ಬೆಳಗಾವಿ
ಬಿಎಂಆರ್ಸಿಎಲ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಉದ್ಯೋಗಿಗಳಿಗೆ ಬಡ್ತಿ ನಿಯಮಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ.
ಮೇಲ್ಮನೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಆರ್.ಚೌಡರೆಡ್ಡಿ ತೂಪಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, 1204 ಖಾಯಂ, 214 ಗುತ್ತಿಗೆ, 3076 ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಸಿಬ್ಬಂದಿಗೆ 5.29 ಕೋಟಿ ರೂ., ಹೊರಗುತ್ತಿಗೆದಾರರಿಗೆ 8.87 ಕೋಟಿ ರೂ. ಸಂಬಳ ನೀಡಲಾಗುತ್ತಿದೆ. ಜಾರಿಯಲ್ಲಿರುವ ಸೇವಾ ನಿಯಮಗಳಡಿಯಲ್ಲಿ ಆಯ್ಕೆಯಾದ ಉದ್ಯೋಗಿಗಳು ವೃಂದದಲ್ಲಿ ಕನಿಷ್ಠ ಇಂತಿಷ್ಟು ವರ್ಷಗಳ ಸೇವೆ ಪೂರೈಸಿರುವ ಜತೆಗೆ ಸೇವಾ ಜೇಷ್ಠತೆಯನ್ನು ಹೊಂದಬೇಕು. ತದನಂತರ ಸೇವಾ ಜೇಷ್ಠತೆ ಪಡೆದ ಉದ್ಯೋಗಿಗಳು ಆಂತರಿಕ ಲಿಖಿತ ಪರೀಕ್ಷೆಯಲ್ಲಿ ಪಡೆದ ಮೆರಿಟ್ ಆಧಾರದ ಮೇಲೆ ಮುಂಬಡ್ತಿ ನೀಡಲಾಗುತ್ತದೆ ಎಂದರು.
ಬಿಎಂಆರ್ಸಿಲ್ ಉದ್ಯೋಗಿಗಳ ಸೇವಾ ನಿಯಮಗಳನ್ನು ಬೆಂಗಳೂರು ಮೆಟ್ರೋ ರೈಲು ಉದ್ಯೋಗಿಗಳ ವೃಂದ ಮತ್ತು ನೇಮಕಾತಿ ನಿಯಮ-2014” ರನ್ವಯ ಮುಂಬಡ್ತಿಗೆ ಆಂತರಿಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ಶಿಫಾರಸು ಮೇರೆಗೆ ಮುಂಬಡ್ತಿ, ಸಿಬ್ಬಂದಿ ಆಯ್ಕೆ ನಡೆದಿದ್ದರೆ ಅದನ್ನು ಪರಿಶೀಲಿಸಲಾಗುವುದು ಎಂದರು.
ಇದೇ ವೇಳೆ ರಾತ್ರಿ ಹೊತ್ತು ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸುವಂತೆ ಜೆಡಿಎಸ್ ಸದಸ್ಯ ಶರವಣ ಕೇಳಿದ ಪ್ರಶ್ನೆಗೆ ಸಚಿವರು ಸ್ಪಷ್ಟ ಭರವಸೆ ನೀಡಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