ ಆಸಕ್ತಿ. ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಹೀಗೆ ಯಾವುದಾದರೊಂದು ಸೇನೆಗೆ ಸೇರಿಕೊಂಡು ಈ ಭಾರತಾಂಬೆಯ ಮಣ್ಣಿನ ಋಣವನ್ನು ತೀರಿಸಲೇಬೇಕು ಎಂದು ಪಣ ತೊಟ್ಟು ಕೊನೆಗೆ ಭಾರತೀಯ ಸೈನಿಕನ ಹುದ್ದೆಗೆ ಸೇರಿಕೊಂಡು ವೀರಾವೇಶದಿಂದ ಹೋರಾಡಿ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿ ಗುಂಡಿನ ಮಳೆಗರೆಸಿ ಇನ್ನೇನು ವಿಜಯದ ಪತಾಕೆಯನ್ನು ನೆಡುವಷ್ಟರಲ್ಲಿ ಎದುರಿನಿಂದ ಬಂದ ಗುಂಡು ನೇರವಾಗಿ ಎದೆಯ ಭಾಗಕ್ಕೆ ಒಳ ಹೊಕ್ಕಿ ಕೊನೆಗೆ ಭಾರತಾಂಬೆಯ ಮಡಿಲಲ್ಲಿ ಹತನಾದ ನನ್ನ ಸೈನಿಕ ಈಗಿಲ್ಲ.
ಮುಂದಿನ ಏಳೇಳು ಜನ್ಮಕ್ಕೆ ಸಾಕಾಗುವಷ್ಟು ನೋವು, ಹತಾಶೆ ಮನೆಯ ಸುತ್ತಲೂ ಬಣ ಬಣ ಸುಡು ಬೇಸಿಗೆಯ ಬಿಸಿಲು ಇವೆಲ್ಲವೂ ನನ್ನ ಜೀವನದ ಸಮಸ್ಯೆಗಳಿಗೆ ಸವಾಲುಗಳಾಗಿ ಕಂಡರೂ, ನನ್ನ ಗರ್ಭದಲ್ಲಿದ್ದ ಮತ್ತೊಬ್ಬ ಸೈನಿಕನ ಆರ್ಭಟ ಬಹುಶಃ ಗರ್ಭದಲ್ಲಿಯೇ ಸೈನಿಕನ ತರಬೇತಿ ಪಡೆಯುವ ತಯಾರಿ, ನನಗೆ ಖುಷಿ ತಂದಿತಾದರೂ ಗಂಡನನ್ನು ಕಳೆದುಕೊಂಡ ನೋವು ಮತ್ತೆ ಮತ್ತೆ ಮರುಕಳಿಸಿ ದುಃಖದ ಛಾಯೆ ಆವರಿಸಿತು.
ದೀರ್ಘ ಸುಮಂಗಲಿಯಾಗಿ ಬಾಳಬೇಕೆಂದುಕೊಂಡಿದ್ದ ನನಗೆ ಜವರಾಯ ನನ್ನನ್ನು ಅಸಿಂಧುವಾಗಿಸಿ ಕಗ್ಗತ್ತಲ ಕೋಣೆಯಲ್ಲಿ ಕುಳ್ಳಿರಿಸಿದ. ಎದೆಗುಂದದೆ ಧೈರ್ಯವಾಗಿ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನನ್ನ ಕಂದನ ಮೂಲಕ ಕೊಡಬೇಕು ಎಂದು ಯೋಚಿಸುತ್ತಾ ಕುಳಿತಿರುವಾಗ ನನ್ನ ಗರ್ಭವನ್ನು ಛೇದಿಸಿ ಈ ಭೂಮಿ ತಾಯಿಯ ಮಡಿಲಿಗೆ ಪಾದಾರ್ಪಣೆ ಮಾಡಿತು ನನ್ನ ಮುದ್ದು ಕಂದ ಗಂಡು ಮಗು. ದಿನಗಳೆದಂತೆ ಮಗುವಿನ ಚಲನವಲನಗಳನ್ನು ಗಮನಿಸುತ್ತಾ ಹೋದಂತೆ ನನ್ನ ಗಂಡನ ಗುಣ ನಡತೆ ಆಚಾರ-ವಿಚಾರ, ದೇಶ-ಪ್ರೇಮ ದೇಶಾಭಿಮಾನ ದೇಶ-ಭಕ್ತಿ ಇವೆಲ್ಲವುಗಳನ್ನೂ ನನ್ನ ಕಂದನಲ್ಲಿ ಕಂಡೆ. ತಂದೆಯ ನೆರಳೂ ಕೂಡ ಬೀಳದ ಆ ಮುದ್ದು ಕಂದ ನೋಡ ನೋಡುತ್ತಾ ಬೆಳೆದು ದೊಡ್ಡವನಾಗುತ್ತಿದ್ದಂತೆ ಸಾಮಾನ್ಯವಾಗಿ ಎಲ್ಲರೂ ಕೇಳುವಂತೆ ಆ ಮಗುವಿಗೆ ಒಂದು ಪ್ರಶ್ನೆ ಹಾಕಿದರು, ಮಗು ನೀನು ದೊಡ್ಡವನಾದ ಮೇಲೆ ಏನಾಗಬೇಕೆಂದುಕೊಂಡಿದ್ದೀಯಾ….?
