ಹುಳಿಯಾರು
ಏಳನೇತರಗತಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕ ವಿತರಿಸುವಂತೆ ಹಂದನಕೆರೆ ಹೋಬಳಿಯ ಪಾಪನಕೋಣ ಸರ್ಕಾರಿ ಹಿರಿಯ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಂಗನಾಥ್ ಮನವಿ ಮಾಡಿದ್ದಾರೆ.
ಮೊದಲ ಸೆಮಿಸ್ಟರ್ನಲ್ಲಿ ಎಲ್ಲಾ ವಿಷಯಗಳ ಪಠ್ಯ ಪುಸ್ತಕಗಳು ಸಕಾಲದಲ್ಲಿ ವಿತರಿಸಲಾಗಿತ್ತು. ಆದರೆ ಸೆಕೆಂಡ್ ಸೆಮಿಸ್ಟರ್ ಆರಂಭವಾಗಿ ಒಂದೂವರೆ ತಿಂಗಳು ಉರುಳಿದರೂ ಇದೂವರೆವಿಗೆ ಏಳನೇ ತರಗತಿಗೆ ಸಮಾಜ ವಿಷಯವೊಂದನ್ನು ಬಿಟ್ಟು ಇನ್ನಾವುದೇ ಪುಸ್ತಕ ವಿತರಿಸಿಲ್ಲ.
ಪಾಪನಕೋಣದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 8 ವಿದ್ಯಾರ್ಥಿಗಳು ಏಳನೇ ತರಗತಿ ಓದುತ್ತಿದ್ದು ಸಮಾಜ ವಿಷಯದ 2 ಪುಸ್ತಕವನ್ನು ಮಾತ್ರ ನೀಡಿದ್ದಾರೆ. ಪರಿಣಾಮ ಒಂದೊಂದು ದಿನ ಇಬ್ಬಿಬ್ಬರು ವಿದ್ಯಾರ್ಥಿಗಳು ಮನೆಗೆ ತೆಗೆದುಕೊಂಡು ಓದುವ ಪಾಳಿ ಪದ್ದತಿಯಿದೆ.
ಉಳಿದ ವಿಷಯಗಳ ಪುಸ್ತಕಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರೆ ಇಲಾಖೆಯಿಂದ ಸರಬರಾಜಾಗಿಲ್ಲ, ಹಾಗಾಗಿ ವಿತರಣೆಯಾಗಿಲ್ಲ. ಬೇರೆ ತಾಲ್ಲೂಕುಗಳಿಂದ ಕೆಲವಾದರೂ ಪುಸ್ತಕ ಕೊಡಿ ಎಂದು ಕೇಳಿದ್ದೇವೆ. ಅವರು ಕೊಟ್ಟ ನಂತರ ಕೆಲ ಪುಸ್ತಕ ವಿತರಿಸುವುದಾಗಿ ಹೇಳಿದ್ದಾರೆ.
ಆದರೆ ಬಿಇಓ ಅವರು ಸಮರ್ಪಕವಾಗಿ ಪುಸ್ತಕ ವಿತರಿಸುವ ಬಗ್ಗೆ ಭರವಸೆ ನೀಡದೆ ಕೆಲ ಪುಸ್ತಕ ಎನ್ನುತ್ತಿರುವುದು ಮುಂದೆಯೂ ಪಾಳಿ ಮೇಲೆ ಪುಸ್ತಕ ಕೊಡುವ ಅನುಮಾನ ಮೂಡುತ್ತಿದೆ. ಇನ್ನೆರಡ್ಮೂರು ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಬರುವುದಿದ್ದು ಅಷ್ಟರಲ್ಲಿ ಮಕ್ಕಳಿಗೆ ವಿಷಯ ಬೋಧನೆ ಮಾಡುವುದು ಕಷ್ಟಕರವಾಗುತ್ತದೆ.
ಹೀಗೆ ಪ್ರಾಥಮಿಕ ಹಂತದಲ್ಲೇ ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟರೆ ಮಕ್ಕಳ ಮುಂದಿನ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿರುವ ಅವರು, ಈ ಎಲ್ಲಾ ಸಮಸ್ಯೆಗಳಿಂದಲೇ ಇಂದು ಪೋಷಕರು ಕಾನ್ವೆಂಟ್ ಕಡೆ ಮುಖ ಮಾಡುತ್ತಿದ್ದಾರೆ. ಇನ್ನಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮನಸ್ಸಿದ್ದರೆ ತಕ್ಷಣ ಸಮರ್ಪಕವಾಗಿ ಪುಸ್ತಕ ಹಂಚುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








