ಜಿ.ಪಂ. ಸಿಇಒ, ಡಿಎಸ್ ವಿರುದ್ಧ ಎಸಿಬಿಗೆ ದೂರು

ದಾವಣಗೆರೆ:

       ಜಿಲ್ಲಾ ಪಂಚಾಯತ್ ವ್ಯಾಪ್ತಿಯ 233 ಗ್ರಾಮ ಪಂಚಾಯತ್‍ಗಳಲ್ಲಿ ಸುಮಾರು 254.14 ಕೋಟಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ, ಜಿ.ಪಂ. ಸಿಇಒ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ ಅವರುಗಳ ವಿರುದ್ಧ ಸೂಕ್ತ ತನಿಖೆಗೆ ಎಸಿಬಿಗೆ ಸ್ವತಃ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಗುರುವಾರ ದೂರು ದಾಖಲಿಸಿದ್ದಾರೆ.

        ಗುರುವಾರ ಬೆಳಿಗ್ಗೆ 11.30ಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ತೆರಳಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಅವರು ಎಸಿಬಿಯ ಡಿವೈಎಸ್‍ಪಿ ಹೆಚ್.ಎಸ್.ಪರಮೇಶ್ವರ್ ಅವರನ್ನು ಭೇಟಿ ಮಾಡಿ, ದಾಖಲೆ ಸಮೇತ ದೂರು ಸಲ್ಲಿಸಿದರು.

        ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ, ನಾನು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ 2 ವರ್ಷ ಹಾಗೂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ತಿಂಗಳ ಅವಧಿಯಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸ್ವತಃ ಗ್ರಾ.ಪಂ. ಸದಸ್ಯರುಗಳು, ಸಾರ್ವಜನಿಕರು ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ಪದಾಧಿಕಾರಿಗಳು ತಮ್ಮ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಜಿ.ಪಂ. ಸಿಇಒ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ ಅವರುಗಳ ವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದರು.

          ಬರೀ ಗ್ರಾ.ಪಂ.ಗಳಲ್ಲಿ ಮಾತ್ರವಲ್ಲ, ಇಡೀ ಜಿಲ್ಲಾ ಪಂಚಾಯತ್‍ನ ಎಲ್ಲಾ ಇಲಾಖೆಗಳಲ್ಲೂ ಸಹ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೆ, ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಇವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತ್ ಅಶ್ವತಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ತಮಗೆ ಬೇಕಾದ ಪಿಡಿಒ, ಇಂಜೀನಿಯರ್, ಕಾರ್ಯದರ್ಶಿಗಳನ್ನು ಆಯಕಟ್ಟಿನ ಜಾಗದಲ್ಲಿ ನಿಯೋಜಿಸಿಕೊಂಡು, ಆ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ನೀಡಿ, ಕೆಳ ಮಟ್ಟದ ಅಧಿಕಾರಿಗಳ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.

          ಅಲ್ಲದೆ, ಅವ್ಯವಹಾರದ ಆರೋಪ ಕೇಳಿ ಬಂದ ತಕ್ಷಣ ಜಿಲ್ಲಾ ಪಂಚಾಯತ್‍ನಲ್ಲಿರುವ ಅಧಿಕಾರಿಗಳನ್ನೇ ತನಿಖಾಧಿಕಾರಿಗಳನ್ನಾಗಿ ನೇಮಿಸಿಕೊಂಡು, ಆರೋಪಕ್ಕೆ ಗುರಿಯಾಗಿರುವ ಪಿಡಿಒ, ಕಾರ್ಯದರ್ಶಿ, ಇಂಜಿನಿಯರ್‍ಗಳನ್ನು ಅಮಾನತುಗೊಳಿಸಿ, ನಂತರ ಅವರಿಂದ ಲಂಚ ಪಡೆದು ಮತ್ತೆ ಅವರನ್ನು ರೀಕಾಲ್ ಮಾಡಿಕೊಂಡು ಅವ್ಯವಹಾರವನ್ನು ಮುಚ್ಚಿ ಹಾಕುತ್ತಿದ್ದಾರೆಂದು ಆಪಾದಿಸಿದರು.

           ಗ್ರಾಮ ಪಂಚಾಯತ್‍ಗಳಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳಲ್ಲಿ ಆಯಾ ಗ್ರಾಮ ಪಂಚಾಯತ್‍ಗಳ ಇಂಜಿನಿಯರ್‍ಗಳು, ಪಿಡಿಒ, ಕಾರ್ಯದರ್ಶಿಗಳ ಜತೆಗೆ ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪ ಅವರುಗಳು ಪಾಲುದಾರರಾಗಿದ್ದಾರೆ.

            ಯಾವ್ಯಾವ ಗ್ರಾಮ ಪಂಚಾಯತ್‍ಗಳಲ್ಲಿ ಅತೀ ಹೆಚ್ಚು ಅವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಸಾಕ್ಷಿ ಸಮೇತ ಇಂದು ಜಿಲ್ಲಾ ಪಂಚಾಯತ್‍ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಲೆಕ್ಕ ಶೀರ್ಷಿಕೆಯನ್ನು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.

            ಸರ್ಕಾರದ ಅನುದಾನ ಸಾರ್ವಜನಿಕರ ಸ್ವತ್ತು. ಒಂದೇಒಂದು ರೂಪಾಯಿ ಸಹ ಅವ್ಯವಹಾರ ನಡೆಯಲು ಬಿಡುವುದಿಲ್ಲ. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿದರೆ, ಅನುದಾನದ ಮಾಹಿತಿಯನ್ನು ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತರದೇ, ತಮ್ಮ ಕಪಿಮುಷ್ಟಿಯಲ್ಲೇ ಎಲ್ಲವನ್ನೂ ಇಟ್ಟುಕೊಂಡು, ತಮಗೆ ಬೇಕಾದಂತೆ ಕಾಮಗಾರಿಗಳಿಗೆ ಅನುಮೋದನೆ ನೀಡಿಕೊಂಡು ಸರ್ಕಾರದ ಅನುದಾನವನ್ನು ದುರೂಪಯೋಗ ಪಡೆಸಿಕೊಳ್ಳುತ್ತಿದ್ದಾರೆಂದು ದೂರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link