ಜಾನಪದ ಜಗಲಿ ಕಾರ್ಯಕ್ರಮಕ್ಕೆ ಚಾಲನೆ

ಚಿತ್ರದುರ್ಗ:

          ಜನಪದ ಕಲೆ ಸಾಹಿತ್ಯ, ಸಂಸ್ಕøತಿ ಹುಟ್ಟಿದ್ದೆ ಹಸಿವಿನಿಂದ. ಬಡತನವಿದ್ದಾಗ ಮಾತ್ರ ಕಲೆಗೆ ಬೆಲೆ ಸಿಗುತ್ತದೆ. ಹಸಿವು, ಆಯಾಸ, ಸುಸ್ತನ್ನು ಮರೆಸುವ ಶಕ್ತಿ ಜನಪದ ಕಲೆಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.

         ಚಂದ್ರೋದಯ ಸಾಂಸ್ಕತಿಕ ಕಲಾ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ತ.ರಾ.ಸು.ರಂಗಮಂದಿರದಲ್ಲಿ ನಡೆದ ಜಾನಪದ ಜಗಲಿ ಕಾರ್ಯಕ್ರಮದ ಮೊದಲನೇ ವಿಚಾರಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಲೆಮಾರಿನಿಂದ ತಲೆಮಾರಿಗೆ ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಸಾಗುವುದೆ ಜಾನಪದ. ಜನಪದ ಕೇವಲ ಮನರಂಜನೆಯಷ್ಟೆ ಅಲ್ಲ. ಅದ್ಬುತವಾದ ಸಂದೇಶವನ್ನು ನೀಡುತ್ತದೆ. ಜನ ಸೇರುವುದೆ ಜನಪದ. ಒಬ್ಬರನ್ನೊಬ್ಬರು ಅಗಲುವುದೇ ಆಧುನಿಕತೆ. ಕೂಡುವಿಕೆ, ಸೇರುವಿಕೆ, ಒಂದಾಗುವಿಕೆ, ಐಕ್ಯತೆ ಜನಪದದ ಮೂಲ ಆಶಯ. ದ್ವೇಷ, ಸಿಟ್ಟು ಮಾಡಿಕೊಳ್ಳುವವರ ಬಳಿ ಕಲೆ ಇರುವುದಿಲ್ಲ. ಹಸಿವನ್ನು ಮೀರಿದ ನಗು ಜನಪದದಲ್ಲಿದೆ ಎಂದು ಜಾನಪದದ ಮಹತ್ವವನ್ನು ತಿಳಿಸಿದರು.

          ಜನಪದ ಕಲೆ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಆರೋಗ್ಯವಾಗಿರುತ್ತಾರೆ. ಎಲ್ಲಾ ಕಾಲಕ್ಕೂ ಜಾನಪದ ಕಲೆಗೆ ಬೆಲೆ ಇದೆ. ಸಾವಿಲ್ಲ. ತಂತ್ರಜ್ಞಾನದಲ್ಲಿ ಸ್ವರೂಪ ಬದಲಾವಣೆ ಅನಿವಾರ್ಯ. ಜನಪದಕ್ಕೆ ವಿಜ್ಞಾನ, ತಂತ್ರಜ್ಞಾನದ ಸ್ಪರ್ಶ ಕೊಟ್ಟರೆ ಜನಪದ ಗಟ್ಟಿಯಾಗುತ್ತದೆ ಎಂದರು.

