ಬೆಂಗಳೂರು
ಬಂಧಿಸಿ ಕರೆತರುವಾಗ ಇಳಿದು ಪರಾರಿಯಾಗಿ ಬೆನ್ನಟ್ಟಿ ಬಂದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ರೊಬ್ಬರ ಕತ್ತು ಹಿಸುಕಿ ಕೊಲೆಯತ್ನ ನಡೆಸಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಗಂಧದ ಮರ ಕಳ್ಳ ಮುಜಾಯಿದ್ ಉಲ್ಲಾನಿಗೆ ಕಬ್ಬನ್‍ಪಾರ್ಕ್ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಸಾರಾಯಿಪಾಳ್ಯದ ಮುಜಾಯಿದ್ ಉಲ್ಲಾ (30)ಪೊಲೀಸರ ಗುಂಡೇಟು ತಗುಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆರೆಯ ತಮಿಳುನಾಡಿನಿಂದ ಕೂಲಿಯವರನ್ನು ಕರೆತಂದು ವ್ಯವಸ್ಥಿತವಾಗಿ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಗಂಧದ ಮರಗಳ ಕಳವು ಮಾಡಿಸಿರುವ ಕುಖ್ಯಾತಿಗೆ ಮುಜಾಯಿದ್ ಉಲ್ಲಾ ಪಾತ್ರನಾಗಿದ್ದು ಆತನ ಅಣ್ಣ ಇಮ್ದಾದ್ ಉಲ್ಲಾ ಹಾಗೂ ತಂದೆ ಮೊಹಮ್ಮದ್ ಉಲ್ಲಾ ಕೂಡ ಗಂಧದ ಮರಕಳವು ಮತ್ತು ಮಾರಾಟದಲ್ಲಿ ತೊಡಗಿದ್ದರು.
ನಗರ ಪೊಲೀಸ್ ಆಯುಕ್ತರ ಕಚೇರಿ ಸಮೀಪದ ಎಂಬಿಎಸ್‍ಸಿ ಅಪಾರ್ಟ್‍ಮೆಂಟ್ ಆವರಣ, ಪ್ರಸಾರ ಭಾರತಿ, ಮುಖ್ಯ ನ್ಯಾಯಮೂರ್ತಿಗಳ ನಿವಾಸದ ಆವರಣ, 7 ಮಿನಿಸ್ಟರ್ ಕ್ವಾರ್ಟರ್ಸ್ ಆವರಣ ಸೇರಿ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಇತ್ತೀಚೆಗೆ ಗಂಧದಮರ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಮುಜಾಹಿದ್‍ಉಲ್ಲಾ ಚಿಕ್ಕಬಳ್ಳಾಪುರದ ಬಳಿ ಅಡಗಿರುವ ಮಾಹಿತಿ ಆಧರಿಸಿ ಕಬ್ಬನ್ ಪಾರ್ಕ್ ಇನ್‍ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ಮುಜಾಯಿದ್ ಉಲ್ಲಾ ಮತ್ತವನ ಸಹೋದರ ಇಮ್ದಾದ್‍ನನ್ನು ಬಂಧಿಸಿ ಕಬ್ಬನ್‍ಪಾರ್ಕ್ ಠಾಣೆಗೆ ವಿಚಾರಣೆ ನಡೆಸಲು ಕರೆತರುತ್ತಿದ್ದಾಗ ಕಬ್ಬನ್ ಪಾರ್ಕ್‍ನ ಸಮಾನಾಂತರ ರಸ್ತೆಯಲ್ಲಿ ಹೋಗುತ್ತಿರುವಾಗ ಖಾಸಗಿ ವಾಹನದಲ್ಲಿದ್ದ ಮುಜಾಯಿದ್ ಉಲ್ಲಾ ಬೆಂಗಾವಲಿಗಿದ್ದ ಪೇದೆ ಕೃಷ್ಣಮೂರ್ತಿಯನ್ನು ಚಲಿಸುವ ವಾಹನದಿಂದ ಕೆಳಗೆ ತಳ್ಳಿ ಕಬ್ಬನ್ ಪಾರ್ಕ್ ಒಳಗೆ ಓಡಿ ಹೋಗಿದ್ದಾನೆ.
