ದಾವಣಗೆರೆ :
ಡಿ.11 ರಂದು ಬೆಳಿಗ್ಗೆ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಮಂಜುನಾಥೇಶ್ವರ ವಿಶೇಷ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಇವರ ವತಿಯಿಂದ ಮಾನಸಿಕ ಅಸ್ವಸ್ಥರ ಪೋಷಕರಿಗೆ ಮಾನಸಿಕ ಅಸ್ವಸ್ಥ ಮಕ್ಕಳನ್ನು ನಿರ್ವಹಿಸುವ ತಂತ್ರಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಸಂತೋಷ್ ಕುಮಾರ್ ಮಾತನಾಡಿ, ಬುದ್ಧಿಮಾಂಧ್ಯ ಮತ್ತು ಮಾನಸಿಕ ಖಾಯಿಲೆಗಳ ವ್ಯತ್ಯಾಸಗಳನ್ನು ತಿಳಿಸಿ, ಬುದ್ಧಿ ಮಾಂಧ್ಯತೆ ಎನ್ನುವುದು ನ್ಯೂನ್ಯತೆ ಆಗಿದೆ. ಇದನ್ನು ಅವರವರ ಬುದ್ಧಿಶಕ್ತಿಯ ಅನುಗುಣವಾಗಿ ಆಪ್ತಸಮಾಲೋಚಕರು ಮತ್ತು ಮನೋವೈದ್ಯರ ಸಲಹೆ ಮೇರೆಗೆ ತರಬೇತಿಯನ್ನು ನೀಡಿ ಅವರು ಸ್ವ-ಕಾರ್ಯಗಳನ್ನು ಮಾಡಿಕೊಳ್ಳುವ ಸಾಮಥ್ರ್ಯವನ್ನು ವೃದ್ದಿಸಬಹುದಾಗಿದೆ ಎಂದ ಅವರು ಅಲ್ಲಿ ನೆರೆದಿದ್ದಂತಹ ಪೋಷಕರಿಗೆ ಮಾನಸಿಕ ಅಸ್ವಸ್ಥರ ಲಕ್ಷಣಗಳನ್ನು ಗುರುತಿಸುವಿಕೆ, ಆರೈಕೆ, ಕೌಶಲ್ಯ ತರಬೇತಿ ಮತ್ತು ಬುದ್ಧಿ ಮಾಂದ್ಯತೆ, ಮಾನಸಿಕ ಅಸ್ವಸ್ಥರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೋವೈದ್ಯರಾದ ಡಾ. ಗಂಗಂ ಸಿದ್ದಾರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮುದಾಯದಲ್ಲಿ ಜನಸಾಮಾನ್ಯರು ಮೂಢನಂಬಿಕೆಗೆ ಒಳಗಾಗುತ್ತಿರುವುದು ವಿಷಾಧನಿಯ. ಮಾನಸಿಕ ಖಾಯಿಲೆಯು ಯಾವುದೇ ಮಾಟ, ಮಂತ್ರದಿಂದ ಬರುವುದಿಲ್ಲ. ಇದು ಮೆದುಳಿನಲ್ಲಿನ ರಾಸಾಯನಿಕ ಬದಲಾವಣೆಯಿಂದ ಅಥವಾ ಕುಟುಂಬ ಮತ್ತು ಸಾಮಾಜಿಕ ಒತ್ತಡದಿಂದ ಬರುತ್ತದೆ. ಇದನ್ನು ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಬಹುದು. ನಮ್ಮ ಮಾನಸಿಕ ಕಾರ್ಯಕ್ರಮದಿಂದ ಉಚಿತ ಔಷಧ, ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ತರಬೇತಿಗಳು ಲಭ್ಯವಿದೆ ಎಂದು ತಿಳಿಸಿದೆ.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಸರೋಜಬಾಯಿ ಜೆ. ಎಂ., ಮಾನಸಿಕ ಆರೋಗ್ಯ ಕಾರ್ಯಕ್ರಮದ ಶುಶ್ರೂಷಕರಾದ ಗಿರೀಶ್ ನಾಯ್ಕ ಎಸ್.ವೈ., ಅಂಜಿನಮ್ಮ ಬಿ. ಮತ್ತು ಮಂಜುನಾಥೇಶ್ವರ ವಿಶೇಷ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