            ಜನಪದ ಮತ್ತು ಆಧುನಿಕ ತಂತ್ರಜ್ಞಾನದ ಪ್ರಭಾವ ಕುರಿತು ಉಪನ್ಯಾಸ ನೀಡಿದ ವೈಜ್ಞಾನಿಕ ಚಿಂತಕ ಡಾ.ಕೆ.ಕೆ.ಕಮಾನಿ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೀಸುವಾಗ, ಕುಟ್ಟುವಾಗ, ಹಕ್ಕಿ ಕಾಯುವಾಗ, ಕುರಿ ಕಾಯುವಾಗ ಜಾನಪದ ಹಾಡುಗಳನ್ನು ಹಾಡಲಾಗುತ್ತಿತ್ತು. ಈಗ ಎಲ್ಲವೂ ಕಣ್ಮರೆಯಾಗುತ್ತಿದೆ. ಭಾವನಾತ್ಮಕವಾಗಿ ಒಂದಾದರೆ ಜಾನಪದವನ್ನು ಪ್ರೀತಿಸಬಹುದು ಎಂದು ಹೇಳಿದರು.
ಜಾನಪದ ವಿಮರ್ಶಕ ಡಿ.ಬಸವಲಿಂಗಪ್ಪ ಜನಪದ ಕಲೆಗಳು ಮತ್ತು ಹಾಡುಗಳು ಕುರಿತು ಮಾತನಾಡಿ ಹಳ್ಳಿಗಾಡಿನ ಕಲೆ ಜನಪದ ಹುಟ್ಟಿದ್ದೆ ಅನಕ್ಷರಸ್ಥರಿಂದ.

            ಓದಿ ಬರೆವರಿಂದಲ್ಲ. ಹಾಡು ಭಾಷೆಯ ಜಾನಪದದಲ್ಲಿ ಹಾಡು, ಕಥೆ, ಗೀಗಿಪದ, ಸೋಬಾನೆ, ಲಾವಣಿ, ಕೋಲಾಟ ಒಗಟುಗಳು ವಿಪರೀತವಾಗಿ ಸಿಗುತ್ತವೆ. ಎಲ್ಲದರಲ್ಲೂ ಜೀವನಕ್ಕೆ ಒಂದೊಂದು ಸಂದೇಶಗಳು ದೊರಕುತ್ತದೆ ಎಂದು ತಿಳಿಸಿದರು.

             ಪ್ರಾಧ್ಯಾಪಕರು ಹಾಗೂ ವಿಚಾರವಾದಿಗಳಾದ ಡಾ.ಟಿ.ನಂದಿನಿ ಜಾನಪದ ಕಲೆಯ ಅಳಿವು ಉಳಿವು ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತ ಎಲ್ಲಾ ಕಲೆಗಳ ತಾಯಿ ಬೇರು ಜನಪದ ಅಳಿವಿನಂಚಿನಲ್ಲಿದೆ. ಜಾನಪದ ಕುರಿತು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಅಧ್ಯಯನಗಳು ನಡೆಯುತ್ತಿವೆ. ಜನಪದ ಜನರ ಜೀವನಾನುಭವವನ್ನು ಹಿಡಿಯಾಗಿ ಕಟ್ಟಿಕೊಡುತ್ತದೆ ಎಂದು ನುಡಿದರು.

             ಜಾನಪದ ವಿಮರ್ಶಕ ಹುರಳಿ ಬಸವರಾಜ್ ಜಾನಪದ ಕಲಾವಿದರ ಬದುಕು-ಭವಣೆ ಕುರಿತು ಮಾತನಾಡಿ ಜನಪದರು ನಿಜವಾಗಿಯೂ ಸಾಂಸ್ಕತಿಕ ರಾಯಬಾರಿಗಳು. ಬದುಕಿನ ಅನುಭವಗಳನ್ನೇ ಜಾನಪದರು ಹಾಡಿನ ರೂಪದಲ್ಲಿ ಹಾಡುತ್ತಾರೆ. ಜಾನಪದರ ಬದುಕು ಕಷ್ಟವಾಗಿದೆ. ಕಲೆಗೆ ಬೆಲೆ ಸಿಗದೆ ಕಲಾವಿದ ತೊಳಲಾಡುತ್ತಿದ್ದಾನೆ.ಸಾಮಾಜಿಕ ಕಾರಣ, ಜಾತಿ ಮೇಲಾಟ, ತೀರ್ಪುಗಾರರ ತಾರತಮ್ಯದಿಂದ ಕಲಾವಿದ ಜಾನಪದವನ್ನು ಬದಿಗಿಡುವಂತ ಪರಿಸ್ಥಿತಿ ಉದ್ಬವವಾಗಿದೆ ಎಂದು ವಿಷಾಧಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link