ಕತ್ತು ಹಿಡಿದು ಸಿಕ್ಕಿಬಿದ್ದ:
ಓಡುತ್ತಿದ್ದ ಮುಜಾಹಿದ್ ಉಲ್ಲಾನನ್ನು ನಿಲ್ಲು ಎಂದು ಸೂಚಿಸಿದರೂ ಕೈಕೋಳ ಸಮೇತ ತಪ್ಪಿಸಿಕೊಂಡಿದ್ದು ಹೆಚ್ಚಿನ ಸಿಬ್ಬಂದಿಯನ್ನು ಕರೆಯಿಸಿ ಶೋಧ ನಡೆಸಿದಾಗ ಆರೋಪಿ ಬಿದರಿನ ಮೆಳೆಯ ಮರೆಯಲ್ಲಿ ಅಡಗಿದ್ದ. ಇದನ್ನು ಕಂಡ ಪಿಎಸ್‍ಐ ರಹೀಂ ಹಿಡಿಯಲು ಹೋದಾಗ ಕೆಳಗೆ ಬೀಳಿಸಿ ಕತ್ತು ಹಿಡಿದು ಕೊಲೆಗೆ ಯತ್ನಿಸಿದ್ದಾನೆ.
ಈ ವೇಳೆ ರಹೀಂ ಅವರನ್ನು ಬಿಡುವಂತೆ ಇನ್‍ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಸೂಚಿಸಿದರೂ ಕೊಲೆಯತ್ನ ಮುಂದುವರೆಸಿದ್ದು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಯತ್ನ ಬಿಡದ ಮುಜಾಯಿದ್ ಉಲ್ಲಾ ಮೇಲೆ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ. ಆ ಗುಂಡು ಬಲಗಾಲಿಗೆ ತಗುಲಿ ಕುಸಿದುಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದೊಂದು ವರ್ಷದಿಂದ ವ್ಯವಸ್ಥಿತವಾಗಿ ಗಂಧದ ಮರಕಳವು ಮಾಡುತ್ತಿದ್ದವನಿಗೆ ಸಹೋದರ ಇಮ್ದಾದ್ ಉಲ್ಲಾ ಹಾಗೂ ತಂದೆ ಮೊಹಮ್ಮದ್ ಉಲ್ಲಾ ಸಾಥ್ ನೀಡಿದ್ದರು. ತಮಿಳುನಾಡಿನಿಂದ ಕೂಲಿಯವರನ್ನು ಕರೆತಂದು ಅವರಿಗೆ ಗಂಧದ ಮರಕತ್ತರಿಸುವ ತರಬೇತಿ ನೀಡಿ ಶಬ್ದ ಬರದ ಅತ್ಯಾಧುನಿಕ ತಂತ್ರಜ್ಞಾನ ಮರ ಕತ್ತರಿಸುವ ಯಂತ್ರಗಳನ್ನು ವ್ಯಾನನನ್ನು ನೀಡಿ ಹೆಚ್ಚಿನ ಹಣ ನೀಡಲಾಗುತ್ತಿತ್ತು.
ವ್ಯವಸ್ಥಿತ ಜಾಲ:
ಕತ್ತರಿಸಿ ಮರದ ತುಂಡುಗಳನ್ನು ಮನೆಯಲ್ಲಿ ಯಾರ ಗಮನಕ್ಕೂ ಬಾರದಂತೆ ಒಣಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲವನ್ನು ಆರೋಪಿ ರೂಪಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಗಂಧದ ಮರ ಕಡಿದು ಸಾಗಿಸುತ್ತಿದ್ದ ತಮಿಳುನಾಡಿನ ಸೇಲಂನ ಲಕ್ಷ್ಮಣ ಅಲಿಯಾಸ್ ಕುಳ್ಳಿಯಾ(32), ರಂಗನಾಥನ್(35), ರಾಮಸ್ವಾಮಿ(40) ಸೇರಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮುಜಾಯಿದ್ ಉಲ್ಲಾನ ಮಾಹಿತಿ ನೀಡಿದ್ದು ಅದನ್ನು ಆಧರಿಸಿ ಬಂಧನದ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








