ಶಿರಾ
ನಮ್ಮದು ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಜಾತಿಗಳನ್ನು ಬಿಂಬಿಸಬಾರದು. ಜಾತಿಗಳ ವಿಷ ಬೀಜ ಬಿತ್ತುವ ಕೆಲಸವಾದಲ್ಲಿ ಸಮಾಜದ ಅಭಿವೃದ್ಧಿ ಅಸಾಧ್ಯ. ಮನು ಕುಲದ ಒಳಿತಿಗಾಗಿ ಇಂತಹ ಸರ್ವ ಧರ್ಮ ಸಮ್ಮೇಳನಗಳ ಅಗತ್ಯವಿದೆ ಎಂದು ಚೆನ್ನಗಿರಿ ಹಿರೇಮಠದ ಶ್ರೀ ಶಿವ ಶಾಂತವೀರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಶಿರಾ ನಗರದಲ್ಲಿ ಹಝರತ್ ಸೈಯದ್ ಷಾ ಯುಸೂಫ್ ಪೀರ್‍ಖಾದ್ರಿ ಸಜ್ಜದಾನಶೀನ್ ಅಸ್ತಾನ್ ನೂರೆ ತಜಲ್ಲಾ ಗಂಗಾವತಿ ವತಿಯಿಂದ ಕೈಗೊಳ್ಳಲಾಗಿದ್ದ ಸರ್ವ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಜಾತೀಯ ಭಾವನೆಗಳು ನಮ್ಮೊಳಗೆ ವೈಷಮ್ಯಗಳನ್ನು ಮೂಡಿಸುತ್ತಿದ್ದು, ನಾವೆಲ್ಲಾ ಒಂದೆ ಎಂಬ ಭಾವನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ. ಹುಟ್ಟುವಾಗ ಯಾರೂ ಕೂಡ ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಳ್ಳುವುದಿಲ್ಲ ಎಂದು ಸ್ವಾಮೀಜಿ ತಿಳಿಸಿದರು.
ತಾಜ್‍ಬಾವ ಪೆನುಗೊಂಡ ಅವರು ಮಾತನಾಡಿ, ಭಾವೈಕ್ಯತೆಯು ಎಲ್ಲರ ಉಸಿರಾಗಬೇಕು. ನಮ್ಮ ಭಾವನೆಗಳನ್ನು ಎಲ್ಲರಲ್ಲೂ ಹಂಚಿಕೊಂಡಾಗ ನಮ್ಮಲ್ಲಿ ದ್ವೇಷ-ಅಸೂಯೆಗಳು ಕಣ್ಮರೆಯಾಗುತ್ತವೆ ಎಂದರು.
ಡೆವಿಡ್ ಜೋಸೆಫ್ ಅವರು ಮಾತನಾಡಿ, ಹೃದಯ ಶ್ರೀಮಂತಿಕೆ ಹಾಗೂ ದೇಶಭಕ್ತಿಯು ಮಕ್ಕಳಲ್ಲಿ ಅಂಕುರಿಸುವಂತೆ ಮಾಡುವ ಹೊಣೆಗಾರಿಕೆ ಎಲ್ಲರದ್ದಾಗಬೇಕು. ಮಕ್ಕಳನ್ನು ಸುಸಂಸ್ಕøತರನ್ನಾಗಿಸಿದಾಗ ದೇಶದ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ ಎಂದರು.
ದಾವಣಗೆರೆಯ ಶ್ರೀ ಪರಮೇಶ್ವರಸ್ವಾಮೀಜಿ, ಸಯ್ಯದ್ ರುಕ್ಕುದ್ದೀನ್ ಅಹಮದ್, ನಗರಸಭಾ ಅಧ್ಯಕ್ಷ ಅಮಾನುಲ್ಲಾಖಾನ್, ರಾಜ್ಯ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಅಲ್ಲಾಭಕಾಷ್ ಕೆ.ಪ್ಯಾರು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಸಯ್ಯದ್ ಬದ್ರುದ್ದೀನ್ ಸ್ವಾಗತಿಸಿ, ಶಿರಾ ಷಾಹೀದ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