ಬಾಯಿಯ ಮೇಲೆ ಬೆರಳನ್ನು ಇಟ್ಟುಕೊಂಡು ಸುತ್ತಲೂ ನೋಡಿದ ಮಗು ಎದುರಿಗಿದ್ದ ಗೋಡೆಯ ಮೇಲೆ ನೇತುಹಾಕಿದ್ದ ತನ್ನ ತಂದೆಯ ಫೋಟೋ ಕಡೆ ಕೈ ತೋರಿಸಿ ” ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ, ಹಾಗೂ ಈ ದೇಶದ ಜನತೆಗೆ ನೆಮ್ಮದಿಯ ನಿದ್ರೆಕೊಟ್ಟು ಶಾಂತಿಯಿಂದ ಬದುಕಲು ನನ್ನ ಪ್ರಾಣವನ್ನೇ ಪಣವಾಗಿಟ್ಟು ದೇಶ ಕಾಯುವ ಒಬ್ಬ ಧೀರ ಯೋಧನಾಗಬೇಕು” ಅಂದುಕೊಂಡಿದ್ದೇನೆ ಎಂದು ಉತ್ತರ ಕೊಟ್ಟಾಗ ಅಲ್ಲಿ ನೆರೆದಿದ್ದ ಜನರ ಕಣ್ಣಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯಿತು.
ಎದುರಿಗಿದ್ದ ಮಗನಿಗೆ ನಿದಾನವಾಗಿ ತಲೆಯನ್ನು ನೇವರಿಸಿದ ತಾಯಿ, ಎದ್ದು ನಿಂತು ಸೆಲೂಟ್ ಹೊಡೆದು ” ಮುಂದಿನ ಜನ್ಮ ಅಂತ ಏನಾದರೂ ಇದ್ದರೆ ನನ್ನ ಗರ್ಭದಲ್ಲಿ ತುಂಡರಿಸಿದ ಎಲ್ಲಾ ಕರುಳಿನ ಕುಡಿಗಳನ್ನೂ ಭಾರತೀಯ ಸೇನೆಗೆ ಸೇರಿಸುತ್ತೇನೆ, ನಮ್ಮ ಭಾರತ ಸುಭಿಕ್ಷವಾಗಿರಬೇಕೆಂದರೆ, ನಮ್ಮ ಭಾರತ ನೆಮ್ಮದಿಯ ಜೀವನ ನಡೆಸಬೇಕೆಂದರೆ ಪ್ರತಿಯೊಬ್ಬರ ಮನೆ-ಮನದಲ್ಲೂ ಒಬ್ಬ ಯೋಧ ಹುಟ್ಟಿ ಬರಬೇಕು”. ನಮ್ಮ ದೇಶದ ಸೇವೆಯನ್ನು ಮಾಡಿದರೆ ಈಶ್ವರನ ಸೇವೆಯನ್ನು ಮಾಡಿದಂತೆಯೇ ಸರಿ. ಜನ ಸೇವೆಯನ್ನು ಮಾಡಿದರೆ ಜನಾರ್ಧನನ ಸೇವೆಯನ್ನು ಮಾಡಿದಂತೆಯೇ ಸರಿ….”ದೇಶ ಸೇವೆಯೇ ಈಶ ಸೇವೆ – ಜನ ಸೇವೆಯೇ ಜನಾರ್ಧನನ ಸೇವೆ”. ಎಂಬ ಮಾತಿನ ಮೂಲಕ ತನ್ನ ಗಂಡನನ್ನು ನೆನೆದು ಭಾವುಕಳಾದಳು.
ಈ ಅಂಕಣವನ್ನು ಹೊತ್ತು ತಂದಿರುವ ನಾನು ಸಮಾಜದ ಪ್ರತಿಯೊಬ್ಬ ನಾಗರೀಕನಿಗೂ ಮಾದರಿಯಾಗಲೆಂದು ಅರ್ಪಿಸುತ್ತಾ….